ಪೆÇನ್ನಂಪೇಟೆ, ನ. 1: ಕಳೆದ ಮಳೆಗಾಲದಲ್ಲಿ ಸುರಿದ ಭಾರೀ ಮಳೆಯಿಂದಾಗಿ ರೈತರು ಬೆಳೆದ ಬೆಳೆಗೆ ತೀವ್ರ ಹಾನಿಯಾಗಿದೆ. ಎಷ್ಟೇ ಪರಿಹಾರ ನೀಡಿದರೂ ನಷ್ಟ ಸರಿಪಡಿಸಲು ಅಸಾಧ್ಯವಾದ ಸ್ಥಿತಿಯಲ್ಲಿರುವ ರೈತರಿಗೆ ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ಸರಕಾರ ಅನ್ಯಾಯ ಮಾಡಿದೆ. ಇದಕ್ಕೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ರುವ ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ಆಪಟ್ಟೀರ ಎಸ್. ಟಾಟು ಮೊಣ್ಣಪ್ಪ, ರೈತರಿಗೆ ಅನ್ಯಾಯವೆಸಗಿದ ಅಧಿಕಾರಿಗಳ ಬೇಜಾವಾ ಬ್ದಾರಿಯನ್ನು ಪ್ರಶ್ನಿಸುವಲ್ಲಿ ಸಂಸದರು ಸೇರಿದಂತೆ ಕೊಡಗಿನ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಕಳೆದ ಮಳೆಗಾಲದಲ್ಲಿ ಸುರಿದ ಭಾರೀ ಮಳೆಯಿಂದಾಗಿ ರೈತರು ಬೆಳೆದ ಭತ್ತ, ಕಾಫಿ, ಕರಿಮೆಣಸು, ಅಡಿಕೆ ಮೊದಲಾದ ಬೆಳೆಗಳಿಗೆ ತೀವ್ರ ಹಾನಿಯುಂಟಾಗಿದೆ. ಕೆಲವೆಡೆ ಭತ್ತದ ಬೆಳೆಗೆ ಈಗಾಗಲೇ ಕಾಯಿಲೆ ಕಾಣಿಸಿಕೊಂಡಿದೆ. ಕಾಫಿ ಉದುರತೊಡಗಿದೆ. ಕರಿಮೆಣಸು ಬಳ್ಳಿಗಳು ಕಾಯಿಲೆಗೆ ತುತ್ತ್ತಾಗುತ್ತಿದೆ. ಕೊಯ್ಲಿಗೆ ಬಂದ ಅಡಿಕೆ ಉದುರಿ ನೆಲಕ್ಕಚ್ಚಿರುವದು ಕಂಡುಬರುತ್ತಿದೆ. ಇದು ರೈತರ ಆರ್ಥಿಕ ವ್ಯವಸ್ಥೆಗೆ ತೀವ್ರ ಪೆಟ್ಟುಬಿದ್ದಂತಾಗಿದೆ. ಮಳೆ ಹಾನಿಯಿಂದಾಗಿ ರೈತರಿಗೆ ಉಂಟಾದ ಆರ್ಥಿಕ ನಷ್ಟವನ್ನು ಅಂದಾಜಿಸಿ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕಾದ ತೋಟಗಾರಿಕೆ ಇಲಾಖೆ ಮತ್ತು ಕಾಫಿ ಮಂಡಳಿ ತನ್ನ ಕರ್ತವ್ಯವನ್ನು ಸರಿಯಾಗಿ ಪಾಲಿಸಿಲ್ಲ. ಇವರಿಗೆ ರೈತರ ಬಗ್ಗೆ ಯಾವುದೇ ಕಾಳಜಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೈತರಿಗೆ ಜನವಿರೋಧಿ ಅಧಿಕಾರಿಗಳಿಂದ ನಿರಂತರವಾಗಿ ಅನ್ಯಾಯವಾಗುತ್ತಿದ್ದರೂ ಇದನ್ನು ಪ್ರಶ್ನಿಸಬೇಕಾದ ಜನಪ್ರತಿನಿಧಿಗಳು ಜನರ ಹಿತವನ್ನು ಮರೆತು ಮೌನವಹಿಸಿರುವ ಹಿಂದಿನ ರಹಸ್ಯ ಕೊಡಗಿನ ಜನತೆಗೆ ತಿಳಿಯಬೇಕಾಗಿದೆ. ಬೆಳೆ ಹಾನಿ ಕುರಿತಂತೆ ಸೂಕ್ತ ಪರಿಹಾರ ವಿತರಣೆಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ವಿಶೇಷ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳಬೇಕಾದ ಸಂಸದ ಪ್ರತಾಪ್ ಸಿಂಹ ಅವರು ಕೊಡಗಿನ ಜನರನ್ನು ಮರೆತಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.