ಸೋಮವಾರಪೇಟೆ, ನ.1: ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ತಾ. 3ರಂದು (ನಾಳೆ) ಚುನಾವಣೆ ನಡೆಯಲಿದ್ದು, ಬಿಜೆಪಿಯ ನಳಿನಿ ಗಣೇಶ್ ಮತ್ತು ಪಿ.ಕೆ. ಚಂದ್ರು ನಡುವೆ ಪೈಪೋಟಿ ಏರ್ಪಟ್ಟಿದೆ.

ಸಂಸದ ಪ್ರತಾಪ್ ಸಿಂಹ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರುಗಳ ಸಮಕ್ಷಮ ತಾ. 2ರಂದು (ಇಂದು) ಅಭ್ಯರ್ಥಿಯ ಆಯ್ಕೆ ಫೈನಲ್ ಆಗಲಿದ್ದು, ಪ್ರಥಮ ಅವಧಿಗೆ ನಳಿನಿ ಗಣೇಶ್ ಹಾಗೂ ಎರಡನೇ ಅವಧಿಗೆ ಪಿ.ಕೆ. ಚಂದ್ರು ಅವರುಗಳಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.

ಈ ನಡುವೆ 4 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಆಪರೇಷನ್ ಹಸ್ತ ಮಾಡಲು ಯತ್ನ ಮುಂದುವರೆಸಿದ್ದು, ಇದು ಈಡೇರುವ ಸಾಧ್ಯತೆ ಕಡಿಮೆ ಇದೆ. ಬಿಜೆಪಿಯಿಂದ ಪ್ರಥಮ ಅವಧಿಗೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಪಿ.ಕೆ. ಚಂದ್ರು ಅವರನ್ನು ತಮ್ಮತ್ತ ಸೆಳೆಯುವ ಯತ್ನವನ್ನು ಕಾಂಗ್ರೆಸ್ ಮುಂದುವರೆಸಿದೆ.

ಆದರೆ ಈವರೆಗೆ ಪಿ.ಕೆ. ಚಂದ್ರು ಅವರು ಯಾವದೇ ತೀರ್ಮಾನಕ್ಕೆ ಬಂದಿಲ್ಲ ಎನ್ನಲಾಗಿದ್ದು, ಕ್ಷೇತ್ರದ ಶಾಸಕರು ಮತ್ತು ಬಿಜೆಪಿಯ ಮೇಲೆ ನಿಷ್ಠೆಯನ್ನು ತೋರ್ಪಡಿಸುತ್ತಿದ್ದಾರೆ. ಆದರೂ ಸಹ ನಾಮಪತ್ರ ಸಲ್ಲಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದ್ದು, ಅಂತಿಮವಾಗಿ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುತ್ತಾರೋ ಅಥವಾ ಕಾಂಗ್ರೆಸ್‍ನತ್ತ ಒಲವು ತೋರುತ್ತಾರೋ ಎಂಬದನ್ನು ಕಾದು ನೋಡಬೇಕಿದೆ.

ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಪ್ರತಿಷ್ಠೆಯ ಅಖಾಡವಾಗಿರುವ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಕೇವಲ 3 ಸ್ಥಾನಗಳನ್ನು ಗಳಿಸಿದ್ದರೂ ಮೀಸಲಾತಿ ಬಿಜೆಪಿ ಪರ ಬಂದಿದೆ. ಈ ನಡುವೆ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶುಭಾಕರ್ ಅವರು ಶಾಸಕರ ಸಮ್ಮುಖ ವಾಪಸ್ ಬಿಜೆಪಿಗೆ ಸೇರ್ಪಡೆ ಯಾಗಿದ್ದಾರೆ.

ತಾ. 3ರಂದು ಅಪರಾಹ್ನ ಪ.ಪಂ. ಸಭಾಂಗಣದಲ್ಲಿ ಚುನಾವಣೆ ನಡೆಯಲಿದ್ದು, ಈ ಹಿಂದೆ ಅಧ್ಯಕ್ಷೆ, ಉಪಾಧ್ಯಕ್ಷೆ, ಸದಸ್ಯೆಯಾಗಿ ಅನುಭವ ಹೊಂದಿರುವ ನಳಿನಿ ಗಣೇಶ್ ಅವರನ್ನು ಪ್ರಥಮ ಅವಧಿಗೆ ಅಧ್ಯಕ್ಷೆಯನ್ನಾಗಿಸಲು ಶಾಸಕರು ಮನಸ್ಸು ಮಾಡಿದ್ದಾರೆ ಎನ್ನಲಾಗಿದ್ದು, ಇದೇ ಮೊದಲ ಬಾರಿಗೆ ಗೆದ್ದಿರುವ ಪಿ.ಕೆ. ಚಂದ್ರು ಅವರನ್ನು ಎರಡನೇ ಬಾರಿಗೆ ಅಧ್ಯಕ್ಷರನ್ನಾಗಿಸುವ ಚಿಂತನೆಯನ್ನು ಶಾಸಕ ರಂಜನ್ ಹೊಂದಿದ್ದು, ತಾ. 2ರಂದು ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಗೆ ಮೀಸಲಾಗಿದ್ದು, ಕಾಂಗ್ರೆಸ್‍ನ ವೆಂಕಟೇಶ್ ಹಾಗೂ ಸಂಜೀವ ಅವರುಗಳು ಆಕಾಂಕ್ಷಿಗಳಾಗಿದ್ದಾರೆ. ಇವರಿಬ್ಬರನ್ನೂ ಹೊರತುಪಡಿಸಿ ಜೆಡಿಎಸ್‍ನಿಂದ ಗೆದ್ದಿರುವ ನಾಗರತ್ನ ಆಯ್ಕೆಯಾಗುವ ಸಾಧ್ಯತೆಯೂ ಇದೆ.

ಒಟ್ಟಾರೆ ಅತಂತ್ರ ಫಲಿತಾಂಶ ಬಂದಿರುವ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನದ ಮೀಸಲಾತಿ ಬಿಜೆಪಿ ಪರವಾಗಿ ಬಂದಿದೆ.

ಪ್ರಥಮ ಅವಧಿಯಲ್ಲಿ ಅಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿರುವ ಪಿ.ಕೆ. ಚಂದ್ರು ಅವರು ಬಿಜೆಪಿ ಹಾಗೂ ಸಂಘ ಪರಿವಾರದ ನಿಷ್ಠಾವಂತರಾಗಿದ್ದು, ನಳಿನಿ ಗಣೇಶ್ ಅವರೂ ಸಹ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.

ಈ ಹಿಂದಿನಿಂದಲೂ ಶಾಸಕ ಅಪ್ಪಚ್ಚುರಂಜನ್ ಅವರ ಬಳಗದಲ್ಲಿ ಗುರುತಿಸಿಕೊಂಡಿರುವ ಈರ್ವರೂ ಸಹ ವಿಧಾನ ಸಭಾ ಚುನಾವಣೆಯಲ್ಲಿ ಅಪ್ಪಚ್ಚುರಂಜನ್ ಪರ ಕೆಲಸ ಮಾಡಿದ್ದಾರೆ. ಮೀಸಲಾತಿಯಡಿ ಇಬ್ಬರಿಗೂ ಅಧ್ಯಕ್ಷ ಸ್ಥಾನದ ಅರ್ಹತೆಯಿದ್ದು, ಪ್ರಥಮ ಅವಧಿಯ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯುತ್ತದೆ ಎಂಬದು ನಾಳೆ ನಿರ್ಧಾರವಾಗಲಿದೆ. - ವಿಜಯ್ ಹಾನಗಲ್