ಕಳೆದ 27 ವರ್ಷಗಳಿಂದ ಸ್ಥಳೀಯ ಸಂಸ್ಥೆಯಲ್ಲಿ ಜನಪ್ರತಿನಿಧಿಯಾಗಿ ಆಯ್ಕೆ ಗೊಳ್ಳುತ್ತಾ ಬರುತ್ತಿದ್ದ ಮಹಿಳೆಯೊಬ್ಬರು ಇದೀಗ ‘ಚಿಕನ್ ಸ್ಟಾಲ್’ ನಡೆಸುವ ಮೂಲಕ ಸ್ವಾವಲಂಬಿ ಬದುಕು ಕಂಡುಕೊಂಡಿದ್ದಾರೆ.
ಅಮ್ಮತ್ತಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಇಂಜಿಲಗೆರೆಯ ಶಾಂತ ದಿವಾಕರ್ ಎಂಬವರು 1993 ರಿಂದಲೇ ಅಂದರೆ ಅಂದಿನ ಮಂಡಲ ಪಂಚಾಯಿತಿ ಪ್ರಾರಂಭವಾದಾಗಿಂದಲೇ ಗ್ರಾ.ಪಂ. ಸದಸ್ಯೆಯಾಗಿದ್ದರು. ಕಳೆದ 25ಕ್ಕೂ ಅಧಿಕ ವರ್ಷಗಳಿಂದ ಇಂಜಿಲಗೆರೆ-ಪುಲಿಯೇರಿ ಗ್ರಾಮದಿಂದ ಸತತವಾಗಿ ಗ್ರಾ.ಪಂ.ಗೆ ಆಯ್ಕೆಯಾಗಿದ್ದರು. ಇದಲ್ಲದೇ ಅಮ್ಮತ್ತಿ ಗ್ರಾ.ಪಂ.ನಲ್ಲಿ 3 ಬಾರಿ ಗ್ರಾ.ಪಂ. ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಇವರ ಸೇವಾ ಅವಧಿಯಲ್ಲಿ ಗ್ರಾಮದ ಮೂಲಭೂತ ಸೌಕರ್ಯಗಳಿಗೆ ಹಾಗೂ ಗ್ರಾಮಸ್ಥರ ಬಹುತೇಕ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಶಾಂತ ಅವರು ಗ್ರಾ.ಪಂ. ಸದಸ್ಯೆಯಾದ ನಂತರ ಗ್ರಾಮದ ಜನರ ಸಮಸ್ಯೆಗಳಿಗೆ ಸಕಾಲಕ್ಕೆ ಸ್ಪಂದಿಸುವ ಮೂಲಕ ಜನ ಮನ್ನಣೆ ಪಡೆದಿದ್ದರು. ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ 56 ರ ಹರೆಯದ ಶಾಂತ ಅವರು ಇದೀಗ ಕಳೆದ 10 ತಿಂಗಳಿನಿಂದ ಇಂಜಿಲಗೆರೆ ಪಟ್ಟಣದಲ್ಲಿ ಕೋಳಿ ಮಾಂಸದ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. ಇವರೇ ಸ್ವತಃ ಕೋಳಿಗಳನ್ನು ಶುಚಿತ್ವಗೊಳಿಸಿ ಅದನ್ನು ಕತ್ತರಿಸಿ ಮಾರಾಟ ಮಾಡುತ್ತಿದ್ದಾರೆ. ಕೋಳಿಗಳನ್ನು ಮರದ ಕುಂಟೆಯಲ್ಲಿಟ್ಟುಕೊಂಡು ಕಡಿದು ಮಾಂಸ ಮಾರಾಟ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿ ಉತ್ತಮ ವ್ಯಾಪಾರವಾಗುತ್ತಿತ್ತು. ಆದರೆ ಇದೀಗ ಕೊರೊನಾ ವೈರಸ್ ಹಿನ್ನೆಲೆ ಬಡ ವರ್ಗದ ಮಂದಿಗೆ ಕೆಲಸ ಕಡಿಮೆಯಾಗಿದ್ದು, ವ್ಯಾಪಾರ ಕೊಂಚ ಕುಂಠಿತಗೊಂಡಿದೆ ಎಂದು ತಿಳಿಸಿದರು. ಆದರೂ ಕೂಡ ತಮ್ಮ ಕುಟುಂಬದ ನಿರ್ವಹಣೆಗೆ ಕೋಳಿ ಮಾಂಸ ವ್ಯಾಪಾರ ಮಾಡಲಾಗುತ್ತಿದೆ ಎಂದರು. ಈಗಿನ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ನಾಚಿಸದೇ ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿ ಬದುಕು ಕಂಡು ಕೊಳ್ಳುವ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಸಲಹೆಯನ್ನು ನೀಡಿದರು. ವಿವಿಧ ಸಂಘಟನೆಗಳಲ್ಲಿ ತೊಡಗಿಸಿ ಕೊಂಡಿರುವ ಶಾಂತ ಅವರು ಈವರೆಗೂ ಗ್ರಾ.ಪಂ. ಸದಸ್ಯೆಯಾಗಿ ಇದ್ದರು. ಆದರೆ ಇದೀಗ ಮುಂಬರುವ ಗ್ರಾ.ಪಂ.ನ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಆದರೆ ತಾನು ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದರು. ಒಟ್ಟಿನಲ್ಲಿ ಶಾಂತ ಅವರ ಈ ವೃತ್ತಿ ಇತರರಿಗೆ ಮಾದರಿಯಾಗಿದೆ. - ವಾಸು, ಸಿದ್ದಾಪುರ.