ಕುಶಾಲನಗರ, ನ. 1: ಕುಶಾಲನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಬಡಾವಣೆಗಳ ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಕಳೆದ ಒಂದು ವರ್ಷದ ಅವಧಿಯಲ್ಲಿ ಮೂರು ಕೋಟಿ ರೂ ವೆಚ್ಚದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಕುಶಾಲನಗರ ಪಪಂ ಮುಖ್ಯಾಧಿಕಾರಿ ಸುಜಯ್ಕುಮಾರ್ ಮಾಹಿತಿ ನೀಡಿದ್ದಾರೆ.ಅವರು ಈ ಬಗ್ಗೆ ‘ಶಕ್ತಿ’ಗೆ ವಿವರ ನೀಡಿದ್ದು ಕುಶಾಲನಗರ ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿ 70 ಲಕ್ಷ ರೂಗಳ ವೆಚ್ಚದಲ್ಲಿ ನಡೆಯುತ್ತಿದ್ದು ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಇದರೊಂದಿಗೆ ಕುಶಾಲನಗರ ಬಡಾವಣೆಗಳ ರಸ್ತೆಗಳನ್ನು ಸರ್ವಋತು ರಸ್ತೆಗಳನ್ನಾಗಿ ನಿರ್ಮಾಣ ಮಾಡಲಾಗಿದ್ದು ಬಹುತೇಕ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ಪಟ್ಟಣದ ಹಳೆಯ ಮಾರ್ಕೆಟ್ ಅನ್ನು ರೂ 50 ಲಕ್ಷ ವೆಚ್ಚದಲ್ಲಿ ನವೀಕರಿಸಲಾಗಿದ್ದು ರಸ್ತೆ ಮತ್ತು ಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಸಕ್ತ ವಾರದ ಸಂತೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಿಸಲಾಗಿದ್ದು ಪಟ್ಟಣ ಪಂಚಾಯ್ತಿಗೆ ಸೇರಿರುವ ಅಂದಾಜು 5 ಎಕರೆ ಪ್ರದೇಶದ ಮಾರುಕಟ್ಟೆ ಆವರಣದಲ್ಲಿ ವಿದ್ಯುತ್ ತಂತಿ ಹಾದು ಹೋಗದ ಜಾಗದಲ್ಲಿ ನೂತನ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಚಿಂತನೆ ಹರಿಸಲಾಗಿದೆ ಎಂದು ತಿಳಿಸಿದ್ದಾರೆ. ಜಾಗವನ್ನು ಸಂಪೂರ್ಣ ಆವರಣ ಬೇಲಿಯೊಂದಿಗೆ (ಮೊದಲ ಪುಟದಿಂದ) ಸಂರಕ್ಷಿಸಲಾಗಿದ್ದು ಯಾವುದೇ ರೀತಿಯ ಒತ್ತುವರಿ ಮಾಡದಂತೆ ಎಚ್ಚರವಹಿಸಲಾಗಿದೆ ಎಂದು ತಿಳಿಸಿರುವ ಸುಜಯ್ಕುಮಾರ್, ಉಳಿದಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ವರ್ತಕರು ಮತ್ತು ಗ್ರಾಹಕರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಕುಶಾಲನಗರ ರಸೂಲ್ ಬಡಾವಣೆ, ಮಾರ್ಕೆಟ್ ರಸ್ತೆ, ಸಿಂಗಾರಮ್ಮ ಬಡಾವಣೆ, ಬಾಪೂಜಿ ಬಡಾವಣೆ, ಬಸಪ್ಪ ಬಡಾವಣೆ, ಓಂಕಾರ್ ಬಡಾವಣೆ, ಗುಂಡುರಾವ್ ಬಡಾವಣೆ ಸೇರಿದಂತೆ ಅಂಬೇಡ್ಕರ್ ಕಾಲನಿ ಮತ್ತು ಕಾಳಮ್ಮ ಕಾಲನಿ ರಸ್ತೆ ಅಭಿವೃದ್ಧಿ ಕೆಲವೆಡೆ ಚರಂಡಿ ಕಾಮಗಾರಿ ನಡೆಸಲಾಗಿದೆ ಎಂದು ವಿವರಿಸಿದ್ದಾರೆ.
ಪಟ್ಟಣದಲ್ಲಿ ಹಾದುಹೋಗುವ ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿಯ ಆಂಜನೇಯ ದೇವಾಲಯ ಬಳಿಯಿಂದ ಪೆಟ್ರೋಲ್ ಬಂಕ್ ತನಕ ರಸ್ತೆ ಅಗಲೀಕರಣ ಮಾಡುವುದರೊಂದಿಗೆ ಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಾಮಗಾರಿಗಳ ವಿವರ ನೀಡಿದ ಸುಜಯ್ಕುಮಾರ್, ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ರಥಬೀದಿಯಿಂದ ಆಂಜನೇಯ ದೇವಾಲಯ ತನಕ ರಸ್ತೆಯ ಎರಡೂ ಬದಿಗಳಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ಕಾಲುದಾರಿ ನಿರ್ಮಿಸಲಾಗಿದೆ. ಇನ್ನೂ ಹಲವು ಕ್ರಿಯಾಯೋಜನೆಗಳು ಪಟ್ಟಣದ ಅಭಿವೃದ್ಧಿ ನಿಟ್ಟಿನಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಪಟ್ಟಣದ ಸ್ವಚ್ಛತೆಗಾಗಿ ನಿತ್ಯ ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ಕಾರ್ಯ ಯಶಸ್ವಿಯಾಗುತ್ತಿದ್ದು ಸ್ವಚ್ಛ ಕುಶಾಲನಗರ ನಿರ್ಮಾಣದ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದಿರುವ ಪ.ಪಂ. ಆರೋಗ್ಯಾಧಿಕಾರಿ ಉದಯಕುಮಾರ್, ಬಡಾವಣೆ ಮತ್ತು ಮುಖ್ಯರಸ್ತೆ ಬದಿಯಲ್ಲಿರುವ ಕೆಲವು ವರ್ತಕರು ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ಚೆಲ್ಲುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಪಂಚಾಯ್ತಿ ವತಿಯಿಂದ ಎಚ್ಚರಿಕೆ ಫಲಕ ಅಳವಡಿಸುವುದರೊಂದಿಗೆ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುವುದು. ಪಟ್ಟಣದ ಹೆದ್ದಾರಿ ಬದಿಯಲ್ಲಿ, ಬೈಪಾಸ್ ರಸ್ತೆ, ಮಾರುಕಟ್ಟೆ ರಸ್ತೆ ಸೇರಿದಂತೆ ಆಯ್ದ ಕೆಲವು ಭಾಗಗಳಲ್ಲಿ ಕಸ ಎಸೆದು ಹೋಗುತ್ತಿರುವ ಜನರ ಮೇಲೆ ನಿಗಾವಹಿಸಲು ಸಿಸಿ ಕ್ಯಾಮೆರ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ. ಇದರೊಂದಿಗೆ ಸಂಜೆ ವೇಳೆಯಲ್ಲಿಯೂ ಮನೆಮನೆಯಿಂದ ಕಸ ಸಂಗ್ರಹಿಸಲು ವಾಹನಗಳೊಂದಿಗೆ ಪಂಚಾಯ್ತಿ ಕಾರ್ಮಿಕರು ತೆರಳುವ ಬಗ್ಗೆ ಚಿಂತನೆ ಹರಿಸಲಾಗಿದೆ ಎಂದು ಉದಯಕುಮಾರ್ ತಿಳಿಸಿದ್ದಾರೆ.
ಪಟ್ಟಣದ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿಗೆ ನೇರವಾಗಿ ಕಲುಷಿತ ಹರಿಯದಂತೆ ತ್ಯಾಜ್ಯ ಶುದ್ಧೀಕರಣ ಘಟಕ ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮೈಸೂರು ರಸ್ತೆಯ ಕೊಪ್ಪ ಗೇಟ್ ಬಳಿ, ದಂಡಿನಪೇಟೆ, ಮಾರುಕಟ್ಟೆ ಮತ್ತು ಬೈಚನಹಳ್ಳಿ ವ್ಯಾಪ್ತಿಯಲ್ಲಿ ಘಟಕಗಳು ನಿರ್ಮಾಣವಾಗಲಿವೆ ಎಂದು ತಿಳಿಸಿದ್ದಾರೆ.
ನದಿಯಲ್ಲಿ ಬಟ್ಟೆ ಒಗೆಯುವುದು, ನದಿಗೆ ತ್ಯಾಜ್ಯ ಎಸೆಯುವುದು ತಪ್ಪಿಸಲು ಎಚ್ಚರಿಕೆ ಫಲಕಗಳನ್ನು ಅಳವಡಿಸುವ ಬಗ್ಗೆ ಕೂಡಲೆ ಕ್ರಮಕೈಗೊಳ್ಳಲಾಗುವುದು. ಈ ಮೂಲಕ ಸ್ವಚ್ಛ ಕುಶಾಲನಗರದೊಂದಿಗೆ ಸ್ವಚ್ಛ ಕಾವೇರಿ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ನಾಗರಿಕರು ಈ ಸಂಬಂಧ ಸಹಕರಿಸುವಂತೆ ಅವರು ಪತ್ರಿಕೆ ಮೂಲಕ ಕೋರಿದ್ದಾರೆ.
ಕಳೆದ ಎರಡು ವರ್ಷಗಳಿಂದ ಪಟ್ಟಣ ಪಂಚಾಯ್ತಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಾಲೂಕು ತಹಶೀಲ್ದಾರ್ ಗೋವಿಂದರಾಜು ಮತ್ತು ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಸಲಹೆಯೊಂದಿಗೆ ಪಟ್ಟಣದ ಅಭಿವೃದ್ಧಿಗೆ ಎಲ್ಲಾ ರೀತಿಯ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಾಧಿಕಾರಿ ಸುಜಯ್ಕುಮಾರ್ ತಿಳಿಸಿದ್ದಾರೆ.