ಮಡಿಕೇರಿ, ಅ. 29: ರಾಜ್ಯಾದ್ಯಂತ ಕೋವಿಡ್-19 ಪ್ರಕರಣಗಳಲ್ಲಿ ಇಳಿಕೆಯಾಗುತ್ತಿದ್ದು ಜಿಲ್ಲೆಯಲ್ಲಿಯು ಕೆಲವು ದಿನಗಳಿಂದ ಹೊಸ ಕೋವಿಡ್-19 ಪ್ರಕರಣಗಳು ಇಳಿಕೆಯಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಸರಕಾರ ನಿಗದಿಪಡಿಸಿದ ಗುರಿಗಿಂತಲೂ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸುತ್ತಿದ್ದು ದೃಢೀಕೃತ ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ಸರಕಾರದ ನಿರ್ದೇಶನದಂತೆ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಗಳನ್ನು ಶೀಘ್ರದಲ್ಲೆ ಪತ್ತೆಹಚ್ಚಿ ಪರೀಕ್ಷೆಗೆ ಒಳಪಡಿಸುವ ಕಾರ್ಯ ನಡೆಯುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯುವುದು ಹಾಗೂ ಸರಕಾರದ ಇತರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಸಹಕರಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ತಾ.26 ರಂದು 40 ಪ್ರಕರಣಗಳು ದೃಢವಾಗಿದ್ದು, ತಾ.27 ರಂದು 29, ತಾ.28 ರಂದು 28 ಹಾಗೂ ತಾ.29 ರಂದು 17 ಪ್ರಕರಣಗಳು ದೃಢವಾಗಿದ್ದು ದೃಢೀಕೃತ ಪ್ರಕರಣಗಳಲ್ಲಿ ಇಳಿಮುಖಕ್ಕೆ ಸಾಕ್ಷಿಯಾಗಿವೆ.
ತಾ.29 ರಂದು 17 ಪ್ರಕರಣಗಳು ದೃಢಜಿಲ್ಲೆಯಲ್ಲಿ ತಾ.29 ರಂದು ಹೊಸದಾಗಿ 17 ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 68,764 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು, 4,841 ಮಂದಿಗೆ ಸೋಂಕು ತಗುಲಿದೆ. ಈ ಪೈಕಿ 4,585 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 68 ಮಂದಿ ಸಾವನ್ನಪ್ಪಿದ್ದು 198 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ 46 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 26 ಮಂದಿ ಕೋವಿಡ್ ಕೇರ್ ಸೆಂಟರ್ ನಲ್ಲಿ, 126 ಮಂದಿ ಹೋಮ್ ಐಸೋಲೇಷನ್ ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 199 ನಿಯಂತ್ರಿತ ವಲಯಗಳಿವೆ.