ಮಡಿಕೇರಿ, ಅ. 30: ಬಾಳೆಲೆಯಲ್ಲಿರುವ ವೀರಾಜಪೇಟೆ ತಾಲೂಕಿನ 510ನೇ ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘದ ಚುನಾವಣೆ ನವೆಂಬರ್ 13 ರಂದು ನಡೆಯಲಿದೆ ಎಂದು ಚುನಾವಣಾಧಿಕಾರಿ ಎಸ್.ಎಂ. ರಘು ಘೋಷಿಸಿದ್ದಾರೆ. ಈ ಸಂಬಂಧ ನ. 5 ರಂದು ಬೆಳಿಗ್ಗೆ 11 ಗಂಟೆಯಿಂದ 2 ಗಂಟೆಯೊಳಗೆ ಉಮೇದುವಾರಿಕೆ ಸಲ್ಲಿಸಬಹುದಾಗಿದೆ.

ನ. 6 ರಂದು ನಾಮಪತ್ರ ಪರಿಶೀಲನೆ, ನ. 7 ರಂದು ನಾಮಪತ್ರ ಹಿಂಪಡೆಯಲು ಅವಕಾಶದೊಂದಿಗೆ, ಆ ದಿನವೇ ಅಭ್ಯರ್ಥಿಗಳಿಗೆ ಚಿಹ್ನೆ ನೀಡಲಿರುವುದಾಗಿ ಅವರು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ. 13 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯ ತನಕ ಬಾಳೆಲೆಯ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜು ಕಟ್ಟಡದಲ್ಲಿ ಮತದಾನ ನಡೆಯಲಿದೆ. ಆ ಬಳಿಕ ಮತ ಎಣಿಕೆ ಹಾಗೂ ಅಭ್ಯರ್ಥಿಗಳ ಗೆಲುವಿನ ಬಗ್ಗೆ ಪ್ರಕಟಣೆ ಹೊರಡಿಸಲಾಗುವುದು. ಈ ಸಂಸ್ಥೆಯ ಆಡಳಿತ ಮಂಡಳಿಯ ಒಟ್ಟು 11 ಸ್ಥಾನಗಳಿಗೆ ಚುನಾವಣೆ ಜರುಗಲಿದೆ. ಸಾಮಾನ್ಯ ಕ್ಷೇತ್ರ 5, ಮಹಿಳಾ ಮೀಸಲು 2, ಪರಿಶಿಷ್ಟ ಜಾತಿ ಹಾಗೂ ಪಂಗಡ ತಲಾ 1 ಸ್ಥಾನ ಮತ್ತು ಹಿಂದುಳಿದ ವರ್ಗ ‘ಎ’ ಹಾಗೂ ‘ಬಿ’ ಸ್ಥಾನಗಳಿಗೆ ತಲಾ 1 ರಂತೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.