ಮಡಿಕೇರಿ, ನ. 2 : ತಿತಿಮತಿ ಭದ್ರಗೊಳ ವ್ಯಾಪ್ತಿಯಲ್ಲಿ ಹಸುವಿನ ಮೇಲೆ ಹುಲಿ ದಾಳಿ ಹೆಚ್ಚಿದ್ದು ಈ ವ್ಯಾಪ್ತಿಯ ಗ್ರಾಮಸ್ಥರು ಆತಂಕದ ಜೀವನ ನಡೆಸುತ್ತಿದ್ದಾರೆ. ನಾಗರಹೊಳೆ ಸಂರಕ್ಷಿತ ಪ್ರದೇಶದ ದೇವಮಕ್ಕಿ ಅರಣ್ಯದಲ್ಲಿ ಅಂದಾಜು 25 ಹುಲಿಗಳಿವೆ. ತಿತಿಮತಿ ಭದ್ರಗೊಳ ವ್ಯಾಪ್ತಿಯಲ್ಲಿ ಒಂದೇ ಹುಲಿರಾಯ ಕೇವಲ 4 ತಿಂಗಳುಗಳಲ್ಲಿ 12 ಹಸುಗಳನ್ನು ಬಲಿಪಡೆದಿದೆ. ಮಾಲೀಕರು ಹಸುವನ್ನು ಮೇಯಲು ಬಿಟ್ಟ ಸಂದರ್ಭಗಳಲ್ಲಿ ಹಾಗೂ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳನ್ನೂ ಹುಲಿ ಕೊಂದುಹಾಕಿದೆ. ಕಾಡು ಪ್ರಾಣಿಗಳಾದ ಜಿಂಕೆ, ಕಡವೆಗಳು ಹುಲಿಯ ಪ್ರಮಖ ಭೇಟೆಗಳಾಗಿದ್ದರೂ ಸುಲಭವಾಗಿ ದಾಳಿ ಮಾಡಬಹುದಾದ ಹಸುವನ್ನೆ ಈ ಹುಲಿ ಗುರಿಮಾಡಿಕೊಂಡಿದ್ದು (ಮೊದಲ ಪುಟದಿಂದ) ಈ ಅಭ್ಯಾಸದಿಂದ ಹೊರಬರುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಇಲ್ಲಿನ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಹಸುಗಳ ಮಾಲೀಕರಿಗೆ ಪರಿಹಾರಧನ ನೀಡುವುದರಲ್ಲಿ ಸೀಮಿತವಾಗದೆ ತಿತಿಮತಿ-ಭದ್ರಗೊಳ ವ್ಯಾಪ್ತಿಯಲ್ಲಿನ ಜನರ ನಿದ್ದೆಗೆಡಿಸುತ್ತಿರುವ ಈ ಹುಲಿಯನ್ನು ತಕ್ಷಣವೇ ಹಿಡಿದು ಸ್ಥಾಳಾಂತರಿಸುವಂತೆ ಆಗ್ರಹಿಸಿದ್ದಾರೆ. ತೋಟದ ಕಾರ್ಮಿಕರು ಕೆಲಸ ಮಾಡಲು ಹಿಂಜರಿಯುತ್ತಿದ್ದು ಕ್ಯಾಮರಾ ಮೂಲಕ ಹುಲಿಯ ಚಲನ ವಲನ ಕಲೆಹಾಕಿ ಬೋನ್ ಅಳವಡಿಸಿ ತಕ್ಷಣವೇ ಇದನ್ನು ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅ.31 ರಂದು ಕಾಣತಂಡ ಮುತ್ತಪ್ಪ ಅವರಿಗೆ ಸೇರಿದ ಹಸುವನ್ನು ಹುಲಿಯು ಕೊಂದುಹಾಕಿದೆ. ಹಸು ತೋಟದಲ್ಲಿ ಮೇಯುತ್ತಿದ್ದ ಸಂದರ್ಭ ಹುಲಿ ದಾಳಿಗೆ ಬಲಿಯಾಗಿದೆ. ಮುತ್ತಪ್ಪ ಅವರಿಗೆ ಸೇರಿದ್ದ 5 ಹಸುಗಳು ಇದೇ ಹುಲಿರಾಯನಿಗೆ ಬಲಿಯಾಗಿದೆ. ಕೇವಲ 5 ತಿಂಗಳುಗಳಲ್ಲಿ ಇವರಿಗೆ ಸೇರಿದ 5 ಹಸುಗಳು ಬಲಿಯಾಗಿರುವುದು ಆತಂಕದ ಬೆಳವಣಿಗೆಯಾಗಿದೆ. 3 ದಿನಗಳ ಹಿಂದೆ ಮೂಡಗದ್ದೆಯ ರಾಕೇಶ್ ಅವರ ಹಸು ಸಾವನ್ನಪ್ಪಿತ್ತು. 4 ದಿನಗಳ ಹಿಂದೆ ಹೆಬ್ಬಾಲೆಯ ಅರ್ಜುನ ಅವರಿಗೆ ಸೇರಿದ್ದ ಹಸುವನ್ನು ಹುಲಿ ಕೊಂದುಹಾಕಿತ್ತು. . 1 ವಾರದ ಹಿಂದೆ ಸಣ್ಣುವಂಡ ಜೀತು ಮುತ್ತಪ್ಪ ಅವರ ಹಸು ಹುಲಿ ದಾಳಿಗೆ ಬಲಿಯಾಗಿತ್ತು.