ಹದಿನೇಳನೆಯ ಶತಮಾನದಲ್ಲಿ ವ್ಯಾಪಾರದ ನಿಮಿತ್ತವಾಗಿ ಸಮುದ್ರ ಮಾರ್ಗದ ಮೂಲಕ ಭಾರತವನ್ನು ಪ್ರವೇಶಿಸಿದ ಬ್ರಿಟಿಷರು, ಪ್ರಾರಂಭದಲ್ಲಿ ವ್ಯಾಪಾರ ವ್ಯವಹಾರವನ್ನು ಭದ್ರಪಡಿಸಿಕೊಂಡು, ನಂತರ ಹರಿದು ಹಂಚಿ ಹೋಗಿದ್ದ ಅಖಂಡ ಭಾರತದ ಆಳ್ವಿಕೆಯ ಕಡೆಗೆ ತಮ್ಮ ಗಮನ ಹರಿಸಿ ವಿವಿಧ ಪ್ರಾಂತ್ಯಗಳನ್ನು ಆಕ್ರಮಿಸಿಕೊಂಡರು. ನಂತರ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯನ್ನು ನಿರ್ಮಿಸಿ ಅದರ ಮೂಲಕ ಆಳ್ವಿಕೆಯನ್ನು ಪ್ರಾರಂಭ ಮಾಡಿದರು. ಹೀಗೆ ವ್ಯಾಪಾರ ವ್ಯವಹಾರಕ್ಕೆಂದು ಆಗಮಿಸಿದ ಬ್ರಿಟಿಷರು ಭಾರತದಲ್ಲಿ ಸಾಮ್ರಾಜ್ಯ ಸ್ಥಾಪನೆಯ ಕನಸು ಕಂಡರು.
ನಿಧಾನವಾಗಿ ಭಾರತೀಯ ರಾಜರ ಮೇಲೆ ಒಡೆದು ಆಳುವ ನೀತಿಯನ್ನು ಪ್ರಯೋಗಿಸಿ, ಭಾರತೀಯ ರಾಜರುಗಳು ತಮ್ಮ ತಮ್ಮಲ್ಲಿಯೇ ಕಚ್ಚಾಡುವಂತೆ ಮಾಡಿದರು. ಇಂತಹ ಸಂದರ್ಭದಲ್ಲಿ ನಮ್ಮ ದೇಶದ ಹಲವಾರು ಅರಸರು ಬ್ರಿಟಿಷರ ವಸಾಹತುಶಾಹಿ ಧೋರಣೆಯನ್ನು ವಿರೋಧಿಸಿ ಹೋರಾಟ ನಡೆಸಿದರು. ಆದರೆ ಕೆಲವು ಭಾರತೀಯ ರಾಜರು ಬ್ರಿಟಿಷರ ಪರವಾಗಿ ಕೆಲಸ ಮಾಡಿದ್ದರಿಂದಾಗಿ ಬಹಳ ಸುಲಭವಾಗಿ ಬ್ರಿಟಿಷರು ಭಾರತೀಯ ರಾಜರುಗಳ ಪ್ರತಿರೋಧವನ್ನು ದಮನ ಮಾಡಿ ಸಾಮ್ರಾಜ್ಯವನ್ನು ವಿಸ್ತರಿಸಿದರು.
ಸಾಮ್ರಾಜ್ಯಶಾಹಿ ಬ್ರಿಟಿಷರ ಕ್ರೂರ ದೃಷ್ಟಿ ನಮ್ಮ ಕೊಡಗು ರಾಜ್ಯದ ಮೇಲೆ ಬಿತ್ತು. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857ರಲ್ಲಿ ಪ್ರಾರಂಭವಾಯಿತು. ಆದರೆ ನಮ್ಮ ಅವಿಭಜಿತ ಕೊಡಗು ರಾಜ್ಯದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕಿಂತಲೂ ಇಪ್ಪತ್ತು ವರ್ಷ ಮೊದಲು, ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಕೊಡಗಿನ ಕೆಲವೇ ಕೆಲವು ಸ್ವಾಭಿಮಾನಿಗಳು ಹಚ್ಚಿ, ಕೆಚ್ಚೆದೆಯಿಂದ ನೇಣುಗಂಬವನ್ನು ಏರಿ ಪ್ರಾಣಾರ್ಪಣೆ ಮಾಡಿರುವರು. ಅಂತಹ ವೀರಾಗ್ರಣಿಗಳಲ್ಲಿ ಮೊದಲಿಗರು ವೀರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರು. ಆ ಮೂಲಕ ಕೊಡಗಿನ ವೀರ ಪರಂಪರೆಯಲ್ಲಿ ಹುತಾತ್ಮ ಗುಡ್ಡೆಮನೆ ಅಪ್ಪಯ್ಯ ಗೌಡರು ಅಜರಾಮರರಾಗಿರುವರು.
ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರು ಕೊಡಗಿನ ಬಲಮುರಿ ಗ್ರಾಮದ ಗುಡ್ಡೆಮನೆ ಸುಬ್ಬಪ್ಪನವರ ಪ್ರಥಮ ಪುತ್ರನಾಗಿ ಕ್ರಿ.ಶ. 1792ರಲ್ಲಿ ಜನಿಸಿದರು. ಬಾಲ್ಯದಲ್ಲಿ ತುಂಬಾ ಸ್ವಾಭಿಮಾನಿ ತರುಣರಾಗಿದ್ದರು. ಅವರ ಮಡದಿ ಅಕ್ಕಮ್ಮ. ಕೊಡಗಿನ ಅರಸ ಲಿಂಗರಾಜರ ಆಳ್ವಿಕೆಯ ಕಾಲದಲ್ಲಿ ಜಮೇದಾರರಾಗಿ ಸೇವೆ ಸಲ್ಲಿಸುತ್ತಿದ್ದು, ಚಿಕ್ಕವೀರರಾಜರ ಆಳ್ವಿಕೆಯ ಕಾಲ ಘಟ್ಟದಲ್ಲಿ ಇವರ ಸ್ವಾಭಿಮಾನ, ಸ್ವಾಮಿ ನಿಷ್ಠೆಯನ್ನು ಪರಿಗಣಿಸಿ ಸುಬೇದಾರ್ರಾಗಿ ಮುಂಬಡ್ತಿಯನ್ನು ಪಡೆದಿದ್ದರು. ಅವರಲ್ಲಿದ್ದ ಶೂರತನವನ್ನು ಕಂಡು ಕೊಡಗಿನ ಅಂದಿನ ರಾಜ ಲಿಂಗರಾಜರು ಅಪ್ಪಯ್ಯಗೌಡರಿಗೆ ಓಡಾಡಲು ಕುದುರೆಯನ್ನು ನೀಡಿದರು. ಅಪ್ಪಯ್ಯಗೌಡರು ಕೊಡಗಿನಾದ್ಯಂತ ಕುದುರೆಯ ಮೂಲಕ ಓಡಾಡುತ್ತಿದ್ದರು.
ಬ್ರಿಟಿಷ್ ಸಾಮ್ರಾಜ್ಯಶಾಹಿಗಳು 1831ರಲ್ಲಿ ಅಂದಿನ ಮೈಸೂರು ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರನ್ನು ಪದಚ್ಯುತಗೊಳಿಸಿ ಆಡಳಿತ ಚುಕ್ಕಾಣಿಯನ್ನು ಹಿಡಿದರು. ನಂತರ ಅವಿಭಜಿತ ಕೊಡಗು ರಾಜ್ಯವನ್ನು ಆಕ್ರಮಿಸಲು ದುರುಳ ಬ್ರಿಟಿಷರು ಮುಂದಾದರು. ಕೊಡಗಿನ ಹಾಲೇರಿ ವಂಶದ ದೊಡ್ಡವೀರರಾಜೇಂದ್ರ ಮತ್ತು ಲಿಂಗರಾಜೇಂದ್ರ ಒಡೆಯರು ಬ್ರಿಟಿಷರೊಂದಿಗೆ ಸ್ನೇಹದಿಂದ ವರ್ತಿಸುತ್ತಿದ್ದರು. ಕೊಡಗು ರಾಜ್ಯದ ಕೊನೆಯ ರಾಜ ಚಿಕ್ಕವೀರರಾಜೇಂದ್ರ ಒಡೆಯರು ಬ್ರಿಟಿಷರೊಂದಿಗೆ ಸ್ನೇಹದಿಂದ ಇದ್ದರೂ, ಆಡಳಿತ ವ್ಯವಸ್ಥೆಯಲ್ಲಿ ಬ್ರಿಟಿಷರ ಹಸ್ತಕ್ಷೇಪವನ್ನು ಸಹಿಸುತ್ತಿರಲಿಲ್ಲ.
ಅವಿಭಜಿತ ಕೊಡಗು ರಾಜ್ಯದ ಪ್ರಜೆಗಳಿಗೆ ಚಿಕ್ಕವೀರರಾಜೇಂದ್ರರ ಮೇಲೆ ಇರುವ ಅಪಾರವಾದ ರಾಜಭಕ್ತಿ ಮತ್ತು ಗೌರವವನ್ನು ಗಮನಿಸಿದ, ಚಿಕ್ಕವೀರರಾಜೇಂದ್ರರ ತಂಗಿ ದೇವಮ್ಮಾಜಿ ಹಾಗೂ ಪತಿ ಚೆನ್ನಬಸಪ್ಪರಿಗೆ ಅಸೂಯೆಯಾಗಿ, ಹೇಗಾದರೂ ಮಾಡಿ ಚಿಕ್ಕವೀರರಾಜನನ್ನು ಸದೆಬಡಿದು ಕೊಡಗು ರಾಜ್ಯವನ್ನು ತಮ್ಮ ಅಧಿಪತ್ಯಕ್ಕೆ ಪಡೆಯಲು ಬ್ರಿಟಿಷರ ಜೊತೆ ಸೇರಿ ಪಿತೂರಿ ಮಾಡಲು ಪ್ರಾರಂಭಿಸಿದರು.
ಚಿಕ್ಕವೀರರಾಜೇಂದ್ರ ಒಡೆಯರು ಕಕ್ಕಬೆ ಸಮೀಪದ ನಾಲ್ಕುನಾಡು ಅರಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಮಯದಲ್ಲಿ ಬ್ರಿಟಿಷರ ಸೇನಾನಿ ಕರ್ನಲ್ ಫ್ರೇಜರ್ ಎಂಬುವವನು ನಾಲ್ಕು ದಿಕ್ಕಿನಿಂದ ಕೊಡಗಿನ ಮೇಲೆ ಮುತ್ತಿಗೆ ಹಾಕುತ್ತಾನೆ. ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕುಗಳಿಂದ ಮುತ್ತಿಗೆ ಹಾಕಿದ ಬ್ರಿಟಿಷರನ್ನು ಕೊಡಗಿನ ವೀರ ಸೈನಿಕರು ಹಿಮ್ಮೆಟ್ಟಿಸಿದರು. ಪೂರ್ವ ದಿಕ್ಕಿನಿಂದ ಮುತ್ತಿಗೆ ಹಾಕುತ್ತಿದ್ದ ಬ್ರಿಟಿಷರನ್ನು ಕೊಡಗಿನ ಸೇನೆ ತಟಸ್ಥ ಧೋರಣೆ ತಳೆದುದರಿಂದ ಚಿಕ್ಕವೀರ ರಾಜೇಂದ್ರ ಒಡೆಯರು ಬಹಳ ಸುಲಭವಾಗಿ ಬ್ರಿಟಿಷರ ಬಂಧನಕ್ಕೆ ಒಳಗಾಗುತ್ತಾರೆ.
1834ರಲ್ಲಿ ಬ್ರಿಟಿಷರು ಕೊಡಗನ್ನು ಆಕ್ರಮಿಸಿಕೊಂಡು, ಚಿಕ್ಕ ವೀರರಾಜರನ್ನು ಅಧಿಕಾರದಿಂದ ಇಳಿಸಿ ಮಡಿಕೇರಿಯ ಕೋಟೆಯಲ್ಲಿ ಗೃಹ ಬಂಧನದಲ್ಲಿರಿಸಿ, ಮಡಿಕೇರಿ ಕೋಟೆಯ ಮೇಲೆ ಬ್ರಿಟಿಷರು ಧ್ವಜವನ್ನು ಹಾರಿಸಿದರು. ಚಿಕ್ಕ ವೀರರಾಜರಿಗೆ ಅಪಾರ ಸಂಖ್ಯೆಯ ಬೆಂಬಲಿಗರಿರುವುದನ್ನು ಅರಿತ ಬ್ರಿಟಿಷರು, ಮಡಿಕೇರಿಯ ಕೋಟೆಯಲ್ಲಿ ಗೃಹ ಬಂಧನದಲ್ಲಿರಿಸಿದರೆ, ಚಿಕ್ಕವೀರರಾಜರ ಬೆಂಬಲಿಗರು ಬ್ರಿಟಿಷರ ವಿರುದ್ಧ ತಿರುಗಿ ಬೀಳುವುದನ್ನು ಮನಗಂಡರು. ಬಳಿಕ ಚಿಕ್ಕವೀರರಾಜನನ್ನು ಕಾಶಿ ಯಾತ್ರೆಯ ನೆಪದಲ್ಲಿ ಗಡೀಪಾರು ಮಾಡಿದರು. ಬ್ರಿಟಿಷರು ಎಷ್ಟೇ ಎಚ್ಚರ ವಹಿಸಿದರೂ, ರಾಜರಿಗೆ ಆಪ್ತರಾದ ಗುಡ್ಡೆಮನೆ ಅಪ್ಪಯ್ಯಗೌಡ, ಹುಲಿಕೊಂದ ನಂಜಯ್ಯ, ಚೆಟ್ಟಿ ಕುಡಿಯ, ಕುರ್ತು ಕುಡಿಯ, ಪುಟ್ಟ ಬಸವರಾಜು, ಸೋಮಯ್ಯ, ಮಾಚಯ್ಯ ಮೊದಲಾದ ದೇಶ ಪ್ರೇಮಿಗಳಿಗೆ ಬ್ರಿಟಿಷರ ಸಂಚು ತಿಳಿದು ಈ ಶೂರರು ಬ್ರಿಟಿಷರ ವಿರುದ್ಧ ದಂಗೆ ಮಾಡುವ ನಿರ್ಧಾರವನ್ನು ಕೈಗೊಂಡರು.
ಬ್ರಿಟಿಷರು ಕೊಡಗು ರಾಜ್ಯವನ್ನು ಆಕ್ರಮಿಸಿಕೊಂಡು ಕೊಡಗಿನ ಪ್ರಜೆಗಳು ಧಾನ್ಯದ ರೂಪದಲ್ಲಿ ತೆರಿಗೆಯನ್ನು ಕೊಡುವುದರ ಬದಲು, ಹಣದ ರೂಪದಲ್ಲಿ ತೆರಿಗೆಯನ್ನು ನೀಡುವಂತೆ ಆಜ್ಞೆಯನ್ನು ಮಾಡಿದರು. ಅಲ್ಲದೆ ರೈತರು ಹೊಗೆಸೊಪ್ಪು ಬೆಳೆಯಲು ಬ್ರಿಟಿಷರ ಅನುಮತಿ ಪಡೆಯುವಂತೆ ಆದೇಶಿಸಿದರು.
ಈ ಆದೇಶದ ಬಗ್ಗೆ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರು ಮತ್ತು ಅವರ ಬೆಂಬಲಿಗರು ಬ್ರಿಟಿಷ್ ಸಾಮ್ರಾಜ್ಯ ಶಾಹಿಗಳ ಕ್ರೂರ ಕ್ರಮಗಳ ವಿರುದ್ಧ ದಂಗೆಗೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಅಧಿಕಾರವನ್ನು ಧಿಕ್ಕರಿಸಿ ಸ್ವತಃ ಸೇನೆ ಕಟ್ಟಿ ಬ್ರಿಟಿಷರ ಸಾಮ್ರಾಜ್ಯಶಾಹಿ ಧೋರಣೆಯ ವಿರುದ್ಧ ಯುದ್ಧಕ್ಕೆ ಸಿದ್ಧತೆಯನ್ನು ಮಾಡಿಕೊಂಡರು. ಪುಟ್ಟಬಸವರಾಜುರವರ ಹೆಸರನ್ನು ಕಲ್ಯಾಣ ಸ್ವಾಮಿ ಎಂದು ಬದಲಾಯಿಸಿ, ಕಾಶಿಯಾತ್ರೆಗೆ ತೆರಳಿರುವ ಚಿಕ್ಕವೀರರಾಜೇಂದ್ರ ಒಡೆಯರು ಹಿಂತಿರುಗಿ ಬರುವ ತನಕ ಕಲ್ಯಾಣ ಸ್ವಾಮಿಯವರನ್ನು ರಾಜ್ಯಪಾಲರಾಗಿ ನೇಮಿಸಿದ್ದಾರೆ ಎಂಬ ಸುದ್ದಿ ಹರಡಿಸಿದರು. ಬ್ರಿಟಿಷರ ವಿರುದ್ಧ 1837ರ ಏಪ್ರಿಲ್ 6 ರಂದು ಅಮರ ಸುಳ್ಯ ಯುದ್ಧ ಪ್ರಾರಂಭ ಮಾಡಬೇಕೆಂದು ತೀರ್ಮಾನಿಸಿದರು.
ಕೆದಂಬಾಡಿ ರಾಮಗೌಡ, ಅಡಕ್ಕಾರು ಅಣ್ಣಿಗೌಡ ಹಾಗೂ ಮಾಚಯ್ಯಯವರು ಸುಳ್ಯದಲ್ಲಿ ಯುದ್ಧ ಸಿದ್ಧತೆಯನ್ನು ಮಾಡತೊಡಗಿದರು. ಗುಡ್ಡೆಮನೆ ಅಪ್ಪಯ್ಯಗೌಡ, ಕಲ್ಯಾಣ ಸ್ವಾಮಿ, ಹುಲಿಕೊಂದ ನಂಜಯ್ಯ, ಶಾಂತಳ್ಳಿ ಮಲ್ಲಯ್ಯ, ಚೆಟ್ಟಿ ಕುಡಿಯ, ಕುರ್ತು ಕುಡಿಯ ಮುಂತಾದವರು ಕೊಡಗಿನ ಎಲ್ಲಾ ಗ್ರಾಮಗಳಲ್ಲಿ ಸುತ್ತಾಡಿ ಬ್ರಿಟಿಷರ ವಿರುದ್ಧ ಯುದ್ಧಕ್ಕೆ ಸಿದ್ಧತೆ ಮತ್ತು ಯುದ್ಧ ಸಾಮಗ್ರಿಗಳ ಸಂಗ್ರಹಣೆಯಲ್ಲಿ ನಿರತರಾದರು.
ಸುಳ್ಯದಲ್ಲಿ ಜಮಾವಣೆಗೊಂಡ ಸ್ವಾತಂತ್ರ್ಯ ಸಮರ ಸೇನೆ ಕೊಡಗಿನ ಕಡೆಗೆ ಪ್ರಯಾಣ ಬೆಳೆಸಿ, ಬ್ರಿಟಿಷರ ಅಧೀನದಲ್ಲಿ ದಿವಾನನಾಗಿದ್ದ ಲಕ್ಷ್ಮೀನಾರಾಯಣನ ಸಹೋದರ ರಾಮಪ್ಪಯ್ಯ ಸುಳ್ಯದಲ್ಲಿ ಸುಬೇದಾರ್ ನಾಗಿದ್ದುಕೊಂಡು, ಆ ಭಾಗದ ಜನರಿಗೆ ತೊಂದರೆ ನೀಡುತ್ತಿದ್ದ. ಹಾಗಾಗಿ ಸ್ವಾತಂತ್ರ್ಯ ಸಮರ ಸೇನೆ ರಾಮಪ್ಪಯ್ಯನ್ನು ಸೆರೆ ಹಿಡಿದು ಕೊಂದುಹಾಕಿತು. ಆ ಸ್ಥಾನಕ್ಕೆ ತಿಮ್ಮಪ್ಪಯ್ಯನನ್ನು ಸುಬೇದಾರ್ರಾಗಿ ಕಲ್ಯಾಣ ಸ್ವಾಮಿ ನೇಮಕ ಮಾಡಿದರು.
ಸ್ವಾತಂತ್ರ್ಯ ಸಮರ ಸೇನೆ ನಂತರ ಬೆಳ್ಳಾರೆಯ ಕೋಟೆಯನ್ನು ವಶಪಡಿಸಿಕೊಂಡು, ಬೀರಣ್ಣ ಬಂಟರನ್ನು ಬೆಳ್ಳಾರೆಯ ಸುಬೇದಾರ್ರಾಗಿ ಕಲ್ಯಾಣ ಸ್ವಾಮಿ ನೇಮಿಸಿದರು. ಅಷ್ಟರಲ್ಲಿ ಚೆಂಬು, ಪೆರಾಜೆ ಪ್ರದೇಶದ ರೈತರು, ಯುವಕರು ಸ್ವಯಂಪ್ರೇರಿತರಾಗಿ ಕಲ್ಯಾಣ ಸ್ವಾಮಿಯವರ ಸೇನೆಯನ್ನು ಸೇರಿಕೊಂಡರು. ನಂತರ ಕಲ್ಯಾಣ ಸ್ವಾಮಿಯ ನೇತೃತ್ವದ ಸೇನೆ ಪುತ್ತೂರಿನ ಕಡೆ ದಾಳಿ ಮಾಡಿ, ನಂದಾವರದ ಬಂಗರಾಜರು ಕಲ್ಯಾಣ ಸ್ವಾಮಿಯವರಿಗೆ ಬೆಂಬಲವನ್ನು ಸೂಚಿಸಿ, ಸೈನ್ಯದೊಂದಿಗೆ ಕಲ್ಯಾಣ ಸ್ವಾಮಿಯವರ ಕಡೆ ಸೇರಿಕೊಂಡರು.
ಕಲ್ಯಾಣ ಸ್ವಾಮಿ ನಂತರ ಮಂಗಳೂರಿನ ಕಡೆ ದಾಳಿ ಪ್ರಾರಂಭಿಸಿ, ಸೆರೆಮನೆಯಲ್ಲಿದ್ದ ಯುದ್ಧ ಖೈದಿಗಳನ್ನು ಬಿಡುಗಡೆ ಮಾಡಿ, ಖೈದಿಗಳನ್ನು ತಮ್ಮ ಕಡೆಗೆ ಸೇರಿಸಿಕೊಂಡರು. ಕಲ್ಯಾಣ ಸ್ವಾಮಿ ಮಂಗಳೂರಿನಲ್ಲಿ ಹದಿಮೂರು ದಿನಗಳ ಕಾಲ ಕಲ್ಯಾಣಸ್ವಾಮಿ ಧ್ವಜವನ್ನು ಹಾರಿಸಿ ರಾಜ್ಯಭಾರ ಮಾಡಿದರು. ಈ ವಿಚಾರ ತಿಳಿದ ಬೇಂಗುನಾಡು ಮತ್ತು ತಾವುನಾಡಿನ ಜನ ಕಲ್ಯಾಣಸ್ವಾಮಿಯವರ ಬಣ ಸೇರಲು ಮುಂದಾದರು. ಆಗ ಬ್ರಿಟಿಷರ ಅಧೀನದಲ್ಲಿ ಸುಬೇದಾರ್ರಾಗಿದ್ದ ಮಾದಯ್ಯ ಇವರಿಗೆ ಉಪಟಳ ನೀಡಿ ವಿರೋಧ ವ್ಯಕ್ತ ಪಡಿಸಿದರು. ಈ ವಿಚಾರ ತಿಳಿದ ಅಪ್ಪಯ್ಯಗೌಡರು ಸೇನೆ ಸಮೇತ ಅಲ್ಲಿಗೆ ಜಮಾಯಿಸಿ, ಮಾದಯ್ಯ ನೇತೃತ್ವದ ಬ್ರಿಟಿಷ್ ಸೇನೆಯನ್ನು ಬಗ್ಗುಬಡಿದು, ಮಾದಯ್ಯನನ್ನು ಸೆರೆಮನೆಗೆ ತಳ್ಳಿದರು.
ಸ್ವಾತಂತ್ರ್ಯ ಸಂಗ್ರಾಮಿಗಳು ಘಟ್ಟದ ಕೆಳಗಿನ ತಳನೀರು ಕಣಿವೆಯಲ್ಲಿ ಬೀಡುಬಿಟ್ಟಿರುವ ವಿಚಾರ ಬ್ರಿಟಿಷ್ ಅಧಿಕಾರಿ ಲೀಹಾರ್ಡಿಗೆ ತಿಳಿದು ಅವರನ್ನು ದಮನ ಮಾಡಲು ಸೇನೆಯನ್ನು ಕಳುಹಿಸಿದನು. ಮಂಗಳೂರಿನಲ್ಲಿದ್ದ ಕಲ್ಯಾಣ ಸ್ವಾಮಿಗೆ ಈ ವಿಷಯ ತಿಳಿದು ಸಾಕಷ್ಟು ಸಂಖ್ಯೆಯ ಯೋಧರನ್ನು ತಳನೀರು ಕಣಿವೆಯಲ್ಲಿ ಬೀಡುಬಿಟ್ಟಿದ ಸ್ವಾತಂತ್ರ್ಯ ಯೋಧರ ಸಹಾಯಕ್ಕೆ ಕಳುಹಿಸಿಕೊಟ್ಟರು. ಕಲ್ಯಾಣ ಸ್ವಾಮಿಯ ಸೇನೆಗೂ, ಆಂಗ್ಲರ ಸೇನೆಗೂ ಭೀಕರ ಯುದ್ಧ ನಡೆಯುತ್ತದೆ. ಕೊನೆಗೆ ಕಲ್ಯಾಣಸ್ವಾಮಿಯ ದಳಪತಿಗಳಾದ ಹುಲಿಕೊಂದ ನಂಜಯ್ಯ, ಸೋಮಯ್ಯ, ಚೆಟ್ಟಿಕುಡಿಯ, ಕುರ್ತು ಕುಡಿಯ ಮುಂತಾದವರು ಸೆರೆಯಾಗಿ, ಮಡಿಕೇರಿ ಸೆರೆಮನೆ ಸೇರಿದರು.
ಆ ಬಳಿಕ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರು ತಮ್ಮ ಕುದುರೆಯ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಬಿಡಾರದತ್ತ ತೆರಳಿದರು. ತಾವುನಾಡು ಮತ್ತು ನಾಲ್ಕುನಾಡಿನ ಸ್ವಾತಂತ್ರ್ಯ ಸಂಗ್ರಾಮದ ಅಪಾರ ಸಂಖ್ಯೆಯ ಯೋಧರೊಂದಿಗೆ, ಮಡಿಕೇರಿಯ ಉತ್ತರ ಭಾಗದಲ್ಲಿ ನಾಲ್ಕು ಮೈಲು ದೂರದಲ್ಲಿ ಬಿಡಾರ ಹೂಡಿದರು. ಶಾಂತಳ್ಳಿಯ ಮಲ್ಲಯ್ಯನ ನೇತೃತ್ವದ ಸೇನೆ ಅಪ್ಪಯ್ಯಗೌಡರ ಸೇನೆಯನ್ನು ಸೇರಿಕೊಂಡಿತು. ಈ ವಿಷಯ ತಿಳಿದ ಲೀಹಾರ್ಡಿಯು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿಯಾಗಿ ಅಪ್ಪಯ್ಯಗೌಡರ ಸೇನೆಯ ಮೇಲೆ ದಾಳಿ ಮಾಡಿದರು.
ಮಂಗಳೂರಿನಲ್ಲಿ ಅನಿರೀಕ್ಷಿತ ದಾಳಿ ಮಾಡಿ ಕಲ್ಯಾಣ ಸ್ವಾಮಿ, ರಾಮಗೌಡ, ಬಂಗರಾಜರನ್ನು ಸೆರೆ ಹಿಡಿದು, ಮಂಗಳೂರಿನ ಬಿಕ್ರಾನಕಟ್ಟೆಯಲ್ಲಿ ಅಮಾನುಷವಾಗಿ ಗಲ್ಲಿಗೇರಿಸಿದರು. ಗುಡ್ಡೆಮನೆ ಅಪ್ಪಯ್ಯಗೌಡರೊಂದಿಗೆ ಸೆರೆಯಾಳುಗಳಾದ ನಾಲ್ಕುನಾಡಿನ ಉತ್ತು, ಪೆರಾಜೆಯ ಪಾರುಪತ್ತೆಗಾರ ಕೃಷ್ಣಯ್ಯ, ಶಾಂತಳ್ಳಿಯ ಮಲ್ಲಯ್ಯ, ಚೆಟ್ಟಿಕುಡಿಯ ಇವರುಗಳ ವಿರುದ್ಧ ಆಂಗ್ಲರು ವಿಚಾರಣೆಯ ನಾಟಕ ಮಾಡಿ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಸಿಂಗಾಪುರ ಮತ್ತು ಕಲ್ಲಿಕೋಟೆಯ ಸೆರೆಮನೆಗೆ ತಳ್ಳಿದರು. ಅಪ್ಪಯ್ಯಗೌಡರ ಸಹೋದರ ಪಾರುಪತ್ತೆಗಾರ ತಮ್ಮಯ್ಯಗೌಡರನ್ನು ಸೆರೆಹಿಡಿದು ಸಿಂಗಾಪುರ ಸೆರೆಮನೆಗೆ ತಳ್ಳಿದರು.
ಬ್ರಿಟಿಷರ ವಿರುದ್ಧದ ದಂಗೆಗೆ ಸೂತ್ರಧಾರಿ ಗುಡ್ಡೆಮನೆ ಅಪ್ಪಯ್ಯಗೌಡ ಎಂಬುವುದನ್ನು ತಿಳಿದ ಬ್ರಿಟಿಷರು, ಅಪ್ಪಯ್ಯಗೌಡರ ವಿರುದ್ಧ ವಿಶೇಷ ವಿಚಾರಣೆ ನಡೆಸಿ, ಇವರನ್ನು ಜೀವಂತವಾಗಿ ಬಿಟ್ಟರೆ ಮತ್ತೆ ಬ್ರಿಟಿಷರ ಮೇಲೆ ದಾಳಿಯನ್ನು ನಡೆಸುತ್ತಾರೆ ಎಂದು ಅರಿತು, ಬ್ರಿಟಿಷರ ನ್ಯಾಯಾಲಯ ಸಾರ್ವಜನಿಕರ ಎದುರು ಬಹಿರಂಗವಾಗಿ ಗಲ್ಲಿಗೇರಿಸಬೇಕೆಂದು ತೀರ್ಪು ನೀಡುತ್ತದೆ. ಬ್ರಿಟಿಷರು ಗುಡ್ಡೆಮನೆ ಅಪ್ಪಯ್ಯ ಗೌಡರನ್ನು 1837ರ ಅಕ್ಟೋಬರ್ 31 ರಂದು ಬೆಳಿಗ್ಗೆ 10 ಗಂಟೆಗೆ ಮಡಿಕೇರಿ ಕೋಟೆಯ ಮುಂಭಾಗದಲ್ಲಿ ಬಹಿರಂಗವಾಗಿ ಗಲ್ಲಿಗೇರಿಸುವುದೆಂದು ನಿರ್ಧರಿಸಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸೆರೆಯಾದ ಗುಡ್ಡೆಮನೆ ಅಪ್ಪಯ್ಯಗೌಡರನ್ನು ನೇಣುಹಾಕುವ ಸಂದರ್ಭದಲ್ಲಿ ಅವರ ಪತ್ನಿ ಮದುಮಗಳ ಉಡುಪಿನಲ್ಲಿ ಹಾಜರಿರಬೇಕು, ಅಲ್ಲದೆ ಜಿಲ್ಲೆಯ ಸಾರ್ವಜನಿಕರು, ರೈತರು, ಅಧಿಕಾರಿಗಳು, ಪಟೇಲರುಗಳು ಹಾಜರಿರಬೇಕೆಂದು ಬ್ರಿಟಿಷ್ ಅಧಿಕಾರಿ ಲೀಹಾರ್ಡಿ ಆದೇಶ ಮಾಡಿದರು.
ಅದರಂತೆ ಬ್ರಿಟಿಷರು ಗುಡ್ಡೆಮನೆ ಅಪ್ಪಯ್ಯಗೌಡರನ್ನು ನೇಣುಗಂಬಕ್ಕೆ ಏರಿಸಿದರು. ಕೊಡಗಿನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಜ್ವಲಿಸುತ್ತಿದ್ದ ಜ್ಯೋತಿ ನಂದಿಹೋಯಿತು. ದೇಶದ ಸ್ವಾತಂತ್ರ್ಯಕ್ಕಾಗಿ ನೇಣುಗಂಬವನ್ನು ಏರಿದ ಮೊದಲ ವೀರ ಸೇನಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ, ಸ್ವಾತಂತ್ರ್ಯ ಹೋರಾಟದ ಸ್ಮøತಿಪಟಲದಲ್ಲಿ ಸುವರ್ಣ ಅಕ್ಷರಗಳಿಂದ ಬರೆಯಲ್ಪಟ್ಟರು. ಆ ಮೂಲಕ ಕೊಡಗಿನ ವೀರ ಪರಂಪರೆಯಲ್ಲಿ ಹುತಾತ್ಮ ಗುಡ್ಡೆಮನೆ ಅಪ್ಪಯ್ಯ ಗೌಡರ ಹೆಸರು ಅಜರಾಮರವಾಗಿದೆ.
ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರು ಹುತಾತ್ಮರಾಗಿ ಇಂದಿಗೆ 183 ವರ್ಷಗಳು ಕಳೆದಿವೆ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಬಲಿದಾನ ಮಾಡಿರುವ ವೀರಾಗ್ರಣಿ ಸುಬೇದಾರ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಸಂಸ್ಮರಣೆ ಮಾಡುವುದು ಭಾರತೀಯರಾದ ನಮ್ಮ ಆದ್ಯ ಕರ್ತವ್ಯ.
- ಡಾ. ದಯಾನಂದ ಕೆ.ಸಿ., ಪ್ರಾಧ್ಯಾಪಕರು ಮತ್ತು ಸದಸ್ಯರು, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ. ಮೊಬೈಲ್: 9449766772