*ಗೋಣಿಕೊಪ್ಪಲು, ನ. 1: ಸರ್ವ ಕಾಲಕ್ಕೂ, ಸರ್ವಧರ್ಮೀಯರಿಗೂ ಒಪ್ಪಿಗೆಯಾಗುವ ಕೆಲವು ಮಹತ್ವ ಪೂರ್ಣ ಅಂಶಗಳು ರಾಮಾಯಣ ದಲ್ಲಿವೆ. ಪರಂಪರೆ ಮತ್ತು ಸಾಮಾಜಿಕ ಮೌಲ್ಯವನ್ನು ಪ್ರತಿಪಾಸಿದ ಮಹಾಕಾವ್ಯ ರಾಮಾಯಣ ಎಂದು ಬಾಳೆಲೆ ವಿಜಯಲಕ್ಷ್ಮಿ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಹೇಳಿದರು.

ಪೊನ್ನಂಪೇಟೆ ಸರಕಾರಿ ಪಿಯು ಕಾಲೇಜಿನಲ್ಲಿ ಶನಿವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಮಾಯಣ ದಷ್ಟು ಸುಧೀರ್ಘವಾದ ಮಹಾ ಕಾವ್ಯವನ್ನು ಕಾಣುವುದು ದುರ್ಲಭ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಡಚಂಡ ದಿನೇಶ್ ಚಿಟ್ಟಿಯಪ್ಪ ಮಾತನಾಡಿ ವಿಶ್ವಕ್ಕೆ ಮಾದರಿಯಾದ ರಾಮಾಯಾಣ ಮಹಾ ಕಾವ್ಯವನ್ನು ರಚಿಸಿದ ವಾಲ್ಮೀಕಿಯ ಜೀವನ ಚರಿತ್ರೆಯನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದು ತಿಳಿಸಿದರು.

ಗಾವಡಗೆರೆ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಗೀತಾ ಸುರೇಶ್ ಬಾಬು ಮಾತನಾಡಿ ಮಹಾತ್ಮರ ಜಯಂತಿಗಳನ್ನು ಆಚರಿಸುವುದರಿಂದ ಭವಿಷ್ಯದ ಪೀಳಿಗೆಗೆ ಉತ್ತಮ ಮಾರ್ಗದರ್ಶನ ನೀಡಿದಂತಾಗುತ್ತದೆ ಎಂದು ನುಡಿದರು.

ಪ್ರಾಂಶುಪಾಲ ಸುರೇಶ್ ಬಾಬು, ಕವಿ ವಾಲ್ಮೀಕಿ ಕಾವ್ಯ ರಚಿಸುವುದರ ಜತೆಗೆ ಅದರೊಳಗೊಂದು ಪಾತ್ರಧಾರಿ ಯೂ ಆಗಿದ್ದಾರೆ ಎಂದು ಹೇಳಿದರು.

ಪ್ರಾಂಶುಪಾಲ ಆರ್. ರಮೇಶ್, ನಿವೃತ್ತ ಪ್ರಾಂಶುಪಾಲೆ ಎ.ಕೆ. ಪಾರ್ವತಿ, ಗ್ರಂಥಪಾಲಕ ಸಿದ್ಧಲಿಂಗಸ್ವಾಮಿ, ಉಪನ್ಯಾಸಕ ವಸಂತ್ ಕುಮಾರ್, ಮುಖ್ಯ ಶಿಕ್ಷಕ ಡ್ಯಾನಿ ಈರಪ್ಪ, ಕರ್ನಾಟಕ ಪಬ್ಲಿಕ್ ಶಾಲೆ ಮುಖ್ಯ ಶಿಕ್ಷಕ ವಿಜಯ, ಶಿಕ್ಷಕ ರಮೇಶ್ ಹಾಜರಿದ್ದರು.