ಸಿದ್ದಾಪುರ, ನ. 1 : ಈ ಕಾಲದಲ್ಲಿ ತಮಗೆ ಸಿಕ್ಕ ಅಲ್ಪ ಭೂಮಿಯನ್ನೇ ದಾನವಾಗಿ ನೀಡಿ ಸಂಕಷ್ಟದ ಜೀವನದ ನಡುವೆ ತೃಪ್ತಿ ಅನುಭವಿಸುತ್ತಿರುವ ಗಿರಿಜನ ವ್ಯಕ್ತಿಯ ವ್ಯಥೆಯ ಕಥೆಯಿದು.
ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯ ಬಸವನಹಳ್ಳಿಯ ನಿವಾಸಿ ಜೆ.ಕೆ. ಚಂದ್ರ ಸರ್ಕಾರದಿಂದ ದೊರೆತ ತಮ್ಮ ಹಕ್ಕಿನ 2.60 ಎಕರೆ ಜಮೀನಿನಲ್ಲಿ ನೋವಿನ ನಡುವೆಯೂ ತೃಪ್ತಿಯ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಗುಡಿಸಲಿನ ಎದುರಿನಲ್ಲೇ ಇರುವ ಗಿರಿಜನ ಆಶ್ರಮ ಶಾಲೆಗೆ ಆಟದ ಮೈದಾನದ ಕೊರತೆ ಇದೆ ಎನ್ನುವುದನ್ನು ಅರಿತು ಸುಮಾರು ಒಂದು ಎಕರೆ ಭೂಮಿಯನ್ನು ಮೈದಾನಕ್ಕಾಗಿ ದಾನ ಮಾಡಿದ್ದಾರೆ. ಮಾತ್ರವಲ್ಲ ಗ್ರಾಮಸ್ಥರಿಗಾಗಿ ಕುಡಿಯುವ ನೀರಿನ ಬೃಹತ್ ಟ್ಯಾಂಕ್ ನಿರ್ಮಾಣಕ್ಕಾಗಿ ಒಂದಷ್ಟು ಭೂಮಿಯನ್ನು ಬಿಟ್ಟುಕೊಟ್ಟಿದ್ದಾರೆ. ಉಳಿದ ಜಮೀನಿನಲ್ಲಿ ಕೃಷಿ ಕಾರ್ಯ ಮಾಡಿಕೊಂಡು ದಿನ ದೂಡುತ್ತಿದ್ದಾರೆ.ಹತ್ತು ವರ್ಷಗಳ ಹಿಂದೆ ಮರ ಕಪಾತು ಮಾಡುವ ಸಂದರ್ಭ ಮರದಿಂದ ಬಿದ್ದು ಸೊಂಟದ ಮೂಳೆ ಮುರಿದುಕೊಂಡ ಚಂದ್ರ ನಂತರ ಏಳಲಾಗದೆ ಮೂಲೆ ಗುಂಪಾಗಿದ್ದರು. ಕೂಲಿ ಕೆಲಸಕ್ಕೆ ತೆರಳಲಾಗದೆ ಮಲಗಿದಲ್ಲೇ ನರಳುತ್ತಿದ್ದರು. ಪತ್ನಿ ಮತ್ತು ಪುತ್ರಿ
(ಮೊದಲ ಪುಟದಿಂದ) ಕೂಡ ಗಾಯಾಳು ಚಂದ್ರನನ್ನು ಬಿಟ್ಟುಹೋಗಿದ್ದರು. ಅಸಹಾಯಕ ಪರಿಸ್ಥಿತಿಯಲ್ಲಿದ್ದ ಚಂದ್ರನಿಗೆ ಅಕ್ಕಪಕ್ಕದ ನಿವಾಸಿಗಳು ಊಟ, ಉಪಹಾರ ನೀಡಿ ಸಂತೈಸುತ್ತಿದ್ದರು. ಆ ಸಂದರ್ಭ ‘ಶಕ್ತಿ’ ವರದಿ ಪ್ರಕಟಿಸಿ ಚಂದ್ರನಿಗೆ ಸರ್ಕಾರದ ಮಾಸಾಶನ ಬರುವಂತೆ ಮಾಡಿತ್ತು.
ಪ್ರಸ್ತುತ ಕೂಲಿ ಕೆಲಸಕ್ಕೆ ತೆರಳಲಾಗದ ಅವರು ಊರುಗೋಲಿನ ಆಧಾರದಿಂದಲೇ ನಡೆದಾಡುತ್ತಿದ್ದಾರೆ.
ಅಲ್ಲದೆ ಮಾಸಾಶನದ ಮೂಲಕವೇ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರದಿಂದ ಬಂದ ತಮ್ಮ ಹಕ್ಕಿನ ಭೂಮಿಯಲ್ಲಿ ಒಂದಷ್ಟನ್ನು ದಾನ ನೀಡಿದ್ದರೂ ಇವರ ಗುಡಿಸಲಿಗೆ ಮಾತ್ರ ನೀರಿನ ಸಂಪರ್ಕವನ್ನು ಒದಗಿಸಿಲ್ಲ. ಟ್ಯಾಂಕ್ ಸದ್ಯದಲ್ಲಿಯೇ ಉದ್ಘಾಟನೆ ಗೊಳ್ಳಲಿದ್ದು, ಚಂದ್ರನಿಗೆ ನೀರಿನ ಭಾಗ್ಯ ಕಲ್ಪಿಸುವ ಅಗತ್ಯವಿದೆ.
ಚಂದ್ರ ಎರಡೂವರೆ ಎಕರೆ ಭೂಮಿಯ ಒಡೆಯನಾದರೂ ಇಂದಿಗೂ ಪ್ಲಾಸ್ಟಿಕ್ ಶೀಟ್ ಮತ್ತು ಗೋಣಿಚೀಲಗಳ ಹೊದಿಕೆಯ ಗುಡಿಸಲಿನಲ್ಲೇ ವಾಸವಾಗಿದ್ದಾರೆ. ಇದುವೇ ನನ್ನ ಅರಮನೆ ಎಂದು ನೋವಿನಿಂದ ಹೇಳಿಕೊಳ್ಳುವ ಅವರು ವಾಸಕ್ಕೆ ಯೋಗ್ಯವಾದ ಮನೆಯ ನಿರೀಕ್ಷೆಯಲ್ಲಿದ್ದಾರೆ.
- ಸುಧಿ