ಮಡಿಕೇರಿ, ನ. 1: ಕೊಡಗಿನ ತಲಕಾವೇರಿ ಸೇರಿದಂತೆ ರಾಜ್ಯದೆಲ್ಲೆಡೆ ಸಂಭವಿಸಿದ ಪ್ರಾಕೃತಿಕ ದುರಂತ ಹಾಗೂ ಜಾಗತಿಕ ಕೊರೊನಾ ಸೋಂಕು ; ಪ್ರಸಕ್ತ ಸಾಲಿನಲ್ಲಿ ಕರುನಾಡಿಗೆ ಸಮಸ್ಯೆ ಮತ್ತು ಸವಾಲುಗಳ ವರ್ಷವಾಗಿದೆ ಎಂದು ರಾಜ್ಯ ವಸತಿ ಖಾತೆಯೊಂದಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ವಿಷಾದ ವ್ಯಕ್ತಪಡಿಸಿದರು.ಇಲ್ಲಿನ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜಾರೋಹಣದೊಂದಿಗೆ 65ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಸಂದೇಶ ನೀಡುತ್ತಾ, ಅವರು ಮೇಲಿನ ಅಂಶವನ್ನು ಪ್ರಸ್ತಾಪಿಸಿದರು.ಕರ್ನಾಟಕ ಮತ್ತು ಕೊಡಗಿನ ಜನತೆಯು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಸರಕಾರಕ್ಕೆ ಸ್ಪಷ್ಟ ಅರಿವಿದೆ. ಇಂತಹ ಪರಿಸ್ಥಿತಿ ನಡುವೆಯೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಜನತೆಯ ಹಿತ ಕಾಪಾಡುವಲ್ಲಿ ಸರಕಾರ ಬದ್ಧವೆಂದು ಸಚಿವರು ಘೋಷಿಸಿದರು.ಕೊಡಗಿಗೆ ಕೊಡುಗೆ: ಕಳೆದ ಒಂದು ವರ್ಷದ ಅವಧಿಯಲ್ಲಿ ವಸತಿ ಇಲಾಖೆ ವತಿಯಿಂದಲೂ ಸಹ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ರಾಜ್ಯವ್ಯಾಪ್ತಿ ಕೈಗೊಳ್ಳಲಾಗಿದೆ. ಈ ಅಲ್ಪಾವಧಿಯಲ್ಲಿ ಕೊಡಗು ಜಿಲ್ಲೆಯ ಅಭಿವೃದ್ಧಿಗೂ ಸಹ ಸಾಕಷ್ಟು ಕೊಡುಗೆ ನೀಡಲಾಗಿದೆ. ಕಳೆದ ಮೂರು ವರ್ಷಗಳಿಂದಲೂ ಕೊಡಗು ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಪ್ರಕೃತಿ ವಿಕೋಪದಿಂದ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಪ್ರಕೃತಿ ವಿಕೋಪದಿಂದಾಗಿ ಮನೆ ಕಳೆದುಕೊಂಡು ಸಂತ್ರಸ್ತರಾದ ಕುಟುಂಬದವರಿಗೆ ಮನೆ ನಿರ್ಮಾಣ ಹಾಗೂ ಸಹಾಯಧನ, ಬೆಳೆಹಾನಿ ಪರಿಹಾರ, ಪ್ರಕೃತಿ ವಿಕೋಪದಿಂದಾಗಿ ಹಾನಿಗೊಳಗಾದ ರಸ್ತೆ, ಸೇತುವೆ, ತಡೆಗೋಡೆ ಇತ್ಯಾದಿ ಮೂಲ ಸೌಲಭ್ಯಗಳೊಂದಿಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಸಂತ್ರಸ್ತರ ಬದುಕನ್ನು ಕಟ್ಟಿಕೊಡಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಡಳಿತದಿಂದ ಪ್ರಕೃತಿ ವಿಕೋಪ ಸಂಬಂಧ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಅತಿವೃಷ್ಠಿಯಿಂದ ಜಿಲ್ಲೆಯ ತಲಕಾವೇರಿಯಲ್ಲಿ ಸಂಭವಿಸಿರುವ ಭೂಕುಸಿತ ಹಾಗೂ ಅದರಿಂದಾದ ಹಾನಿ ವಿಷಾದದ ಸಂಗತಿಯಾಗಿದೆ ಎಂದರು.

ಕೊರೊನಾ ಇಳಿಕೆ: ಕೊರೊನಾ ಮಹಾಮಾರಿಯಿಂದ ಇಡೀ ವಿಶ್ವವೇ ತತ್ತರಿಸಿದ್ದು, ಕರ್ನಾಟಕ ರಾಜ್ಯದ ಜನರೂ ಕೂಡ ಸಂಕಷ್ಟಕ್ಕೊಳಗಾಗಿದ್ದಾರೆ. ಜಿಲ್ಲೆಯೂ ಕೂಡ ಕೊರೊನಾದಿಂದ ಸಂಕಷ್ಟಕ್ಕೆ ಗುರಿಯಾಗಿದ್ದು, ರೋಗ ಹರಡದಂತೆ ಜಿಲ್ಲಾಡಳಿತ ಕೈಗೊಂಡ ಮುನ್ನೆಚ್ಚರಿಕೆ ಕ್ರಮ ಹಾಗೂ ಸೋಂಕಿತರ ಚಿಕಿತ್ಸೆಗೆ ಪರಿಣಾಮಕಾರಿ ಕ್ರಮಗಳಿಂದ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ರೋಗಿಗಳ ಚೇತರಿಕೆಯೊಂದಿಗೆ ಸೋಂಕಿತರ ಪ್ರಮಾಣ ಇಳಿಕೆಯಾಗುತ್ತಿರುವುದು ಸಮಾಧಾನದ ಸಂಗತಿ ಎಂದರು.

ನಾಡು-ನುಡಿ ರಕ್ಷಣೆಗೆ ಬದ್ಧ: ನಾಡು-ನುಡಿಯ ಹಿತರಕ್ಷಣೆಗೆ ಸರ್ಕಾರ ಕಟಿಬದ್ದವಾಗಿದೆ. ಅಂತರ್ ಜಾಲದಲ್ಲಿ ಕನ್ನಡ ಭಾಷೆಯ ಬಳಕೆ ಯಥೇಚ್ಛವಾಗಿದ್ದು, ವಾಣಿಜ್ಯ ಕ್ಷೇತ್ರದಲ್ಲಿಯೂ ಮುಂಚೂಣಿ ಭಾಷೆಯಾಗಿ ಬೆಳೆಯತೊಡಗಿರುವುದು ಸಂತಸದ ಸಂಗತಿಯಾಗಿದೆ. ಕರ್ನಾಟಕದ ಇತಿಹಾಸ ಮತ್ತು ಪರಂಪರೆ ಅತ್ಯಂತ ಶ್ರೀಮಂತವಾಗಿದ್ದು, ಅಖಂಡ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಯುವ ಪೀಳಿಗೆ ಪಾಲುದಾರರಾಗಬೇಕು. ಆ ದಿಸೆಯಲ್ಲಿ ತಾಯಿ ಚಾಮುಂಡೇಶ್ವರಿ, ಕಾವೇರಿ ಮಾತೆ, ಇಗ್ಗುತ್ತಪ್ಪ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವುದಾಗಿ ಸಚಿವರು ಭಾವನಾತ್ಮಕ ನುಡಿಯಾಡಿದರು.

ಸಮಾರಂಭದಲ್ಲಿ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕ ಕೆ.ಜಿ. ಬೋಪಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ನಾನಾ ಇಲಾಖೆ ಅಧಿಕಾರಿಗಳು ಇತರರು ಇದ್ದರು.

ಕಾರ್ಯಕ್ರಮದ ಬಳಿಕ ಮಾತನಾಡಿದ ಸಚಿವರು ಕೋವಿಡ್-19 ಹಿನ್ನೆಲೆ ಸರಳ ಮತ್ತು ಸಾಂಪ್ರದಾಯಿಕವಾಗಿ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದರು.