ಮಡಿಕೇರಿ, ಅ. 30: ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಸಣ್ಣ ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸು ವದರೊಂದಿಗೆ; ಈ ಉದ್ಯಮಗಳಿಂದ ಉತ್ಪಾದಿಸಲ್ಪಡುವ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಕೊಡಗು ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘವು ನೆರವು ಕಲ್ಪಿಸುತ್ತಿದೆ. ಈ ದಿಸೆಯಲ್ಲಿ ಕಳೆದ ಮೂರು ದಶಕದಿಂದ ಸರಕಾರಿ ಸಾಮ್ಯದ ಈ ಸಂಸ್ಥೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.

1991 ರಿಂದ ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಹಕಾರ ಸಂಸ್ಥೆಗೆ ಆರಂಭಿಕ ಅಧ್ಯಕ್ಷರಾಗಿ ಜಿ.ಪಂ. ಮುಖ್ಯ ಕಾರ್ಯದರ್ಶಿಗಳು ಹಾಗೂ ಅನಂತರದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಕಾರ್ಯನಿರ್ವಹಿಸಿದ್ದರು. 2000ನೇ ಇಸವಿಯಿಂದ ಸರಕಾರದ ಮಾರ್ಗಸೂಚಿಯಂತೆ ಚುನಾವಣೆ ಪದ್ಧತಿ ಜಾರಿಯೊಂದಿಗೆ; ನೇರವಾಗಿ ಉದ್ಯಮಿಗಳು ಅಧ್ಯಕ್ಷರಾಗುವ ಅವಕಾಶ ಲಭ್ಯವಾಯಿತು.

ಮುಖ್ಯವಾಗಿ ಕೊಡಗು ಜಿಲ್ಲೆಯಲ್ಲಿ ಮುದ್ರಣ, ಮರಕೆಲಸ, ಹಾಸಿಗೆ, ಬಟ್ಟೆ ತಯಾರಿಕೆ ಹಾಗೂ ಹೊಲಿಗೆ ಕೇಂದ್ರಗಳು, ಸ್ವಚ್ಛತಾ ಸಾಮಗ್ರಿಗಳಾದ ಪಿನಾಯಲ್, ಸೋಪು, ಮೇಣದಬತ್ತಿ, ಊದುಬತ್ತಿ, ಉಪ್ಪಿನ ಕಾಯಿ, ಗುಡಿ ಕೈಗಾರಿಕೆ ಉತ್ಪನ್ನಗಳು, ಕರಕುಶಲ ವಸ್ತುಗಳು, ಪೀಠೋಪಕರಣ, ಕುಂಬಾರಿಕೆಯಂತಹ ಉದ್ಯಮಗಳಿಗೆ ಪ್ರೋತ್ಸಾಹಿಸಲಾಗುತ್ತಿದೆ.

ಮುಕ್ತ ಸದಸ್ಯತ್ವ : ಸ್ವಂತ ಉದ್ಯಮದೊಂದಿಗೆ ಬದುಕು ಕಂಡುಕೊಳ್ಳುವವರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಕಾಳಜಿ ಇರುವ ಉದ್ದಿಮೆದಾರರು ಈ ಸಂಸ್ಥೆಯಲ್ಲಿ ವ್ಯವಹರಿಸಿ ರೂ. 506 ಮೊತ್ತ ಪಾವತಿಸಿ ಸದಸ್ಯತ್ವ ಪಡೆದುಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಪ್ರಸಕ್ತ 257 ಸಣ್ಣ ಉದ್ದಿಮೆದಾರರು ಈ ಸಹಕಾರ ಸಂಸ್ಥೆಯ ಸದಸ್ಯತ್ವ ಹೊಂದಿದ್ದಾರೆ.

ಬೆಳವಣಿಗೆ ಕುಂಠಿತ : ಮೂರು ದಶಕದ ಹಿಂದೆ ಈ ಸಂಸ್ಥೆ ಪ್ರಾರಂಭಗೊಂಡಾಗ ಸಾಕಷ್ಟು ಉದ್ಯಮಿಗಳು ಉತ್ಸಾಹದಿಂದ ಸದಸ್ಯತ್ವ ಪಡೆದು, ಸಂಘದ ಬೆಳವಣಿಗೆಯಲ್ಲಿ ಕೈ ಜೋಡಿಸಿದ್ದರು. ಪರಿಣಾಮ ಜಿಲ್ಲಾ ಕೈಗಾರಿಕಾ ಸಹಕಾರ ಸಂಘ ವಾರ್ಷಿಕ ರೂ. 1 ಕೋಟಿಗೂ ಅಧಿಕ ವಹಿವಾಟು ಹೊಂದಿತ್ತು.

ಆದರೆ ಶರವೇಗದಲ್ಲಿ ಬೆಳೆಯುತ್ತಿರುವ ದೊಡ್ಡ ದೊಡ್ಡ ಉದ್ಯಮಗಳು, ಬೇರೆ ಬೇರೆ ಮಹಾನಗರಿಯಲ್ಲಿ ತಯಾರಿಸುತ್ತಿರುವ ಆಧುನಿಕ ಯಾಂತ್ರೀಕೃತ ಉತ್ಪನ್ನಗಳ ಗುಣಮಟ್ಟ ಹಾಗೂ ಕಡಿಮೆ ಮೌಲ್ಯದ ಕಾರಣ, ಕೊಡಗಿನ ಸಣ್ಣ ಪುಟ್ಟ ಸಂಸ್ಥೆಗಳು ಪೈಪೋಟಿ ನಡೆಸಲಾರದೆ ಮತ್ತು ಉತ್ಪನ್ನಗಳ ಬೆಲೆ ಸರಿದೂಗಿಸಲಾರದೆ ಹಿನ್ನೆಡೆ ಅನುಭವಿಸುವಂತಾಗಿದೆ.

ಜಾಗತಿಕ ಮಾರುಕಟ್ಟೆ ಬೆಲೆಗೂ ಹೊಂದಿಕೊಳ್ಳಲಾಗದೆ ಇಂತಹ ಉದ್ದಿಮೆಗಳು ಕ್ಷೀಣಿಸುವಂತಾಗಿದೆ. ಈ ನಡುವೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಣ್ಣ ಉದ್ದಿಮೆಗಳನ್ನು ಪ್ರೋತ್ಸಾಹಿಸುತ್ತಿದೆ. ಈ ಸಂದರ್ಭ ಸ್ವಯಂ ಉದ್ದಿಮೆಯೊಂದಿಗೆ ಸ್ವಾವಲಂಬನೆಯ ಬದುಕು ಆಶಿಸುವವರು ಕೊಡಗು ಜಿಲ್ಲಾ ಕೈಗಾರಿಕಾ ಸಹಕಾರ ಸರಬರಾಜು ಮತ್ತು ಮಾರಾಟ ಸಂಘದೊಂದಿಗೆ ಸಂಪರ್ಕಿಸಿ, ಹೆಚ್ಚಿನ ಮಾಹಿತಿ ಪಡೆದುಕೊಳ್ಳುವಂತೆ ಅಲ್ಲಿನ ವ್ಯವಸ್ಥಾಪಕ ಕಾರ್ಯಪ್ಪ ಸಲಹೆ ನೀಡಿದ್ದಾರೆ.

ತರಬೇತಿ : ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಸಹಕಾರ ಸಂಸ್ಥೆ ಬಹಳಷ್ಟು ಸಂದರ್ಭ ಯುವ ಉದ್ದಿಮೆದಾರರಿಗೆ ತರಬೇತಿ ನೀಡಲಿದೆ. ಇದೇ ನ. 2 ರಿಂದ ಆಹಾರ ಉತ್ಪನ್ನಗಳ ಸಂಬಂಧ ತರಬೇತಿ ಏರ್ಪಡಿಸಿದ್ದು, ಆಸಕ್ತರು ಭಾಗವಹಿಸಲು ಸಲಹೆ ಮಾಡಿದ್ದಾರೆ.