ಕೊಡಗು ಜಿಲ್ಲೆಯಲ್ಲಿ 3-4 ದಶಕಗಳ ಹಿಂದೆ ಕೆಲವು ಭಾಗಗಳಲ್ಲಿ ಅರೇಬಿಕಾ ಕೆಂಟ್ ಎಂಬ ವಿಶೇಷ ತಳಿಯ ಕಾಫಿಯನ್ನು ಬೆಳೆಯಲಾಗುತ್ತಿತ್ತು. ಇತ್ತೀಚಿಗಿನ ವರ್ಷಗಳಲ್ಲಿ ಈ ವಿಧದ ಕಾಫಿ ಕಾಣ ಸಿಗುವುದೇ ಇಲ್ಲ. ಕೊಡಗಿನಲ್ಲಿ ಈ ಹಿಂದೆ ಬೆಳೆಯುತ್ತಿದ್ದ ಅರೇಬಿಕಾ ಕಾಫಿ ವರ್ಷದಿಂದ ವರ್ಷಕ್ಕೆ ಬೆಳೆಗಾರರಿಗೆ ನಿರ್ವಹಣೆ ಮಾಡಲಾಗದೇ ಶೇ. 75 ರಷ್ಟು ಕಡಿಮೆಯಾಗಿದೆಯೆ. ಅರೇಬಿಕಾ ಕಾಫಿಯನ್ನು ಕೆಲವೇ ಕಂಪೆನಿ ತೋಟಗಳು ಮತ್ತು ಬೆರಳೆಣಿಕೆಯ ದೊಡ್ಡ ಬೆಳೆಗಾರರು ಮಾತ್ರ ಬೆಳೆಯುವಂತಾಗಿದೆ. ಸಣ್ಣ ಬೆಳೆಗಾರರು ಅರೇಬಿಕಾ ಕಾಫಿ ಕೃಷಿಯಿಂದ ವಿಮುಖರಾಗಲು ಕಾರಣ ಎಂದರೆ, ಸರಕಾರಗಳಿಂದ ಯಾವುದೇ ರೀತಿಯ ಸಹಾಯ ದೊರಕದೇ ಇರುವುದು. ಕಾಫಿ ಮಂಡಳಿಯ ಅನೇಕ ಅನುದಾನಗಳು ದೊಡ್ಡ ಬೆಳೆಗಾರರಿಗಷ್ಟೇ ಸೀಮಿತವಾಗಿದೆ. ನೂರಾರು ಕಾನೂನು ಪ್ರಕ್ರಿಯೆಗಳನ್ನು ಮುಂದೊಡ್ಡಿ ಸಣ್ಣ ಬೆಳೆಗಾರರಿಗೆ ಯಾವುದೇ ರೀತಿಯ ಸಹಾಯಹಸ್ತ ನೀಡುವಲ್ಲಿ ಕಾಫಿ ಮಂಡಳಿ ವಿಫಲವಾಗುತ್ತಿದೆ.

ಆಗಿಂದಾಗ್ಗೆ ರಾಜಕೀಯ ಧುರೀಣರು ಕೊಡಗಿನ ಅನೇಕ ಸಭೆಗಳಲ್ಲಿ ಕಾಫಿ ಬೆಳೆಗಾರರ ಸಂಕಷ್ಟಗಳ ಬಗ್ಗೆ ಚರ್ಚೆ ನಡೆದಾಗ ಸ್ವಲ್ಪವೂ ವಿಷಯಗಳ ಬಗ್ಗೆ ಯೋಚಿಸದೇ ಕೊಡುವ ಪುಕ್ಕಟೆ ಸಲಹೆ ಏನೆಂದರೆ “ಬೆಳೆಗಾರರೇ ನೀವು ಕಾಫಿ ಬೆಳೆಯಲ್ಲಿ ಲಾಭ ಬಾರದಿದ್ದರೆ ಪರ್ಯಾಯ ಬೆಳೆಯ ಮಾರ್ಗ ಯೋಚಿಸಿ”. ಇದು ಭಾಷಣ ಬಿಗಿದಷ್ಟು ಸುಲಭ ಅಲ್ಲ. ಸಣ್ಣ ಬೆಳೆಗಾರ ತನಗಿರುವ ಸಣ್ಣ ಸಣ್ಣ ಹಿಡುವಳಿಗಳಲ್ಲಿ ಪೂರ್ತಿಯಾಗಿ ಕಾಫಿ ಗಿಡಗಳನ್ನು ಬೆಳೆಸಿರುತ್ತಾನೆ. ಬಿದಿರು ಬೆಳೆದರೆ ಆನೆ ಹಾವಳಿ. ಏಲಕ್ಕಿ ಬೆಳೆದಾಗ ನೀರಿನ ಅಭಾವ-ಧಾರಣೆ ಕುಸಿತ-ಶುಂಠಿ ಮತ್ತು ಅರಶಿನ ಬೆಳೆಗಳ ನಿರ್ವಹಣೆ, ಧಾರಣೆಗಳ ವೈಪರೀತ್ಯ-ಹವಾಮಾನ ವೈಪರೀತ್ಯಗಳಿಂದ ಸಾಧ್ಯವೇ ಇಲ್ಲ. ಪರ್ಯಾಯ ಬೆಳೆ ಬೆಳೆಯಿರಿ ಎಂದು ಭಾಷಣ ಬಿಗಿಯುವ ಧುರೀಣರಿಗೆ ರೈತರ ಕಷ್ಟ/ಜೀವನ ನಿರ್ವಹಣೆಯ ಸಂಕಷ್ಟಗಳು ಸ್ವಲ್ಪವೂ ಅರ್ಥ ಆಗುವುದೇ ಇಲ್ಲ.

ಈ ಪುಟ್ಟ ಜಿಲ್ಲೆಯಲ್ಲಿ ರೈತಾಪಿ ವರ್ಗದವರು ಎಲ್ಲಾ ಜಾತಿ-ಧರ್ಮಗಳನ್ನೂ ಮೀರಿ ಬಾಳಿ ಬದುಕನ್ನು ಕಟ್ಟಿಕೊಂಡವರು. ಇತ್ತೀಚೆಗಿನ ವರ್ಷಗಳಲ್ಲಿ ಧರ್ಮ ರಾಜಕಾರಣ-ಪಕ್ಷ ರಾಜಕಾರಣ, ರಾಜಕಾರಣಗಳು ನುಸುಳಿ ನಮ್ಮ ನಮ್ಮೊಳಗೆ ದ್ವೇಷ ಸಾಧನೆಗೆ ಹೊರಟ ನಿದರ್ಶನಗಳು ಕಾಣಬರುತ್ತಿವೆ. ಈ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟು ನಮ್ಮೊಳಗೆ ಘರ್ಷಣೆಗೆ ಅವಕಾಶ ಮಾಡಿಕೊಡುವುದರ ಬದಲು ನಾವೆಲ್ಲ ಈ ಪುಟ್ಟ ಜಿಲ್ಲೆಯ ಹಿಂದಿನ ನೆಮ್ಮದಿಯ ಜೀವನವನ್ನು ಕಂಡುಕೊಳ್ಳಲು ಶ್ರಮಿಸಬೇಕಾಗಿದೆ. ಜೀವನ ಸಾಗಿಸುವುದೇ ಬಹಳ ದುಸ್ತರ ಎಂಬ ಈ ಕಾಲಘಟ್ಟದಲ್ಲಿ ಜಾತಿ ಘರ್ಷಣೆ- ರಾಜಕೀಯ ಕೆಸರೆರಚಾಟ-ಧರ್ಮಗಳ ಮಧ್ಯೆ ಘರ್ಷಣೆ ಇವುಗಳನ್ನು ದೂರವಿರಿಸಿ ಕೊಡಗಿನ ಕಾಫಿ ಬೆಳೆಗಾರರು/ರೈತರು/ ವ್ಯಾಪಾರೋದ್ಯಮಿಗಳು- ರಾಜಕೀಯ ಧುರೀಣರು ಎಲ್ಲರೂ ಈ ಜಿಲ್ಲೆಯ ಅಭಿವೃದ್ಧಿಗಾಗಿ ಆಡಳಿತ ನಡೆಸುವ ಮಂದಿಯನ್ನು ಆಗಿಂದಾಗ್ಗೆ ಎಚ್ಚರಿಸಿ ಸರ್ವ ಜನಾಂಗಗಳ ಏಳಿಗೆಗೆ ಶ್ರಮಿಸುವ ಅನಿವಾರ್ಯತೆ ಇದೆ. ಮುಖ್ಯ ಬೆಳೆಯಾದ ಕಾಫಿ/ಕಾಳುಮೆಣಸು ಬೆಳೆಯುವವರ ಏಳಿಗೆಯಾದರೆ ಮಾತ್ರ ಈ ಜಿಲ್ಲೆಯಲ್ಲಿ ವ್ಯಾಪಾರ ವ್ಯವಹಾರ-ಪ್ರವಾಸೋದ್ಯಮ- ಇನ್ನಿತರ ವಹಿವಾಟುಗಳಿಗೆ ಭವಿಷ್ಯವಿದೆ. ಇಲ್ಲದಿದ್ದರೆ ನಮ್ಮ ಜಿಲ್ಲೆಯ ಎಲ್ಲರಿಗೂ ಮುಂದಿನ ದಿನಗಳು ಕಷ್ಟಕರವಾಗಿ ಪರಿಣಮಿಸುವುದರಲ್ಲಿ ಯಾವುದೆ ಸಂಶಯಗಳಿಲ್ಲ. ಎಲ್ಲರೂ ಎಚ್ಚೆತ್ತುಕೊಳ್ಳಲೇಬೇಕಾದ ದಿನಗಳು ಈಗ ಬಂದಿದೆ.

(ಮುಗಿಯಿತು)

- ಹೆಚ್.ಎಸ್. ತಿಮ್ಮಪ್ಪಯ್ಯ, ಮೊ: 8971809501