ಕುಶಾಲನಗರ, ಅ. 30: ಕುಶಾಲನಗರದಲ್ಲಿ ಒಳಚರಂಡಿ ಯೋಜನೆ ಕಾಮಗಾರಿ ಮುಂದಿನ 15 ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ತಿಳಿಸಿದರು.

ಕುಶಾಲನಗರ ಪಟ್ಟಣದ ಒಳಚರಂಡಿ ಯೋಜನೆಯ ಎರಡನೇ ಹಂತದ ಕಾಮಗಾರಿ ಚಾಲನೆಗೊಳಿಸಿ ಮಾತನಾಡಿದ ಅವರು, ಕುಶಾಲನಗರ ಪಟ್ಟಣದ ಸ್ವಚ್ಛತೆ ಮತ್ತು ಕಾವೇರಿ ನದಿ ಮಲಿನ ತಪ್ಪಿಸಲು ಉದ್ದೇಶ ಹೊಂದಿ ನಿರ್ಮಾಣಗೊಳ್ಳುತ್ತಿರುವ ಒಳಚರಂಡಿ ಯೋಜನೆ ಕಳೆದ 6 ವರ್ಷಗಳ ಹಿಂದೆ ಪ್ರಾರಂಭವಾಗಿದೆ. ರೂ. 40 ಕೋಟಿ ವೆಚ್ಚದಲ್ಲಿ ಪ್ರಥಮ ಹಂತದ ಕಾಮಗಾರಿ ನಡೆದಿದ್ದು ಹಣಕಾಸಿನ ಕೊರತೆ ಹಾಗೂ ಮಲಿನ ನೀರು ಶುದ್ಧೀಕರಣ ಘಟಕದ ಜಾಗ ವಿವಾದದ ಹಿನ್ನಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ 18.44 ಕೋಟಿ ರೂಗಳ ಅನುದಾನ ಬಿಡುಗಡೆಯಾಗಿದ್ದು ಯೋಜನೆಯ ಬಾಕಿ ಕಾಮಗಾರಿಗಳಿಗೆ ಚಾಲನೆ ದೊರೆತಿದೆ ಎಂದರು.

ಕಾಮಗಾರಿ ಸಂದರ್ಭ ಯಾವುದೇ ರೀತಿಯಲ್ಲಿ ಅಡ್ಡಿ ಉಂಟುಮಾಡದಂತೆ ಸ್ಥಳೀಯರಿಗೆ ಕಿವಿಮಾತು ಹೇಳಿದರು. ಪ್ರಥಮ ಹಂತದ ಕಾಮಗಾರಿ ನಡೆದ ಬಹುತೇಕ ಪ್ರದೇಶಗಳಲ್ಲಿ ಕಳೆದ ಮೂರು ವರ್ಷಗಳಿಂದ ಪ್ರವಾಹ ಉಂಟಾಗಿದ್ದು ಸಂಪೂರ್ಣ ಕಾಮಗಾರಿ ಜಲಾವೃತಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ರಂಜನ್, ಈ ಬಗ್ಗೆ ಪರಿಶೀಲನೆ ನಡೆಸಿ ಮತ್ತೆ ಪುನಶ್ಚೇತನಗೊಳಿಸಲು ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

ಈ ಸಂದರ್ಭ ಮಾತನಾಡಿದ ಯೋಜನೆಯ ಉಸ್ತುವಾರಿ ವಹಿಸಿರುವ ಕುಶಾಲನಗರ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಅಭಿಯಂತರ ಆನಂದ್, 45 ಲಕ್ಷ ಲೀಟರ್ ಸಾಮಥ್ರ್ಯದ ಮಲಿನ ನೀರು ಶುದ್ಧೀಕರಣ ಘಟಕ ನಿರ್ಮಾಣ, 8.5 ಕಿಮೀ ಉದ್ದಕ್ಕೆ ಪಟ್ಟಣದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯಲ್ಲಿ ಮ್ಯಾನ್‍ಹೋಲ್ ಮತ್ತು ಕೊಳವೆ ಸಾಲುಗಳ ಅಳವಡಿಕೆ, 2 ವೆಟ್‍ವೆಲ್‍ಗಳಲ್ಲಿ ಪಂಪಿಂಗ್ ಮೆಷಿನರಿ ಅಳವಡಿಸುವುದು ಹಾಗೂ ಮೂರು ಕಡೆ ವೆಟ್ವೆಲ್‍ಗಳಲ್ಲಿ 11 ಕೆವಿ ವಿದ್ಯುತ್ ಫೀಡರ್ ಲೈನ್ ಅಳವಡಿಕೆ ಸೇರಿದಂತೆ 3.3 ಕಿಮೀ ಉದ್ದದ ಏರು ಕೊಳವೆಗಳನ್ನು ಅಳವಡಿಸುವ ಕಾಮಗಾರಿ ಎರಡನೇ ಹಂತದಲ್ಲಿ ನಡೆಯಲಿದೆ.

ಕುಶಾಲನಗರದ ಹಾರಂಗಿ ರಸ್ತೆ ಬದಿಯಲ್ಲಿರುವ ಯೋಜನೆಯ ಮಲಿನ ನೀರು ಶುದ್ಧೀಕರಣ ಘಟಕಕ್ಕೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭ ಜಿಪಂ ಸದಸ್ಯೆ ಮಂಜುಳಾ, ತಾಪಂ ಸದಸ್ಯೆ ಪುಷ್ಪಾ ಜನಾರ್ಧನ್, ಕುಡಾ ಅಧ್ಯಕ್ಷ ಎಂ.ಎಂ.ಚರಣ್, ಪಪಂ ಸದಸ್ಯ ಅಮೃತ್‍ರಾಜ್, ಕೆ.ಜಿ.ಮನು, ಎಂ.ವಿ.ನಾರಾಯಣ್, ಕುಡಾ ಸದಸ್ಯರಾದ ವೈಶಾಖ್, ವಿ.ಡಿ.ಪುಂಡರೀಕಾಕ್ಷ, ಮಧುಸೂದನ್ ಸೇರಿದಂತೆ ಬಿಜೆಪಿ ಪ್ರಮುಖರು ಇದ್ದರು.