ಸಿದ್ದಾಪುರ, ಅ. 30: ಇಂಜಿಲಗೆರೆ ವ್ಯಾಪ್ತಿಯಲ್ಲಿ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದು, ಕೃಷಿ ಫಸಲುಗಳನ್ನು ಹಾನಿಗೊಳಿಸುತ್ತಿವೆ. ಇಂಜಿಲಗೆರೆ ಗೌರಿ ಪುಲಿಯೇರಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದು, ಇಂಜಿಲಗೆರೆಯ ಗೌರಿ ನಿವಾಸಿ ಉದಯಬಾನು ಎಂಬವರ ಕಾಫಿ ತೋಟದ ಒಳಗೆ ಬೀಡುಬಿಟ್ಟು, ಅವರಿಗೆ ಸೇರಿದ ತೆಂಗು, ಅಡಿಕೆ, ಬಾಳೆ ಹಾಗೂ ಕಾಫಿ ಗಿಡಗಳು ಸೇರಿದಂತೆ ಇನ್ನಿತರ ಫಸಲುಗಳನ್ನು ತುಳಿದು, ಧ್ವಂಸಗೊಳಿಸಿ ಹಾನಿಗೊಳಿಸಿವೆ. ಇದರಿಂದಾಗಿ ಅಪಾರ ನಷ್ಟ ಸಂಭವಿಸಿದೆ.

ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಪಡಿಸಿದ್ದಾರೆ. ಇತ್ತೀಚೆಗೆ ಇಂಜಿಲಗೆರೆ ಭಾಗದ ಯುವಕನೋರ್ವ ರಾತ್ರಿ ಕಾರಿನಲ್ಲಿ ತನ್ನ ಮನೆಗೆ ಬರುತ್ತಿರುವ ಸಂದರ್ಭದಲ್ಲಿ ರಸ್ತೆ ಮಧ್ಯದಲ್ಲಿ ಒಂಟಿಸಲಗವೊಂದು ಕಾರಿನ ಸಮೀಪಕ್ಕೆ ಬಂದಿದೆ ಎನ್ನಲಾಗಿದೆ. ಇದರಿಂದ ಅದೃಷ್ಟವಶಾತ್ ಕಾರು ಚಾಲನೆ ಮಾಡುತ್ತಿದ್ದ ಯುವಕ ತನ್ನ ಕಾರಿನ ಲೈಟನ್ನು ಸ್ಥಗಿತಗೊಳಿಸಿದ ಹಿನ್ನೆಲೆ ಯಾವುದೇ ಅನಾಹುತ ಸಂಭವಿಸಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕಾಡಾನೆಗಳು ಇಂಜಿಲಗೆರೆ ಪುಲಿಯೇರಿ ಗ್ರಾಮದ ಭತ್ತದ ಕೃಷಿ ಮಾಡಿದ ಗದ್ದೆಗಳಿಗೂ ಕೂಡ ಲಗ್ಗೆಯಿಟ್ಟು ಬೆಳೆ ಹಾನಿ ಮಾಡುತ್ತಿವೆ ಹಾಗೂ ಕಾರ್ಮಿಕರಿಗೆ ತೋಟ ಕೆಲಸಕ್ಕೆ ತೆರಳಲು ಕೂಡ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.