ತಂತ್ರಜ್ಞಾನದ ಮೂಲಕ ಕನ್ನಡವನ್ನು ಉಳಿಸಿ
ಬೆಂಗಳೂರು, ನ. 1: ರಾಜ್ಯದೆಲ್ಲೆಡೆ 65ನೇ ಕನ್ನಡ ರಾಜ್ಯೋತ್ಸವವನ್ನು ಸರಳ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಧ್ವಜಾರೋಹಣ ಮಾಡಿ, ಕನ್ನಡ ಉಳಿವಿಗಾಗಿ ಹೆಚ್ಚೆಚ್ಚು ಕನ್ನಡ ಭಾಷೆಯನ್ನು ಬಳಸಬೇಕು. ತಂತ್ರಜ್ಞಾನದ ಮೂಲಕ ಕನ್ನಡವನ್ನು ಉಳಿಸಿ, ಬೆಳೆಸೋಣ ಎಂದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕನ್ನಡದಲ್ಲಿಯೇ ಇಂದು ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ. ಕರ್ನಾಟಕದ ಪರವಾಗಿ ಪ್ರಧಾನಮಂತ್ರಿಗಳಿಗೆ ಧನ್ಯವಾದ ಹೇಳುತ್ತೇನೆ. ಇಂದು ನಾವು 65ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ. ಮುಂದಿನ ಒಂದು ವರ್ಷವನ್ನು ಕನ್ನಡ ಕಾಯಕ ವರ್ಷ ಎಂದು ಕಾರ್ಯಕ್ರಮ ರೂಪಿಸಲಾಗುತ್ತದೆ. ಇದಕ್ಕಾಗಿ ರೂಪುರೇಷೆಗಳನ್ನು ರೂಪಿಸಲಾಗುವುದು ಎಂದು ಹೇಳಿದರು.
ಹಿಜ್ಬುಲ್ ಮುಖ್ಯ ಕಮಾಂಡರ್ ಬಲಿ
ಶ್ರೀನಗರ, ನ. 1: ರಂಗ್ರೆತ್ ಪ್ರದೇಶದಲ್ಲಿ ಭಾನುವಾರ ನಡೆದ ಗುಂಡಿನ ಚಕಮಕಿಯಲ್ಲಿ ಹಿಜ್ಬುಲ್ ಮುಹಾಜಿದ್ದೀನ್ ಮುಖ್ಯ ಕಮಾಂಡರ್ ಡಾ. ಸೈಫುಲ್ಲಾ ಸಾವನ್ನಪ್ಪಿದ್ದಾನೆ. ಖಚಿತ ಮಾಹಿತಿಯ ಮೇರೆಗೆ ಬೆಳಿಗ್ಗೆ ಪ್ರಾರಂಭಿಸ ಲಾದ ಕಾರ್ಯಾಚರಣೆಯಲ್ಲಿ ಒಬ್ಬ ಭಯೋತ್ಪಾದಕನನ್ನು ಸಜೀವವಾಗಿ ಸೆರೆಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಂಟಿ ಕಾರ್ಯಾಚರಣೆಯನ್ನು ಪೊಲೀಸರು, ಸಿಆರ್ಪಿಎಫ್ ನಡೆಸಿದ್ದು ನಂತರದಲ್ಲಿ ಇದಕ್ಕೆ ಸೇನಾಪಡೆಯ ಸದಸ್ಯರೂ ಸೇರಿದ್ದರು. ಎನ್ಕೌಂಟರ್ ಸಮಯದಲ್ಲಿ ಒಬ್ಬ ಭಯೋತ್ಪಾದಕ ನನ್ನು ಕೊಲ್ಲಲಾಯಿತು ಮತ್ತು ಇನ್ನೊಬ್ಬನನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ ಎಂದು ಕುಮಾರ್ ಹೇಳಿದರು.
ಕದನ ವಿರಾಮ ಉಲ್ಲಂಘಿಸಿದ ಪಾಕ್
ಪೂಂಚ್, ನ. 1: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಭಾರತೀಯ ಸೇನೆಯನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಪೂಂಚ್ ಜಿಲ್ಲೆಯ ಶಾಹ್ಪುರ್, ಕಿರ್ಣ್, ಕ್ವಾಸ್ಬಾ ಸೆಕ್ಟರ್ ಬಳಿ ಭಾರತೀಯ ಸೇನೆಯನ್ನು ಗುರಿಯಾಗಿರಿಸಿಕೊಂಡು ಗುಂಡಿನ ದಾಳಿ ನಡೆಸಿದೆ ಎಂದು ವರದಿಗಳು ತಿಳಿಸಿವೆ. ಗಡಿಯಲ್ಲಿ ಭಾರತೀಯ ಸೇನೆ ಮೇಲೆ ಪಾಕಿಸ್ತಾನ ಶೆಲ್ ಹಾಗೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಖವಾಡ ಕಳಚಿ ಬಿದ್ದಿದೆ ಎಂದ ಪ್ರಧಾನಿ
ನವದೆಹಲಿ, ನ. 1: ಪ್ರಧಾನಮಂತ್ರಿ ನರೇಂದ್ರ ಮೋದಿ ಸತತ ಎರಡನೇ ದಿನವೂ ಕಳೆದ ವರ್ಷ ಫೆಬ್ರವರಿಯಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ವಿಷಯ ಎತ್ತಿದ್ದಾರೆ. ಇಂದು ಬಿಹಾರದ ಛಪ್ರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ವದಂತಿ ಹಬ್ಬಿಸುತ್ತಿರುವವರ ಮುಖವಾಡ ಕಳಚಿ ಬಿದ್ದಿದೆ ಎಂದಿದ್ದಾರೆ. ಸೇನಾಪಡೆಯಲ್ಲಿ ಸೇವೆಯಲ್ಲಿರುವ ಈ ಮಣ್ಣಿನ ಯೋಧರ ಧೈರ್ಯ, ಸಾಹಸಗಳನ್ನು ಪ್ರಶ್ನೆ ಮಾಡುತ್ತಿರುವವರು ಇಂದು ನಿಮ್ಮ ಬಳಿ ಬಂದು ಮತ ಕೇಳುತ್ತಿದ್ದಾರೆ ಎಂದು ಟೀಕಿಸಿದರು. ಕೇವಲ ಎರಡು ಮೂರು ದಿನಗಳ ಹಿಂದೆ ನಮ್ಮ ನೆರೆ ದೇಶ ಪುಲ್ವಾಮಾ ದಾಳಿಯ ಸತ್ಯ ಒಪ್ಪಿಕೊಂಡಿತು. ನಮ್ಮ ಮಣ್ಣಿನ ಮಕ್ಕಳ ಧೈರ್ಯ, ಸಾಹಸವನ್ನು ಬಿಹಾರಿಗಳು ಸೇರಿದಂತೆ ಯಾರೂ ಪ್ರಶ್ನೆ ಮಾಡಿರಲಿಲ್ಲ. ಆದರೆ ಅಧಿಕಾರದ ರಾಜಕೀಯ ಮತ್ತು ಸ್ವಾರ್ಥ ಸಾಧಿಸುವವರು ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಿದರು ಎಂದರು.
ಮರಾಠಿ ಮಾತನಾಡುವ ಪ್ರದೇಶ ಮಹಾರಾಷ್ಟ್ರಕ್ಕೆ
ಔರಂಗಾಬಾದ್, ನ. 1: ಮರಾಠಿ ಮಾತನಾಡುವ ಕರ್ನಾಟಕ ಗಡಿ ಪ್ರದೇಶಗಳು ಶೀಘ್ರದಲ್ಲೇ ಮಹಾರಾಷ್ಟ್ರಕ್ಕೆ ಸೇರಲಿವೆ ಎಂದು ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಹೇಳಿದ್ದಾರೆ. ಭಾಷಾ ಸೂಕ್ಷ್ಮ ವಿಚಾರದ ಸಂಬಂಧ ಮಾತನಾಡಿದ ಮಹಾರಾಷ್ಟ್ರ ಎನ್ಸಿಪಿ ಅಧ್ಯಕ್ಷ ಪಾಟೀಲ್, ಮರಾಠಿ ಸಹೋದರರನ್ನು ಬೆಂಬಲಿಸಿ ಎನ್ಸಿಪಿ ಇಂದು ಕರಾಳ ದಿನ ಆಚರಿಸುತ್ತಿದೆ. ಈ ವೇಳೆ ಪ್ರತಿಭಟನೆಯ ಕುರುಹಾಗಿ ಕಪ್ಪು ರಿಬ್ಬನ್ ಕಟ್ಟಿಕೊಳ್ಳಲಾಗಿದೆ ಎಂದು ಹೇಳಿದರು. ಗಡಿ ಪ್ರದೇಶಗಳಲ್ಲಿ ಸಮಸ್ಯೆಯಲ್ಲಿರುವ ಜನರ ಬೆಂಬಲಕ್ಕೆ ಇಡೀ ಮಹಾರಾಷ್ಟ್ರ ಜನರಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬ್ರಿಟನ್ನಲ್ಲಿ ಮತ್ತೆ ಲಾಕ್ಡೌನ್
ಲಂಡನ್, ನ. 1: ಕೊರೊನಾ ಸೋಂಕಿನ ಎರಡನೇ ಅಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಗಮನಾರ್ಹ ಏರಿಕೆಯಾಗಿರುವ ಹಿನ್ನೆಲೆ ಬ್ರಿಟನ್ ಮತ್ತೆ ಲಾಕ್ಡೌನ್ ವಿಧಿಸಿದೆ. ಲಾಕ್ಡೌನ್ ತಾ. 5 ರಿಂದ ನಾಲ್ಕು ವಾರಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಆದರೆ, ದೇಶದ ಶಿಕ್ಷಣ ಸಂಸ್ಥೆಗಳಿಗೆ ಲಾಕ್ಡೌನ್ನಿಂದ ವಿನಾಯಿತಿ ಕಲ್ಪಿಸಿದೆ. ಕೊರೊನಾ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿರುವ ಕಾರಣ ಸೋಂಕು ಪ್ರಸರಣ ತಡೆಯಲು ಅನ್ಯ ಮಾರ್ಗವಿಲ್ಲದೆ ಲಾಕ್ಡೌನ್ ವಿಧಿಸುತ್ತಿರುವುದಾಗಿ ಎಂದು ಪ್ರಧಾನಿ ಸಮರ್ಥಿಸಿ ಕೊಂಡಿದ್ದಾರೆ. ಕೊರೊನಾದ ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ವೈದ್ಯಕೀಯ ತಜ್ಞರ ಎಚ್ಚರಿಕೆ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.
ನಟ ದರ್ಶನ್ ವಿರುದ್ಧ ಪ್ರಕರಣ
ಬೆಂಗಳೂರು, ನ. 1: ಆರ್ಆರ್ ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಿರ್ಮಾಪಕ ಮುನಿರತ್ನ ಪರವಾಗಿ ಪ್ರಚಾರ ನಡೆಸಿದ್ದ ನಟ ದರ್ಶನ್ ವಿರುದ್ಧ ಪ್ರಕರಣ ದಾಖಲಾಗಿದೆ. ನಗರದ ರಾಜರಾಜೇಶ್ವರಿ ನಗರದಲ್ಲಿ ನಟ ದರ್ಶನ್ ಬಿಜೆಪಿ ಅಭ್ಯರ್ಥಿ ನಿರ್ಮಾಪಕ ಮುನಿರತ್ನ ಪರವಾಗಿ ಪ್ರಚಾರ ನಡೆಸಿದ್ದರು. ಈ ವೇಳೆ ದರ್ಶನ್ ಮತ್ತು ಇತರ ನಾಯಕರು ಕೋವಿಡ್ ನಿಯಮವಾಳಿಗಳನ್ನು ಗಾಳಿಗೆ ತೂರಿ ಸಾಮಾಜಿಕ ಅಂತರ ಪಾಲನೆ ಮಾಡದೇ ಪ್ರಚಾರ ನಡೆಸಿದ್ದರು ಎಂಬ ಆರೋಪದ ಮೇರೆಗೆ ದರ್ಶನ್ ವಿರುದ್ಧ ದೂರು ದಾಖಲಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ನಟ ದರ್ಶನ್ ಮತ್ತಿತ್ತರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಗಗನಕ್ಕೇರಿತು ಆಲೂಗಡ್ಡೆ ಬೆಲೆ
ಬೆಂಗಳೂರು, ನ. 1: ಅಗತ್ಯ ಆಹಾರ ವಸ್ತುಗಳ ಸರಾಸರಿ ಚಿಲ್ಲರೆ ಬೆಲೆ ಕಳೆದ ಒಂದು ವರ್ಷದಲ್ಲಿ ಗಣನೀಯ ಏರಿಕೆಯಾಗಿದೆ. ಇದರಂತೆ ಈ ಬಾರಿ ಈರುಳ್ಳಿಗಿಂತಲೂ ಆಲೂಗಡ್ಡೆಯ ಬೆಲೆ ಅತೀಹೆಚ್ಚು ಏರಿಕೆಯಾಗಿದೆ. ಆಲೂಗಡ್ಡೆಯ ಬೆಳೆ ಒಂದು ವರ್ಷದಲ್ಲಿ ಶೇ. 92 ರಷ್ಟು ಏರಿಕೆಯಾಗಿದ್ದು, ಶೇ. 44 ರಷ್ಟು ಬೆಲೆ ಏರಿಕೆಯಾಗಿರುವ ಈರುಳ್ಳಿ ಎರಡನೇ ಸ್ಥಾನದಲ್ಲಿದೆ. ಕರ್ನಾಟಕದ ಬಹುತೇಕ ಭಾಗಗಳಲ್ಲಿ ಆಲೂಗೆಡ್ಡೆ ಬೆಲೆ ಪ್ರತಿ ಕೆ.ಜಿ.ಗೆ ರೂ. 55 - 65 ರವರೆಗೆ ತಲುಪಿದೆ, ಕಳೆದ ಎರಡು ವರ್ಷಗಳಲ್ಲಿ ಆಲೂಗಡ್ಡೆಯ ಬೆಲೆ ರೂ. 50 ಕ್ಕಿಂತ ಹೆಚ್ಚಾಗಿರುವುದು ಇದೇ ಮೊದಲು ಎಂದು ಹಾಪ್ ಕಾಮ್ಸ್ನ ಅಧಿಕಾರಿಗಳು ಹೇಳಿದ್ದಾರೆ. ಗುಣಮಟ್ಟ ಹಾಗೂ ಗಾತ್ರಕ್ಕೆ ಅನುಗುಣವಾಗಿ ಆಲೂಗಡ್ಡೆಯನ್ನು ರೂ. 55 ರಿಂದ 60 ಗಳವರೆಗೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಪ್ರತಿ ಕೆ.ಜಿ. ಕ್ಯಾರೆಟ್ ಬೆಲೆ ರೂ. 100ಕ್ಕೆ ತಲುಪಿದೆ. ಕೊರೊನಾ ಸಾಂಕ್ರಾಮಿಕ ಲಾಕ್ಡೌನ್ ಬಳಿಕ ಮೈಸೂರಿನಲ್ಲಿ ಇದೇ ದರ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ರೂ. 1 ಲಕ್ಷ ಕೋಟಿ ದಾಟಿದ ಜಿಎಸ್ಟಿ ಸಂಗ್ರಹ
ನವದೆಹಲಿ, ನ. 1: ಈ ವರ್ಷದ ಫೆಬ್ರವರಿಯ ನಂತರ ಜಿಎಸ್ಟಿ ಸಂಗ್ರಹ ಇದೇ ಮೊದಲ ಬಾರಿಗೆ ರೂ. 1 ಲಕ್ಷ ಕೋಟಿ ದಾಟಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಅ.31, 2020 ರವರೆಗೆ ಸಲ್ಲಿಸಿದ ಒಟ್ಟು ಜಿಎಸ್ಟಿಆರ್ -3ಬಿ ರಿಟರ್ನ್ಗಳ ಸಂಖ್ಯೆ 80 ಲಕ್ಷವಾಗಿದೆ. 2020 ರ ಅಕ್ಟೋಬರ್ನಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್ಟಿ ಆದಾಯ ರೂ. 1,05,155 ಕೋಟಿ ಇದರಲ್ಲಿ ಸಿಜಿಎಸ್ಟಿ ರೂ. 19,193 ಕೋಟಿ, ಎಸ್ಜಿಎಸ್ಟಿ ರೂ. 5,411 ಕೋಟಿ, ಐಜಿಎಸ್ಟಿ ರೂ. 52,540 ಕೋಟಿ (ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ ರೂ. 23,375 ಕೋಟಿ) ಮತ್ತು ಸೆಸ್ ರೂ. 8,011 ಕೋಟಿ (ಸರಕುಗಳ ಆಮದುಗಾಗಿ ಸಂಗ್ರಹಿಸಿದ ರೂ. 932 ಕೋಟಿ ಸೇರಿದಂತೆ) ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ವರ್ಷದ ಇದೇ ತಿಂಗಳಲ್ಲಿ ಸಂಗ್ರಹಿಸಿದ ಆದಾಯಕ್ಕೆ ಹೋಲಿಸಿದರೆ ಈ ಬಾರಿಯ ಆದಾಯವು ಶೇ. 10 ರಷ್ಟು ಹೆಚ್ಚಾಗಿದೆ.