ವೀರಾಜಪೇಟೆ, ಅ. 29: ಈ ಬಾರಿಯೂ ಮಂಗಳೂರು ವಿಶ್ವ ವಿದ್ಯಾನಿಲಯದ ಪದವಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರ ಕೊಡಗು ಜಿಲ್ಲೆಯಲ್ಲಿ ಆರಂಭಗೊಳ್ಳದಿರುವುದರಿಂದ ಮೌಲ್ಯಮಾಪನಕ್ಕೆ ಜಿಲ್ಲೆಯಿಂದ ತೆರಳುವ ಉಪನ್ಯಾಸಕರು ಕೊರೊನಾ ಆತಂಕ ಎದುರಿಸುವಂತಾಗಿದ್ದು ನಿಗದಿತ ಸಮಯದ ಮೌಲ್ಯ ಮಾಪನಕ್ಕೆ ವಿಳಂಬವಾಗಲಿದೆ.

ಮಂಗಳೂರು ವಿಶ್ವವಿದ್ಯಾ ನಿಲಯದ ಅಂತಿಮ ಪದವಿ ವಿದ್ಯಾರ್ಥಿಗಳ ಪರೀಕ್ಷೆ ಮುಕ್ತಾಯ ಗೊಂಡಿದ್ದು, ಮೌಲ್ಯಮಾಪನಕ್ಕೂ ಆದೇಶಿಸಲಾಗಿದೆ. ಪ್ರತಿವರ್ಷದಂತೆ ಮಂಗಳೂರಿನ ಮೌಲ್ಯಮಾಪನ ಕೇಂದ್ರದ ಜೊತೆಗೆ ಉಡುಪಿಯಲ್ಲು ಈ ಬಾರಿ ಮೌಲ್ಯಮಾಪನ ಕೇಂದ್ರವನ್ನು ಆರಂಭಿಸಲಾಗಿದೆ. ಮಂಗಳೂರಿನಿಂದ ಕೇವಲ 60 ಕಿ.ಮೀ ಅಂತರದಲ್ಲಿರುವ ಉಡುಪಿಯಲ್ಲಿ ಮೌಲ್ಯಮಾಪನ ಕೇಂದ್ರ ಆರಂಭಿಸಿದ್ದರೂ ಮಂಗಳೂರಿ ನಿಂದ ಸುಮಾರು 130 ಕಿ.ಮೀ ದೂರದಲ್ಲಿರುವ ಕೊಡಗಿನ ಜಿಲ್ಲಾ ಕೇಂದ್ರವಾದ ಮಡಿಕೇರಿ ಮೌಲ್ಯ ಮಾಪನ ಕೇಂದ್ರ ಆರಂಭಿಸಲು ಪರೀಕ್ಷಾಂಗ ವಿಭಾಗ ನಿರ್ಧಾರ ಕೈಗೊಂಡಿಲ್ಲ. ಮಡಿಕೇರಿಯಲ್ಲಿ ಮೌಲ್ಯಮಾಪನ ಕೇಂದ್ರ ಆರಂಭಿಸ ಬೇಕು ಎನ್ನುವ ಉಪನ್ಯಾಸಕರ ಬೇಡಿಕೆ ಹತ್ತಾರು ವರ್ಷಗಳ ಹಿಂದಿನದು. ಕೊರೊನಾ ಆತಂಕ ಕಾಡುತ್ತಿರುವುದ ರಿಂದ ಈ ಬಾರಿ ಖಂಡಿತವಾಗಿ ಮಡಿಕೇರಿಯಲ್ಲಿ ಮೌಲ್ಯಮಾಪನ ಕೇಂದ್ರ ಆರಂಭಿಸಬಹುದು ಎನ್ನುವ ಜಿಲ್ಲೆಯ ಉಪನ್ಯಾಸಕರ ನಿರೀಕ್ಷೆ ಈ ಸಲವು ಹುಸಿಯಾಗಿದೆ. ಉಳಿದೆಲ್ಲ ಸಂದರ್ಭಕ್ಕಿಂತಲೂ ಈ ಬಾರಿ ಆಯಾ ಜಿಲ್ಲೆಯಲ್ಲಿಯೇ ಮೌಲ್ಯ ಮಾಪನ ನಡೆಸುವುದು ಅತಿ ಅಗತ್ಯ ಎನ್ನುವುದು ಹೆಚ್ಚಿನ ಉಪನ್ಯಾಸಕರ ಅಭಿಪ್ರಾಯವಾಗಿದೆ.

ಜಿಲ್ಲೆಯಲ್ಲಿ ಸುಮಾರು 15ಕ್ಕು ಹೆಚ್ಚು ಪದವಿ ಕಾಲೇಜುಗಳಿದ್ದು, ಸುಮಾರು 100 ರಿಂದ 150 ಮಂದಿ ಉಪನ್ಯಾಸಕರು ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುತ್ತಾರೆ. ಇದರಿಂದ ಜಿಲ್ಲೆಯಲ್ಲು ಮೌಲ್ಯಮಾಪನ ಕೇಂದ್ರ ಆರಂಭಗೊಂಡರೆ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಉಪನ್ಯಾಸಕರು ಮೌಲ್ಯಮಾಪನಾ ಕಾರ್ಯದಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.

ಈ ಕುರಿತು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಡಾ.ಪಿ.ಎಲ್.ಧರ್ಮ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿ, ಮಡಿಕೇರಿಯಲ್ಲಿ ಮೌಲ್ಯಮಾಪನ ಕೇಂದ್ರವನ್ನು ಆರಂಭಿಸುವ ಕುರಿತು ಆಯಾಯ ವಿಷಯದ ಅಧ್ಯಕ್ಷರಿಗೆ ಅಧಿಕಾರ ನೀಡಲಾಗಿದೆ. ಈ ಬಾರಿ ಉತ್ತರ ಪತ್ರಿಕೆಗಳ ಸಂಖ್ಯೆಯು ಸಾಕಷ್ಟು ಕಡಿಮೆ ಇದೆ. ಅ. 27 ರಿಂದ ಬಿ.ಕಾಂ ವಿಭಾಗದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಆರಂಭಗೊಂಡಿದ್ದು, ತಾಂತ್ರಿಕ ಕಾರಣಗಳಿಂದ ಈ ಬಾರಿ ವಾಣಿಜ್ಯ ವಿಭಾಗದ ಮಾಲ್ಯಮಾಪನ ಕೇಂದ್ರ ವನ್ನು ಮಡಿಕೇರಿಯಲ್ಲಿ ಆರಂಭಿಸ ಲಾಗುತ್ತಿಲ್ಲ. ಕಲಾ ಹಾಗೂ ವಿಜ್ಞಾನ ವಿಷಯಗಳ ಮೌಲ್ಯಮಾಪನ ಕಾರ್ಯ ನ. 2 ರಿಂದ ಆರಂಭಗೊಳ್ಳಲಿರುವುದ ರಿಂದ ಅಷ್ಟರೊಳಗೆ ಮಡಿಕೇರಿಯಲ್ಲಿ ಈ ವಿಷಯಗಳ ಮೌಲ್ಯಮಾಪನ ಕೇಂದ್ರ ಆರಂಭಿಸುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳ ಲಾಗುವುದು.

ಮುಂದಿನ ಸಾಲಿನಿಂದ ಮಡಿಕೇರಿಯಲ್ಲಿ ವಾಣಿಜ್ಯ ಸೇರಿದಂತೆ ಎಲ್ಲ ವಿಷಯಗಳ ಮೌಲ್ಯಮಾಪನ ಕೇಂದ್ರವನ್ನು ಆರಂಭಿಸಲು ಪರೀಕ್ಷಾಂಗ ವಿಭಾಗ ಚಿಂತನೆ ನಡೆಸಿದೆ ಎಂದು ಮಾಹಿತಿ ನೀಡಿದರು.