ವಿಶೇಷ ವರದಿ : ಕುಡೆಕಲ್ ಸಂತೋಷ್, ಅಂಚೆಮನೆ ಸುಧಿಕುಮಾರ್ ಮಡಿಕೇರಿ, ಅ. 29: ಕಾಡಿನಲ್ಲೇ ಹುಟ್ಟಿ., ಕಾಡಿನಲ್ಲೇ ಬೆಳೆದು, ಕಾಡಲ್ಲೇ ಸಿಗುವ ಗೆಡ್ಡೆ - ಗೆಣಸು, ಹಣ್ಣು - ಹಂಪಲುಗಳನ್ನು ತಿಂದುಂಡು, ಕಾಡೇ ನಮ್ಮ ಉಸಿರು., ಕಾಡು ನಮ್ಮ ದೇವರೆಂದು ಕಾಡನ್ನೇ ಅಡವಿದೇವಿಯೆಂದು ಆರಾಧಿಸುತ್ತಾ., ಕಾಡಿನ ವಾಸಿಗಳಾಗಿ ಬದುಕು ಸಾಗಿಸುತ್ತಾ ಬರುತ್ತಿದ್ದ ಆದಿವಾಸಿಗಳೀಗ ಬದಲಾಗುತ್ತಿದ್ದಾರೆ. ಆಧುನಿಕ ನಾಗಾಲೋಟದ ಭರಾಟೆಯಲ್ಲಿ ಬದಲಾವಣೆ ಅನಿವಾರ್ಯವಾದರೂ ಈ ಮುಗ್ಧ ಜೀವಗಳು ತಾವಾಗಿ ಬದಲಾಗದೇ ಬದುಕಿನ ಭರವಸೆಯನ್ನು ಅರಸುತ್ತಾ ಅನ್ಯಧರ್ಮಕ್ಕೆ ಮತಾಂತರಗೊಳ್ಳುತ್ತಿರುವದು ಪ್ರಸ್ತುತ ಬೆಳವಣಿಗೆಯಾಗಿದೆ.ಅಡವಿದೇವಿಯನ್ನೇ ಆರಾಧಿಸುತ್ತಾ ಬರುತ್ತಿದ್ದವರೀಗ ಅಡವಿಪೂಜೆ - ಪುನಸ್ಕಾರಗಳನ್ನು ಮರೆಯುತ್ತಿದ್ದಾರೆ. ಬದಲಿಗೆ ಕ್ರೈಸ್ತ ಧರ್ಮದ ಪ್ರಾರ್ಥನೆ, ಗಂಟೆ ಭರಾಟೆಯಲ್ಲಿ ಮುಳುಗಿದ್ದಾರೆ..! ತಕ್ಷಣಕ್ಕೆ ನಂಬಲಸಾಧ್ಯವಾದರೂ ನಡೆಯುತ್ತಿರುವ ವಿಚಿತ್ರ ಬೆಳವಣಿಗೆಯಂತೂ ಸತ್ಯ. ಅರಣ್ಯದೊಳಗಿನ ಹಾಡಿಗಳಲ್ಲಿ ಬಿದಿರು ತಟ್ಟಿಗಳಿಂದ ಹೆಣೆದ ಗೋಡೆ, ಹುಲ್ಲು ಹಾಸಿನ ಜೋಪಡಿಗಳಲ್ಲಿ ಜೀವನ ಸಾಗಿಸುತ್ತಾ ಬರುತ್ತಿದ್ದ ಆದಿವಾಸಿಗಳ ಮೂಲೋತ್ಥಾನಕ್ಕಾಗಿ ಸರಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕಾಲಕ್ಕೆ ತಕ್ಕಂತೆ ಬರಬರುತ್ತಾ ಒಂದಷ್ಟು ನಾಗರಿಕತೆಯತ್ತ ಮುಖ ಮಾಡುತ್ತಿರುವಾಗಲೇ ಇವರುಗಳ ಮೇಲೆ ಮತಾಂತರವೆಂಬ ಕರಿಛಾಯೆ ಆವರಿಸತೊಡಗಿದೆ. ಹಣ - ಇನ್ನಿತರ ಸೌಕರ್ಯಗಳ, ಪ್ರಾರ್ಥನೆಯಿಂದ ಉತ್ತಮ ಬದುಕು ಕಟ್ಟಿಕೊಳ್ಳಬಹುದೆಂಬ ಆಮಿಷಗಳನ್ನು ಈ ಮುಗ್ಧ ಜನರ ಮುಂದಿಟ್ಟು ಮತಾಂತರದ ಬಲೆ ಹೆಣೆಯಲಾಗುತ್ತಿದೆ. ಜೋಪಡಿಯಲ್ಲಿ, ಕತ್ತಲ ಕೂಪದಲ್ಲೇ ಬದುಕು ಸವೆಸುತ್ತಿರುವ ಈ ಆದಿವಾಸಿಗಳು ಉತ್ತಮ ಬದುಕಿನ ಆಶಾಭಾವನೆ ಯೊಂದಿಗೆ ಮತಾಂತರಗೊಳ್ಳುತ್ತಿರುವದು ದುರಂತವೇ ಸರಿ.!

ಹಾಡಿಗಳು ಟಾರ್ಗೆಟ್!

ಮತಾಂತರವೆಂಬ ಭೂತ ಇಂದು - ನಿನ್ನೆಯದೇನಲ್ಲ. ಹಿಂದಿನಿಂದಲೇ ಇದರ ಬೇರು ಆಳವಾಗಿ ನೆಲೆಯೂರಿದೆ. ಪರಿಶಿಷ್ಟರ ಕಾಲೋನಿಗಳ ನಿವಾಸಿಗಳು, ಸಂಕಷ್ಟದಲ್ಲಿರುವವರನ್ನು ಮಾತಿನಲ್ಲೇ ಮರುಳು ಮಾಡಿ ಮತಾಂತರಗೊಳಿಸುವ ಪ್ರಕ್ರಿಯೆ ವ್ಯಾಪಕವಾಗಿಯೇ ನಡೆಯುತ್ತಿದೆ. ಇದಕ್ಕೆ ವಿರೋಧ ವ್ಯಕ್ತಗೊಂಡು ಗಲಭೆಗಳಾಗಿ ಪೊಲೀಸ್ ಠಾಣಾ ಮೆಟ್ಟಿಲೇರಿರುವ ಪ್ರಕರಣಗಳೂ ನಡೆದಿವೆ.

ಇದೀಗ ಕುರುಬ ಜನಾಂಗದವರು ವಾಸಿಸುವ ಹಾಡಿಗಳತ್ತ ಮತಾಂತರವೆಂಬ ಭೂತ ಹೆಜ್ಜೆಯಿಕ್ಕಿದೆ. ದಕ್ಷಿಣ ಕೊಡಗಿನ ವೀರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇಟ್‍ಹಾಡಿ, ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯ ಬಸವನಹಳ್ಳಿ, ದಿಡ್ಡಳ್ಳಿ, ದೊಡ್ಡರೇಷ್ಮೆ ಮತ್ತು ಸಣ್ಣ ರೇಷ್ಮೆ ಹಾಡಿಗಳಲ್ಲಿನ ಬಹುತೇಕ ಮಂದಿ ಜೇನುಕುರುಬರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವದು ಕಂಡು ಬರುತ್ತದೆ. ಅದರಲ್ಲೂ ದಿಡ್ಡಳ್ಳಿ ಹಾಡಿಯ ಶೇ. 90 ರಷ್ಟು ಮಂದಿ ಮತಾಂತರಗೊಂಡಿದ್ದಾರೆ.

ಬಿಟ್ಟು ಕೊಡದ ಗುಟ್ಟು..!

ಮತಾಂತರಗೊಂಡಿದ್ದರೂ ಮೇಲ್ನೋಟಕ್ಕೆ ಯಾರೂ ಕೂಡ ಒಪ್ಪಿಕೊಳ್ಳಲು ತಯಾರಿಲ್ಲದಿದ್ದರೂ ಅವರುಗಳ ಬದಲಾದ ಜೀವನ ಶೈಲಿ ಹಾಗೂ ಹಾವ - ಭಾವಗಳಲ್ಲಿ ಸ್ಪಷ್ಟಗೋಚರವಾಗುತ್ತದೆ. ಕ್ರೈಸ್ತ ಧರ್ಮ ಪರಿಪಾಲನೆಯಂತೆ ಮತಾಂತರಗೊಂಡವರ ಹೆಸರುಗಳೂ ಕೂಡ ಬದಲಾಗಿವೆ. ಕೆಂಚ, ಕುಳ್ಳ, ರಾಮ, ಕೃಷ್ಣ

(ಮೊದಲ ಪುಟದಿಂದ) ಎಂಬಿತ್ಯಾದಿ ಹೆಸರುಗಳಿದ್ದುದು ಇದೀಗ ಬದಲಾಗಿವೆ. ಹಾಡಿಗೆ ಭೇಟಿಯಿತ್ತಾಗ ಎದುರು ಸಿಕ್ಕ ಮಹಿಳೆಯರು, ಮಕ್ಕಳ ಹೆಸರು ಕೇಳಿದಾಗ ತಮ್ಮ ಮೂಲ ಹೆಸರು ಹೇಳಲು ತಡಕಾಡುತ್ತಿದ್ದುದು ಕಂಡು ಬಂದಿತು. ಒಂದು ಮನೆಯಲ್ಲಿ ವಿಚಾರಿಸಿ ಮತ್ತೊಂದು ಮನೆಗೆ ಹೋಗುವಷ್ಟರಲ್ಲಿ ಮನೆಯಂಗಳದಲ್ಲಿದ್ದ ಮಕ್ಕಳು, ಮಹಿಳೆಯರಲ್ಲಿ ಕೆಲವರು ಓಟಕಿತ್ತರೆ, ಮತ್ತೆ ಕೆಲವರು ಬಾಗಿಲು ಹಾಕಿ ಒಳಗೆ ಸೇರಿಕೊಂಡ ಘಟನೆಯೂ ನಡೆಯಿತು. ಇನ್ನೂ ಕೆಲವರು ನಮ್ಮಲ್ಲಿ ಯಾರೂ ಮತಾಂತರ ಆಗಿಲ್ಲ, ಆ ಕಡೆಯವರು ಆಗಿದ್ದಾರೆ ಅಂತ ಹೇಳಿದರೆ; ಆ ಕಡೆಗೆ ಹೋಗಿ ವಿಚಾರಿಸುವಾಗ ನಾವು ಆಗಿಲ್ಲ ಈ ಕಡೆಯವರು ಆಗಿದ್ದಾರೆ ಎಂಬ ಉತ್ತರ ಬರುತ್ತಿತ್ತು. ಹಾಡಿಯ ಒಳಹೊಕ್ಕು ನೋಡಿದಾಗ ಎಲ್ಲಾ ಕಡೆಯವರು ಮತಾಂತರವಾಗಿರುವದು ಗೋಚರಿಸಿತು.

ಹಾಡಿಯಲ್ಲೇ ಏಜೆಂಟರು..!

ಆದಿವಾಸಿಗಳ ಮನವೊಲಿಸಿ, ಮತಾಂತರಗೊಳ್ಳಲು ಪ್ರೇರೇಪಣೆ ಮಾಡಲು ಹಾಡಿಗಳಲ್ಲೇ ವಾಸವಿರುವ ಆದಿವಾಸಿಗಳನ್ನೇ ಏಜೆಂಟರುಗಳನ್ನಾಗಿ ಮಾಡಲಾಗಿದೆ. ಮೊದಲು ಅವರ ಮನವೊಲಿಸಿ, ಒಂದಷ್ಟು ಹಣ - ಆಮಿಷಗಳನ್ನು ಒದಗಿಸಿ ನಂತರ ಅವರ ಮೂಲಕ ಇತರರನ್ನು ಮತಾಂತರಗೊಳಿಸಲಾಗುತ್ತಿದೆ. ಇದಕ್ಕೂ ಕೂಡ ಏಜೆಂಟರುಗಳಿಗೆ ಕಮಿಷನ್ ಸಿಗುತ್ತದೆ. ಮತಾಂತರಗೊಂಡವರಿಗೂ ಸೌಲಭ್ಯ ನೀಡಲಾಗುತ್ತದೆ. ದಿಡ್ಡಳ್ಳಿ - ಬಸವನಹಳ್ಳಿ ಹಾಡಿಗಳಲ್ಲಿ ಈ ಕಾರ್ಯಕ್ಕಾಗಿ ಇಬ್ಬರು ಏಜೆಂಟರುಗಳನ್ನು ನೇಮಕ ಮಾಡಿರುವದು ತಿಳಿದು ಬಂದಿದೆ.

ಹುಣಸೂರಿನಲ್ಲಿ ಧೀಕ್ಷೆ..!

ಮನಪರಿವರ್ತನೆಯಾಗಿ ಮತಾಂತರಕ್ಕೆ ಸಮ್ಮತಿ ಸೂಚಿಸುವ ಮಂದಿಯನ್ನು ಹುಣಸೂರಿನ ಚರ್ಚ್‍ಗೆ ಕರೆದೊಯ್ಯಲಾಗುತ್ತದೆ. ಏಜೆಂಟರುಗಳ ಮುಖಾಂತರ ಮಾಲ್ದಾರೆಯ ಗೇಟ್ ಹಾಡಿಗೆ ಲಾರಿ, ವ್ಯಾನ್‍ಗಳು ಪ್ರತಿ ಭಾನುವಾರ ಬೆಳಿಗ್ಗೆ ಬರುತ್ತವೆ. ಅದರಲ್ಲಿ ಕರೆದೊಯ್ದು ಚರ್ಚ್‍ನಲ್ಲಿ ಕ್ರೈಸ್ತ ಧರ್ಮದ ಧೀಕ್ಷೆ ಪ್ರಾಪ್ತಿ ಮಾಡಲಾಗುತ್ತದೆ. ನಂತರದ ದಿನಗಳಲ್ಲಿ ಮಾಡಬೇಕಾದ ಪ್ರಾರ್ಥನೆ, ಪ್ರಕ್ರಿಯೆಗಳನ್ನು ಹೇಳಿಕೊಡಲಾಗುತ್ತದೆ. ಅಲ್ಲಿಂದ ಮರಳುವ ಮಂದಿ ತಮ್ಮ ಮನೆಯಲ್ಲೇ ಚರ್ಚ್‍ನಲ್ಲಿ ಹೇಳಿಕೊಟ್ಟ ವಿಧಿ - ವಿಧಾನಗಳನ್ನು ಪರಿಪಾಲನೆ ಮಾಡತೊಡಗುತ್ತಾರೆ. ಪ್ರತಿ ಭಾನುವಾರ ವಿಶೇಷ ಪ್ರಾರ್ಥನೆಗಾಗಿ ಹುಣಸೂರಿಗೆ ತಂಡೋಪತಂಡವಾಗಿ ತೆರಳುತ್ತಿರುವದು ಪರಿಪಾಠವಾಗಿದೆ. ಗೇಟ್‍ನಲ್ಲಿರುವ ಪೊಲೀಸ್ ಅಧಿಕಾರಿ ಕೂಡ ಈ ವಿಚಾರವನ್ನು ಹೇಳುತ್ತಾರೆ.

ಮೂಲ ಸಂಸ್ಕøತಿ ಮೂಲೆಗೆ..!

ಮೂಲ ಹೆಸರಿನೊಂದಿಗೆ ಜೀವನ ಕ್ರಮವನ್ನೇ ಬದಲಾಯಿಸಿಕೊಂಡಿರುವ ಆದಿವಾಸಿಗಳು ತಮ್ಮ ಮೂಲ ಸಂಸ್ಕøತಿಯನ್ನು ಕೂಡ ಮರೆಯುತ್ತಿದ್ದಾರೆ. ಜೇನು ಕುಯ್ಯುವಲ್ಲಿ ನಿಸ್ಸೀಮರಾಗಿರುವ ಜೇನುಕುರುಬರು ಇದೀಗ ಅದನ್ನು ಮರೆತ್ತಿದ್ದಾರೆ. ಅಡವಿದೇವಿ ಅಂಬಾಳಮ್ಮನನ್ನು ಪೂಜಿಸುತ್ತಿದ್ದವರು ಶಿಲುಬೆಯಿಟ್ಟು ಪ್ರಾರ್ಥಿಸುತ್ತಿದ್ದಾರೆ. ಕೇಕೆ ಹಾಕುತ್ತಾ ಕುರುಬರ ಹಾಡು, ಕುಂಡೆ ಹಾಡು ಹಾಡುತ್ತಿದ್ದ ಮಂದಿ ಇದೀಗ ಚಪ್ಪಾಳೆ ತಟ್ಟುತ್ತಾ, ಗಂಟೆ ಬಾರಿಸುತ್ತಾ ಪ್ರಾರ್ಥನೆ ಮಾಡುತ್ತಿದ್ದಾರೆ. ಸಣ್ಣಪುಟ್ಟ ಕಾಯಿಲೆ ಬಂದಾಗ, ಗಾಯಗಳಾದಾಗ ತಮ್ಮ ಗುಡಿಸಲು ಹಿತ್ತಲಲ್ಲೇ ದೊರಕುತ್ತಿದ್ದ ಗಿಡಮೂಲಿಕೆಗಳಿಂದ ಔಷಧಿ ಮಾಡಿಕೊಳ್ಳುತ್ತಿದ್ದ ಜನರೀಗ ಶಿಲುಬೆಯೆದುರು ಪ್ರಾರ್ಥಿಸುತ್ತಾ, ಬೊಬ್ಬಿಡುತ್ತಾ ಪರಿಹಾರ ಕಂಡುಕೊಳ್ಳುವಲ್ಲಿ ನಿರತರಾಗಿದ್ದಾರೆ, ಆಹಾರ ಪದ್ಧತಿಯೂ ಬದಲಾಗಿದೆ.!

ಕೆಲವೊಂದು ಬದಲಾವಣೆಗಳಾಗಿವೆ

ಜೀವನ ಶೈಲಿಯೂ ಉತ್ತಮವಾಗಿದೆ!

ಮತಾಂತರಗೊಂಡವರಲ್ಲಿ ಕೆಲವರಲ್ಲಿ ಒಂದಿಷ್ಟು ಬದಲಾವಣೆಗಳು ಕಂಡು ಬಂದಿವೆ. ಕೂಲಿಗೆ ಹೋಗುತ್ತಿದ್ದವರ ಕೆಲವರ ಮನೆಗಳೀಗ ಆರ್‍ಸಿಸಿ ರೂಪ ತಳೆದುಕೊಳ್ಳುತ್ತಿವೆ. ಮನೆಯೆದುರು ಜೀಪು, ವ್ಯಾನ್, ಬೈಕ್‍ಗಳು ಕಂಡುಬರುತ್ತಿವೆ. ಕೆಲಸ ಬಿಟ್ಟು ಬಾಡಿಗೆಗೆ ವಾಹನ ಚಲಾಯಿಸುತ್ತಿರುವದೂ ಕಂಡು ಬರುತ್ತಿದೆ. ಕೆಲವರು ಶುಂಠಿ, ಕೆಸ, ಗೆಣಸುಗಳನ್ನು ಬೆಳೆದು ಆರ್ಥಿಕ ಅಭಿವೃದ್ಧಿಯತ್ತ ತೊಡಗಿಸಿಕೊಂಡಿರುವದು ಇತ್ತೀಚಿನ ಬೆಳವಣಿಗೆಯಾಗಿದೆ. ಹಾಡಿವಾಸಿಗಳ ಉಡುಗೆ, ಮಾತಿನ ಶೈಲಿ ಬದಲಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಮದ್ಯಸೇವಿಸಿ ಮೈಮರೆಯುತ್ತಿದ್ದ ಮಂದಿ ಮದ್ಯಪಾನ ತೊರೆದಿರುವದು ವಿಶೇಷವಾಗಿದೆ. ಇದೊಂದು ಹಾಡಿ ನಿವಾಸಿಗಳಲ್ಲಿನ ಉತ್ತಮ ಬದಲಾವಣೆ ಎನ್ನಬಹುದು.

ಕಾಡನ್ನೇ ಆರಾಧ್ಯ ದೈವವೆಂದು ಭಾವಿಸಿ, ಪೂಜಿಸುತ್ತಾ, ಗೌರವಿಸುತ್ತಾ ಬರುತ್ತಿರುವ ಮುಗ್ಧ ಮನಸಿನ ಆದಿವಾಸಿಗಳಿಗೆ ಆಮಿಷವೊಡ್ಡಿ ಮತಾಂತರದ ಚಕ್ರವ್ಯೂಹದ ಸುಳಿಯಲ್ಲಿ ಸಿಲುಕಿಸುತ್ತಿರುವದರ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ. ಮತಾಂತರದ ವಿರುದ್ಧ ಹೋರಾಡುತ್ತಿರುವ ಸಂಘಟನೆಗಳು ಎಲ್ಲಿವೆ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಇದೂ ಹೀಗೆ ಮುಂದುವರಿದರೆ ಮುಂದೊಂದು ದಿನ ಕೊಡಗಿನ ಮೂಲ ನಿವಾಸಿಗಳಲ್ಲೊಂದಾಗಿರುವ ಈ ಆದಿವಾಸಿಗಳ ಅಸ್ತಿತ್ವವೇ ಇಲ್ಲದಾಗಬಹುದೆಂಬ ಆತಂಕ ಕಂಡು ಬರುತ್ತಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ಮತಾಂತರ ಪ್ರಕ್ರಿಯೆಗೆ ಕಡಿವಾಣ ಹಾಕಬೇಕೆಂಬದು ಆದಿವಾಸಿ ಮುಖಂಡರುಗಳ ಅಂಬೋಣ..!