ಸೋಮವಾರಪೇಟೆ/ವೀರಾಜಪೇಟೆ, ಅ.28: ಯಾವುದೇ ಸರಕಾರಿ ನೌಕರ ತನ್ನ ದಿನನಿತ್ಯದ ಕೆಲಸಗಳನ್ನು ಮಾಡಲು ವಿಳಂಬ, ನಿರ್ಲಕ್ಷತೆ ಅಥವಾ ಲಂಚ ಕೇಳಿ ದಲ್ಲಿ ಕೊಡಗು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆ ಅಥವಾ ಪೊಲೀಸ್ ಅಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ, ದಕ್ಷಿಣ ವಲಯ ಮೈಸೂರು ಇವರಲ್ಲಿ ದೂರು ನೀಡಬಹುದು ಎಂದು ಭ್ರಷ್ಟಾಚಾರ ನಿಗ್ರಹದ ದಳದ ನಿರೀಕ್ಷಕ ಶ್ರೀಧರ್ ಹೇಳಿದರು.

ತಾ. 27 ರಂದು ಸೋಮವಾರಪೇಟೆಯ ಪತ್ರಿಕಾಭವನದಲ್ಲಿ ಹಾಗೂ ತಾ. 28ರಂದು ವೀರಾಜಪೇಟೆ ಪುರಭವನದ ಸಭಾಂಗಣದಲ್ಲಿ ಆಯೋಜಿಸಿದ್ದ “ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ಕಾರಿ ನೌಕರನ ಆಸ್ತಿ ಗಳಿಕೆ, ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ ಇತ್ಯಾದಿಗಳ ವಿರುದ್ಧ ಲಿಖಿತ ಅಥವಾ ಮೌಖಿಕ ದೂರು ನೀಡಬಹುದು. ಯಾವ ರೀತಿಯಲ್ಲಿ ದೂರು ನೀಡಬೇಕು ಎಂಬುದನ್ನು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು. ಯಾವುದೇ ದೂರಿಗೂ ಕಚೇರಿಯನ್ನು ಸಂಪರ್ಕಿಸಿದರೆ ಸಹಕಾರ ನೀಡಲಾಗುವುದು ಎಂದರು.

ವೀರಾಜಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ನಿರೀಕ್ಷಕಿ ಶಿಲ್ಪಾ ಮಾತನಾಡಿ ಸಾರ್ವಜನಿಕ ಕೆಲಸಕ್ಕೆ ಲಂಚಕ್ಕಾಗಿ ಒತ್ತಾಯಿಸುವುದು, ಲಂಚ ಪಡೆಯುವುದು, ಸಾರ್ವಜನಿಕ ಹುದ್ದೆಯನ್ನು ಬಳಸಿಕೊಂಡು ಬೇರೇ ರೀತಿಯ ಅವ್ಯವಹಾರಗಳನ್ನು ಮಾಡುವುದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಅಪರಾಧವಾಗಲಿದೆ. ಸಾರ್ವಜನಿಕರ ಸಹಕಾರವಿದ್ದರೆ ಮಾತ್ರ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.

ಸೋಮವಾರಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಸ್. ಮಹೇಶ್, ಇಲಾಖಾಧಿಕಾರಿಗಳಾದ ದಿನೇಶ್, ಲೋಹಿತ್, ಪ್ರವೀಣ್ ಉಪಸ್ಥಿತರಿದ್ದರು.