ಸೋಂಕಿತರ ಸಂಖ್ಯೆ 6 ಲಕ್ಷಕ್ಕಿಂತ ಕಡಿಮೆ

ನವದೆಹಲಿ, ಅ. 30: ಕೋವಿಡ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಭಾರತ ಮಹತ್ವದ ಮೈಲಿಗಲ್ಲು ಸಾಧಿಸಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಮೂರು ತಿಂಗಳಲ್ಲೇ ಮೊದಲ ಬಾರಿಗೆ 6 ಲಕ್ಷಕ್ಕಿಂತ ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಶುಕ್ರವಾರದವರೆಗೆ 5.94 ಲಕ್ಷ ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಆಗಸ್ಟ್ 6 ರಂದು ಈ ಸಂಖ್ಯೆ 5.95 ಲಕ್ಷದಷ್ಟಿತ್ತು. ಸದ್ಯ, ಸಕ್ರಿಯ ಪ್ರಕರಣಗಳು ದೇಶದ ಒಟ್ಟು ದೃಢಪಟ್ಟ ಪ್ರಕರಣಗಳ ಪೈಕಿ ಕೇವಲ 7.35 ರಷ್ಟು (5,94,386) ಮಾತ್ರ ಇವೆ. ಇದು ಸ್ಥಿರ ಕುಸಿತದ ಪ್ರವೃತ್ತಿಯನ್ನು ಬಲಪಡಿಸಿದೆ ಎಂದು ತಿಳಿಸಿದೆ.

ಭಯೋತ್ಪಾದಕರ ಅಡಗುದಾಣ ಧ್ವಂಸ

ಜಮ್ಮು, ಅ. 30: ಭದ್ರತಾ ಪಡೆಗಳು ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ಗಡಿಯಲ್ಲಿ ಭಯೋತ್ಪಾದಕರ ಅಡಗುದಾಣ ಧ್ವಂಸ ಗೊಳಿಸಿ, ಚೀನಾದ ಪಿಸ್ತೂಲ್ ಮತ್ತು ಸ್ಫೋಟಕಗಳೂ ಒಳಗೊಂಡಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿವೆ. ಗಂಭೀರ್ ಮುಘಲನ್ ಅರಣ್ಯದ ಸಮೀಪ, ಜಮ್ಮು ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ ಯೋಧರು ಶುಕ್ರವಾರ ಉಗ್ರಗಾಮಿಗಳು ಅಡಗುತಾಣದಲ್ಲಿ ಇಟ್ಟುಕೊಂಡಿದ್ದ ಶಸ್ತ್ರಾಸ್ತ್ರ, ಮದ್ದು ಗುಂಡು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜೌರಿ ಚಂದನ್ ಕೊಹ್ಲಿ ಹೇಳಿದ್ದಾರೆ.

500 ಕೆ.ಜಿ. ತೂಕದ ಮೀನು ಬಲೆಗೆ

ಕಾರವಾರ, ಅ. 30: ಸುಮಾರು 500 ಕೆ.ಜಿ.ಗೂ ಹೆಚ್ಚು ತೂಕವಿರುವ ಬೃಹತ್ ಗಾತ್ರದ ಮೂರು ತೊರ್ಕೆ ಮೀನುಗಳು ಭಟ್ಕಳ ಮೀನುಗಾರರ ಬಲೆಗೆ ಬಿದ್ದಿದೆ. ಇಂದು ಬೆಳಿಗ್ಗೆ ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ರಾಧಾಕೃಷ್ಣ, ರಾಜಶ್ರೀ ಬೋಟ್‍ಗಳಿಗೆ ಬೃಹತ್ ಗಾತ್ರದ ಮೂರು ತೊರ್ಕೆ ಮೀನು ಸಿಕ್ಕಿದ್ದು, ಪ್ರತಿ ಮೀನಿನ ತೂಕ 500 ಕೆ.ಜಿ. ಮೀರಲಿದೆ ಎಂದು ಅಂದಾಜಿಸಲಾಗಿದೆ. ಸುಮಾರು 2 ಮೀಟರ್‍ಗೂ ಅಧಿಕ ಉದ್ದದ ಈ ಮೀನುಗಳನ್ನು ಹರಸಾಹಸಪಟ್ಟು ಮೀನುಗಾರರು ದಡಕ್ಕೆ ತಂದಿದ್ದು ಕ್ರೇನ್ ಮೂಲಕ ಬೋಟ್ ನಿಂದ ಮೇಲೆತ್ತಲಾಗಿದೆ.

ಉಗ್ರರಿಂದ ಕೋವಿಡ್ ದಿನಗಳ ದುರ್ಬಳಕೆ

ಮಾಸ್ಕೋ, ಅ. 30: ಕೋವಿಡ್ 19 ಬಿಕ್ಕಟ್ಟನ್ನು ಭಯೋತ್ಪಾದಕರು ಅವಕಾಶವನ್ನಾಗಿ ಬಳಸಿಕೊಳ್ಳುತ್ತಿರುವುದಾಗಿ ರಷ್ಯಾ ಹೇಳಿದೆ. ಸಾಂಕ್ರಾಮಿಕವು ಕೆಲವು ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳ ಬಿಕ್ಕಟ್ಟುಗಳಿಗೆ ಶೀಘ್ರವಾಗಿ ಸ್ಪಂದಿಸಲು ಸಿದ್ಧವಿಲ್ಲದಿರುವಿಕೆಯನ್ನು ಬಹಿರಂಗಪಡಿಸಿದೆ, ಕೆಲವು ದೇಶಗಳು ಭಯೋತ್ಪಾದನೆ ಬೆದರಿಕೆಗಳಿಗೆ ಗುರಿಯಾಗುವುದನ್ನು ಬಹಿರಂಗಪಡಿಸಿದೆ ಎಂದು ರಷ್ಯಾದ ರಾಜತಾಂತ್ರಿಕರು ಅಭಿಪ್ರಾಯಪಟ್ಟಿದ್ದಾರೆ. ವಿಶ್ವದ ಕೆಲವು ಪ್ರದೇಶಗಳಲ್ಲಿ, ಭಯೋತ್ಪಾದನಾ ಬೆದರಿಕೆಗಳು ಸಾಂಕ್ರಾಮಿಕದ ಬೆಳಕಿನಲ್ಲಿ ಹೊರಹೊಮ್ಮಿದ ಪರಿಸ್ಥಿತಿಯನ್ನು ತಮ್ಮ ಪ್ರಭಾವವನ್ನು ಬಲಪಡಿಸಲು, ದುರುದ್ದೇಶಪೂರಿತ ಸಿದ್ಧಾಂತವನ್ನು ಉತ್ತೇಜಿಸಲು ಮತ್ತು ಹೊಸ ಬೆಂಬಲಿಗರನ್ನು ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತಿದೆ ಎಂದು ಉಪ ವಿದೇಶಾಂಗ ಸಚಿವ ಸಿರೋಮೊಲೊಟೊವ್ ಹೇಳಿದ್ದಾರೆ.

ಬಿಜೆಪಿ ಪ್ರಮುಖರ ಹತ್ಯೆಯಲ್ಲಿ ಲಷ್ಕರ್ ಕೈವಾಡ

ಶ್ರೀನಗರ, ಅ. 30: ಕುಲ್ಗಾಮ್‍ನಲ್ಲಿ ಮೂವರು ಬಿಜೆಪಿ ಕಾರ್ಯಕರ್ತರ ಹತ್ಯೆಯ ಹಿಂದೆ ಲಷ್ಕರ್ ಎ ತೊಯ್ಬಾ ಉಗ್ರರ ಕೈವಾಡವಿದೆ ಎಂದು ಕಾಶ್ಮೀರ ವಲಯದ ಐಜಿಪಿ ವಿಜಯ್ ಕುಮಾರ್ ಶುಕ್ರವಾರ ತಿಳಿಸಿದ್ದಾರೆ. ಉಗ್ರರು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಫಿದಾ ಹುಸೇನ್ ಇಟೂ, ಇನ್ನಿಬ್ಬರು ಕಾರ್ಯಕರ್ತರಾದ ಉಮರ್ ಹಜಾಮ್ ಹಾಗೂ ಹರೂನ್ ರಶೀದ್ ಬೇಗ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಎಲ್‍ಇಟಿಯ ಛದ್ಮ ಸಂಘಟನೆಯಾಗಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‍ಎಫ್) ಈ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ. ಹತ್ಯೆಗೆ ಬಳಕೆ ಮಾಡಲಾಗಿದ್ದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಲಿಫ್ಟ್ ಗುಂಡಿಗೆ ಬಿದ್ದು ಮಗು ಸಾವು

ಬೆಂಗಳೂರು, ಅ. 30: ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್‍ಗಾಗಿ ತೋಡಿದ್ದ ಗುಂಡಿಯಲ್ಲಿ ಬಿದ್ದು ಎರಡು ವರ್ಷದ ಮಗು ಮೃತಪಟ್ಟಿರುವ ದಾರುಣ ಘಟನೆ ನಗರದ ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿನೋದ್‍ಕುಮಾರ್ ಮೃತಪಟ್ಟ ಮಗು. ಮೃತ ಮಗುವಿನ ತಂದೆ ಮೂಲತಃ ಕೊಪ್ಪಳ ತಾಲೂಕಿನವರಾಗಿದ್ದು, ಬಿಜಿಎಸ್ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ದಂಪತಿ, ನಿರ್ಮಾಣ ಹಂತದ ಕಟ್ಟಡ ಬಳಿಯ ಶೆಡ್‍ನಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ. ರಮೇಶ್ ಎಂಬುವರಿಗೆ ಸೇರಿದ್ದ ಜಾಗದಲ್ಲಿ ಕಟ್ಟಡ ನಿರ್ಮಿಸ ಲಾಗಿತ್ತು. ಇಂದು ಬೆಳಿಗ್ಗೆ ತಂದೆ ಕೆಲಸಕ್ಕೆ ತೆರಳಿದ್ದು, ತಾಯಿ ಸ್ನಾನ ಮಾಡುತ್ತಿದ್ದ ಸಮಯದಲ್ಲಿ ಮಗು ಆಟವಾಡುತ್ತಾ ಗುಂಡಿ ಬಳಿ ಹೋಗಿ ಬಿದ್ದಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ದಿಬ್ಬಣದ ವ್ಯಾನ್ ಉರುಳಿ 7 ಸಾವು

ಅಮರಾವತಿ, ಅ. 30: ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ತಂಟಿಕೊಂಡ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಮದುವೆ ದಿಬ್ಬಣದ ವ್ಯಾನ್ ಉರುಳಿ 7 ಜನ ಮೃತಪಟ್ಟಿದ್ದಾರೆ. ಜಿಲ್ಲೆಯ ಗೋಕವರಂ ಮಂಡಲದ ತಂಟಿಕೊಂಡ ಘಾಟ್ ರಸ್ತೆಯ ವೆಂಕಟೇಶ್ವರಸ್ವಾಮಿ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಮದುವೆ ಮುಗಿಸಿಕೊಂಡು ವಾಪಸಾಗುವಾಗ ಬ್ರೇಕ್ ವೈಫಲ್ಯದಿಂದಾಗಿ ತಂಟಿಕೊಂಡ ಬಳಿ ಬೆಟ್ಟದಿಂದ ವ್ಯಾನ್ ಉರುಳಿ ಬಿದ್ದು ಈ ಅಪಘಾತ ಸಂಭವಿಸಿದೆ.