ಸೋಮವಾರಪೇಟೆ,ನ.2: ಪೌತಿ-ವಾರಸಾ ಖಾತೆಗಳಿಗೆ ಸಂಬಂಧಿಸಿದಂತೆ ಖಾತೆ ಬದಲಾವಣೆಗೆ ಈ ಹಿಂದೆ ಇದ್ದ ತೊಡಕುಗಳನ್ನು ಹೋಗಲಾಡಿಸಿ, ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಈ ಆಂದೋಲನವನ್ನು ಪರಿಣಾಮಕಾರಿ ಯಾಗಿ ಯಶಸ್ವಿಗೊಳಿಸಬೇಕೆಂದು ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಕರೆ ನೀಡಿದರು.

ಇಲ್ಲಿನ ತಾಲೂಕು ಕಚೇರಿಯಲ್ಲಿ ಜಿಲ್ಲಾಡಳಿತ, ಕಂದಾಯ ಇಲಾಖೆ ವತಿಯಿಂದ ಆಯೋಜಿಸಿದ್ದ ಪೌತಿ-ವಾರಸಾ ಖಾತೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯ ವಿಧಾನ ಸಭೆಯಲ್ಲಿ ಚರ್ಚೆ ನಡೆಸಿ ಖಾತೆ ವರ್ಗಾವಣೆ ಪ್ರಕ್ರಿಯೆಯನ್ನು ಸರಳೀಕರಣ ಗೊಳಿಸಲಾಗಿದೆ. ಕೊಡಗಿನಲ್ಲಿ ಪೌತಿ ಖಾತೆ ವರ್ಗಾವಣೆಗೆ ಸಾಕಷ್ಟು ತೊಡಕುಗಳಿದ್ದು, ಇವುಗಳನ್ನು ಸರ್ಕಾರದ ಗಮನಕ್ಕೆ ತಂದ ಹಿನ್ನೆಲೆ, ನೂತನ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. ಅದರಂತೆ ಕಂದಾಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಹೆಚ್ಚಿನ ಮುತುವರ್ಜಿ ವಹಿಸಿ ರೈತರ ಕೆಲಸಗಳನ್ನು ಮಾಡಿಕೊಡಬೇಕು ಎಂದು ರಂಜನ್ ಸೂಚಿಸಿದರು.

ಖಾತೆದಾರರು ನಿಧನರಾಗಿದ್ದರೆ ಅವರ ವಾರಸುದಾರರ ಹೆಸರಿಗೆ ಖಾತೆ ಬದಲಾವಣೆ ಮಾಡಲು ನೂತನ ಮ್ಯುಟೇಷನ್ ಪ್ರಕ್ರಿಯೆಯನ್ನು ಜಾರಿಗೆ ತರಲಾಗಿದೆ. ಇದರ ಬಗ್ಗೆ ಎಲ್ಲಾ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಿದೆ. ಈಗಾಗಲೇ ಅರ್ಜಿಗಳನ್ನು ಸಲ್ಲಿಸಿರುವ ಫಲಾನುಭವಿಗಳಿಗೆ ಯೋಜನೆಯ ಉದ್ದೇಶದ ಬಗ್ಗೆ ಮಾಹಿತಿ ನೀಡಿ, ಅಗತ್ಯ ದಾಖಲಾತಿಗಳನ್ನು ಹೊಂದಿಕೊಂಡು ಸಮರೋಪಾದಿಯಲ್ಲಿ ಖಾತೆ ವರ್ಗಾವಣೆ ಮಾಡಬೇಕಿದೆ. ಇದಕ್ಕೆ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು-ಸಿಬ್ಬಂದಿಗಳು ಹೆಚ್ಚಿನ ಒತ್ತು ನೀಡುವ ಮೂಲಕ ರೈತಾಪಿ ವರ್ಗದ ಕೆಲಸಗಳನ್ನು ಮಾಡಿಕೊಡಬೇಕು ಎಂದು ಅಪ್ಪಚ್ಚುರಂಜನ್ ಸೂಚನೆ ನೀಡಿದರು.

‘ಗ್ರಾಮ ಸಹಾಯಕರು ಸಾರ್ವಜನಿಕರಿಂದ ಹಣಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ಹೆಚ್ಚಿನ ದೂರುಗಳು ಕೇಳಿಬರುತ್ತಿವೆ. ರೈತರಿಂದ ಹಣ ಪಡೆಯುವದು ಕಂಡುಬಂದರೆ ಯಾವದೇ ಮುಲಾಜಿಲ್ಲದೇ ಸಸ್ಪೆಂಡ್ ಮಾಡುತ್ತೇವೆ. ಖುದ್ದು ನಾನೇ ಬೇರೆಯವರಿಂದ ಅರ್ಜಿ ಸಲ್ಲಿಸಿ ಈ ಬಗ್ಗೆ ಪರೀಕ್ಷೆ ನಡೆಸುತ್ತೇನೆ’ ಎಂದು ಶಾಸಕರು ಎಚ್ಚರಿಕೆ ನೀಡಿದರು.

ಆಂದೋಲನದ ಬಗ್ಗೆ ಮಾಹಿತಿ ನೀಡಿದ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ಪರಿವೀಕ್ಷಕರು ಗ್ರಾಮಗಳಿಗೆ ಭೇಟಿ ನೀಡಲಿದ್ದು, ಈ ಸಂದರ್ಭ ರೈತಾಪಿ ವರ್ಗದವರು/ಸಾರ್ವಜನಿಕರು ಪೌತಿ-ವಾರಸುದಾರಿಕೆಗೆ ಸಂಬಂಧಿಸಿದ ತಮ್ಮ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಇದರೊಂದಿಗೆ ನಮೂನೆ-1ರಲ್ಲಿ ಪೌತಿ-ವಾರಸಾ ಖಾತೆ ಮಾಡಿಕೊಡುವ ಬಗ್ಗೆ ಅರ್ಜಿ, ಖಾತೆದಾರರು ಮೃತರಾಗಿರುವ ಸ.ನಂ. ಪಹಣಿ, ಮೃತರ ಮರಣ ಸಮರ್ಥನೆ ಪತ್ರ, ವಂಶವೃಕ್ಷ, ಪಡಿತರ ಮತ್ತು ಆಧಾರ್ ಕಾರ್ಡ್‍ಗಳನ್ನು ಸಲ್ಲಿಸಬೇಕು. ನಮೂನೆ-1ರ ಅರ್ಜಿಯನ್ನು ಜಿಲ್ಲಾಡಳಿತದ ವೆಬ್‍ಸೈಟ್‍ನಿಂದಲೂ ಪಡೆಯಬಹುದಾಗಿದೆ ಎಂದು ಮಾಹಿತಿ ಒದಗಿಸಿದರು.

ಸಭೆಯಲ್ಲಿದ್ದ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿ, ಮರಣ ದೃಡೀಕರಣ ಪತ್ರ ಪಡೆಯುವ ಸಂದರ್ಭ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕಿದ್ದು, ನ್ಯಾಯಾಲಯಕ್ಕೆ ವಂಶವೃಕ್ಷ ನೀಡಬೇಕಿದೆ. ಆದರೆ ವಂಶವೃಕ್ಷ ನೀಡಲು ಕಂದಾಯ ಇಲಾಖೆಯವರು ಮರಣ ದೃಡೀಕರಣ ಪತ್ರ ಕೇಳುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ್ದು, ಸಮಸ್ಯೆ ಬಗೆಹರಿಸಲು ಶಾಸಕರು ಮತ್ತು ತಹಶೀಲ್ದಾರ್ ಗಮನಹರಿಸಬೇಕು ಎಂದರು.