ಮಡಿಕೇರಿ, ನ. 1: ಕ್ರೀಡಾ ಕ್ಷೇತ್ರದಲ್ಲಿನ ಅತ್ಯುತ್ತಮ ಸಾಧನೆಗಾಗಿ ಕರ್ನಾಟಕ ಸರಕಾರದ ಮೂಲಕ ನೀಡಲಾಗುವ ಪ್ರತಿಷ್ಠಿತವಾದ ಏಕಲವ್ಯ ಸೇರಿದಂತೆ ಜೀವಮಾನ ಸಾಧನೆಯ ಪ್ರಶಸ್ತಿಗೆ ಕೊಡಗಿನ ನಾಲ್ವರು ಭಾಜನರಾಗಿದ್ದಾರೆ.ಪ್ರಸಕ್ತ ವರ್ಷದಲ್ಲಿ 2017, 2018 ಹಾಗೂ 2019ರ ಸಾಲಿನ ಏಕಲವ್ಯ, ಕ್ರೀಡಾಪೋಷಕ ಹಾಗೂ ಜೀವಮಾನ ಸಾಧನೆಯ ಪ್ರಶಸ್ತಿ ಹಾಗೂ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗಳನ್ನು ಒಟ್ಟಿಗೆ ಒಂದೇ ವೇದಿಕೆಯಡಿಯಲ್ಲಿ ನೀಡಲಾಗುತ್ತಿದೆ.ಈ ಪ್ರಶಸ್ತಿಗಳ ಪೈಕಿ ಏಕಲವ್ಯ ಹಾಗೂ ಜೀವಮಾನ ಸಾಧನೆಯ ಪ್ರಶಸ್ತಿ ಪ್ರಮುಖವಾಗಿದ್ದು, ಜಿಲ್ಲೆಯ ಮೂವರಿಗೆ ಏಕಲವ್ಯ ಹಾಗೂ ಒಬ್ಬರಿಗೆ ಜೀವಮಾನ ಸಾಧನೆಯ ಪ್ರಶಸ್ತಿ ಲಭ್ಯವಾಗಿದೆ. ನಂತರದ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯ ಪಟ್ಟಿಯಲ್ಲಿ ಜಿಲ್ಲೆಯ ಇನ್ನಿಬ್ಬರು ಈ ಬಾರಿ ಸ್ಥಾನ ಪಡೆದಿರುವುದು ಕೊಡಗಿನ ಕ್ರೀಡಾ ಹಿರಿಮೆಗೆ ಮತ್ತೊಂದು ಗರಿಯಾಗಿದೆ.2017ರ ಸಾಲಿನ ಏಕಲವ್ಯ ಪ್ರಶಸ್ತಿಗೆ ಅಂತರ್ರಾಷ್ಟೀಯ ಹಾಕಿ ಆಟಗಾರ್ತಿ ಕೊಡಗಿನಿಂದ ಪ್ರಥಮ ವಾಗಿ ರಾಷ್ಟ್ರವನ್ನು ಪ್ರತಿನಿಧಿಸಿರುವ ಮಲ್ಲಮಾಡ ಎನ್. ಪೊನ್ನಮ್ಮ (ಪ್ರಸ್ತುತ ಕಂಬೀರಂಡ) 2018ರ ಸಾಲಿನಲ್ಲಿ ಹಾಕಿ ಒಲಿಂಪಿಯನ್ ಚೇಂದಂಡ ನಿಕಿನ್ ತಿಮ್ಮಯ್ಯ ಹಾಗೂ 2019ರ ಸಾಲಿಗೆ ಅಂತರ್ರಾಷ್ಟ್ರೀಯ ಹಾಕಿ ಆಟಗಾರ ಪುಲಿಯಂಡ ಎಲ್. ತಿಮ್ಮಣ್ಣ ಅವರುಗಳು ಆಯ್ಕೆಯಾ ಗಿದ್ದಾರೆ. ಜಿಲ್ಲೆಯವರಾದ ಮಾಜಿ ಆಟಗಾರ ಹಾಗೂ ಹಿರಿಯ ಕ್ರೀಡಾ ತರಬೇತುದಾರರಾದ ಚಂದಪಂಡ ಪ್ರಿನ್ಸ್ ಕರುಂಬಯ್ಯ ಅವರಿಗೆ ಜೀವಮಾನ ಸಾಧನೆಯ ಪ್ರಶಸ್ತಿ ಪ್ರಕಟವಾಗಿದೆ.
ಪ್ರಶಸ್ತಿ ವಿಜೇತರು ರೂ. 2 ಲಕ್ಷ ನಗದು, ಏಕಲವ್ಯ ಕಂಚಿನ ಪ್ರತಿಮೆ ಹಾಗೂ ಪ್ರಶಸ್ತಿ ಪತ್ರವನ್ನು ಪಡೆಯಲಿದ್ದಾರೆ. ಜೀವಮಾನ ಸಾಧನೆ ಪ್ರಶಸ್ತಿ ರೂ. 1.50 ಲಕ್ಷ ನಗದು ಹಣ ಒಳಗೊಂಡಿದೆ.
ರಾಜ್ಯ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮೂಲಕ ತಾ. 2 ರಂದು (ಇಂದು) ಬೆಂಗಳೂರಿನ ವಿಧಾನ ಸಭೆಯ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆಯಲಿ ರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇವರುಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಪ್ರಮುಖ ರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಇಬ್ಬರಿಗೆ ಕ್ರೀಡಾ ರತ್ನ: ಏಕಲವ್ಯ ಹಾಗೂ ಜೀವಮಾನ ಸಾಧನೆಯ ಪ್ರಶಸ್ತಿ ವಿಜೇತರೊಂದಿಗೆ ಜಿಲ್ಲೆಯ ಇನ್ನಿಬ್ಬರು
(ಮೊದಲ ಪುಟದಿಂದ) ಉದಯೋನ್ಮುಖ ಪ್ರತಿಭೆಗಳಿಗೂ ಈ ಬಾರಿ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಲಭ್ಯವಾಗಿದೆ. ಬಾಲ್ ಬ್ಯಾಡ್ಮಿಂಟನ್‍ನಲ್ಲಿ ಸಾಧನೆಗೆ ಬಸವನಹಳ್ಳಿ ಗ್ರಾಮದವರಾದ ಬಿ.ಡಿ. ಲಾವಣ್ಯ ಹಾಗೂ ಕೊಡ್ಲಿಪೇಟೆ ಶಿವರಳ್ಳಿ ಗ್ರಾಮದ ಪಲ್ಲವಿ ಕ್ರೀಡಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕ್ರೀಡಾ ರತ್ನ ವಿಜೇತರು ರೂ. 1 ಲಕ್ಷ ನಗದು ಪಡೆಯಲಿದ್ದಾರೆ.
ಸುಬ್ಬಯ್ಯ ಅಧ್ಯಕ್ಷತೆಯ ಪರಿಶೀಲನಾ ಸಮಿತಿ
ರಾಜ್ಯದ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವರ ಅಧ್ಯಕ್ಷತೆಯ ಆಯ್ಕೆ ಸಮಿತಿ ಸಾಧಕರ ಪಟ್ಟಿಯನ್ನು ಆಯ್ಕೆ ಮಾಡಿತ್ತು. ಈ ಪಟ್ಟಿಗೆ ಸಂಬಂಧಿಸಿದಂತೆ ನಂತರದ ಪರಿಶೀಲನಾ
ಸಮಿತಿಯ ಅಧ್ಯಕ್ಷರಾಗಿ ಮಾಜಿ ಒಲಿಂಪಿಯನ್, ಅರ್ಜುನ ಪ್ರಶಸ್ತಿ ವಿಜೇತರಾದ ಕೊಡಗಿನವರಾದ ಡಾ. ಅಂಜಪರವಂಡ ಬಿ. ಸುಬ್ಬಯ್ಯ ಅವರಿದ್ದರೆ ಸದಸ್ಯರಾಗಿ ಅರ್ಜುನ ಪ್ರಶಸ್ತಿ ವಿಜೇತೆ ಟೇಬಲ್ ಟೆನ್ನಿಸ್ ಕ್ರೀಡಾಪಟು ಉಷಾ ಸುಂದರ್‍ರಾಜ್, ಕ್ರೀಡಾ ಇಲಾಖೆಯ ನಿರ್ದೇಶಕರು, ಸರಕಾರದ ಉಪಕಾರ್ಯದರ್ಶಿ, ಕ್ರೀಡಾ ಯೋಜನೆಯ ಉಪ ನಿರ್ದೇಶಕರು, ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಮಹಾ ಕಾರ್ಯದರ್ಶಿ ಹಾಗೂ ಕ್ರೀಡಾ ನಿರ್ದೇಶನಾಲಯದ ಜಂಟಿ ನಿರ್ದೇಶಕರು ಆಯ್ಕೆ ಸಮಿತಿಯಲ್ಲಿದ್ದರು.