ಕುಶಾಲನಗರ, ಅ. 29: ಕೊಡಗು ಜಿಲ್ಲೆಯಲ್ಲಿ ಅತಿ ಶೀಘ್ರ ಬೆಳವಣಿಗೆ ಕಾಣುತ್ತಿರುವ ವಾಣಿಜ್ಯ ನಗರಿ ಕುಶಾಲನಗರ ಪಟ್ಟಣಕ್ಕೆ ಒಳಚರಂಡಿ ಕಲ್ಪಿಸುವ ಯೋಜನೆ ಕಾಮಗಾರಿಗೆ ಮತ್ತೆ ಮರುಜೀವ ದೊರೆತಿದೆ. ಕಳೆದ 5 ವರ್ಷಗಳಿಂದ ಅಪೂರ್ಣಗೊಂಡಿದ್ದ ಕಾಮಗಾರಿಗೆ ಇದೀಗ ರೂ. 18 ಕೋಟಿ ಎರಡನೇ ಹಂತದ ಅನುದಾನ ದೊರೆತಿದ್ದು ಇಂದು (30 ರಂದು ಯೋಜನೆಯ ಮಲಿನ ನೀರು ಶುದ್ದೀಕರಣ ಘಟಕದ ಕಾಮಗಾರಿ ಪ್ರಾರಂಭಗೊಳ್ಳುವುದರೊಂದಿಗೆ ಹಲವು ವರ್ಷಗಳ ಯೋಜನೆಯ ಕಾಮಗಾರಿಗೆ ಚಾಲನೆ ದೊರೆಯಲಿದೆ.ಕಳೆದ 5 ವರ್ಷಗಳ ಹಿಂದೆ ಪ್ರಾರಂಭಗೊಂಡ ಕುಶಾಲನಗರ ಒಳಚರಂಡಿ ಯೋಜನೆಯ ಕಾಮಗಾರಿ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿದ್ದು ಪಟ್ಟಣದ ನೈರ್ಮಲ್ಯ ವ್ಯವಸ್ಥೆ ಏರುಪೇರಾಗುವುದರೊಂದಿಗೆ ಜೀವನದಿ ಕಾವೇರಿ ಕಲುಷಿತವಾಗುವುದನ್ನು ತಡೆಗಟ್ಟುವ ಪ್ರಮುಖ ಪಾತ್ರ ವಹಿಸುವ ಯೋಜನೆಯೊಂದು ಬಹುತೇಕ ನದಿ ಪಾಲಾದಂತಿತ್ತು. ಪ್ರಥಮ ಹಂತದ ಕಾಮಗಾರಿ 40 ಕೋಟಿ ವೆಚ್ಚದಲ್ಲಿ ನಡೆದಿದ್ದು ಇದೀಗ ಎರಡನೇ ಹಂತದ ಕಾಮಗಾರಿಗೆ ಸರಕಾರದಿಂದ ಹಣ ಬಿಡುಗಡೆಯಾಗಿದೆ.ಕುಶಾಲನಗರ ಮತ್ತು ಗುಮ್ಮನಕೊಲ್ಲಿ, ಮುಳ್ಳುಸೋಗೆ ಗ್ರಾಮಗಳನ್ನು ಈ ಯೋಜನೆಯ

(ಮೊದಲ ಪುಟದಿಂದ) ಅಂದಾಜು ಪಟ್ಟಿಯಲ್ಲಿ ಸೇರಿಸಲಾಗಿದ್ದು ಸುಮಾರು ರೂ. 45 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಅನುಮೋದನೆ ದೊರೆತಿತ್ತು. ನಿಧಾನಗತಿಯಲ್ಲಿ ಸಾಗುತ್ತಿದ್ದ ಕಾಮಗಾರಿಯ ಯೋಜನೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೈಗೆತ್ತಿಕೊಂಡಿದ್ದು 30 ತಿಂಗಳಲ್ಲಿ ಪೂರ್ಣಗೊಳಿಸಿ 2017 ರಲ್ಲಿ ಅನುಷ್ಠಾನಗೊಳಿಸಬೇಕಾಗಿತ್ತು. ಯೋಜನೆ ಪೂರ್ಣಗೊಳಿಸಬೇಕಾದ ಅವಧಿ ಜೂನ್-2017 ಕ್ಕೆ ಅಂತ್ಯಗೊಂಡಿದ್ದರೂ ಸ್ಥಳೀಯ ಹಲವು ತೊಡಕುಗಳು ಮತ್ತು ಸ್ಥಳೀಯ ಆಡಳಿತಗಳ ಅಸಹಕಾರದಿಂದ ಯೋಜನೆ ಅಪೂರ್ಣಗೊಂಡಿದೆ.

ಕುಶಾಲನಗರ ಪಟ್ಟಣದ ಮುಂದಿನ 25 ವರ್ಷಗಳ ಜನಸಂಖ್ಯೆ ಆಧಾರದಲ್ಲಿ ಯೋಜನೆಗೆ ಅಂದಾಜು ಪಟ್ಟಿ ತಯಾರಿಸಲಾಗಿತ್ತು. 2027 ರಲ್ಲಿ ಪಟ್ಟಣದ ಜನಸಂಖ್ಯೆ ಅಂದಾಜು 38 ಸಾವಿರದ 600 ಹಾಗೂ 2043 ರಲ್ಲಿ ಜನಸಂಖ್ಯೆ 60 ಸಾವಿರದ 400 ಅಂದಾಜು ಪಟ್ಟಿ ತಯಾರಿಸುವುದರೊಂದಿಗೆ ಕುಶಾಲನಗರ ಪಟ್ಟಣಕ್ಕೆ ಒಳಚರಂಡಿ ಯೋಜನೆಯ ತಾಂತ್ರಿಕ ಅನುಮೋದನೆ 2014 ರಲ್ಲಿ ದೊರೆತಿದೆ. ಯೋಜನೆಯ ಪ್ರಕಾರ ಒಟ್ಟು 71.865 ಕಿಮೀ ಉದ್ದದ ಕೊಳವೆಗಳ ಒಳಚರಂಡಿ ಮಾರ್ಗ ಹೊಂದಿರುವ ಯೋಜನೆಯಲ್ಲಿ 2449 ಆಳ ಗುಂಡಿಗಳ ನಿರ್ಮಾಣ, 10 ಮೀ ವ್ಯಾಸದ 3 ವೆಟ್‍ವೆಲ್ ನಿರ್ಮಾಣ, 300 ಮೀ ಉದ್ದದ 300 ಮಿಮಿ ವ್ಯಾಸವುಳ್ಳ ಕೊಳವೆ ಮಾರ್ಗ, ಎರಡು ಸೆಪ್ಟಿಕ್ ಟ್ಯಾಂಕ್ ನಿರ್ಮಾಣ, ಜನರೇಟರ್ ಕಟ್ಟಡ ನಿರ್ಮಾಣ, ಅತ್ಯಾಧುನಿಕ ತಂತ್ರಜ್ಞಾನವುಳ್ಳ ಮಲಿನ ನೀರು ಶುದ್ಧೀಕರಣ ಘಟಕ, 3 ಕಿಮೀ ಉದ್ದಕ್ಕೆ ಕುಶಾಲನಗರ ಬಳಿಯಿಂದ ವೆಟ್‍ವೆಲ್‍ಗೆ 11 ಕಿವಾ ಸಾಮಥ್ರ್ಯದ ವಿದ್ಯುತ್ ಮಾರ್ಗ ಅಳವಡಿಸುವುದು ಈ ಯೋಜನೆಯ ಪ್ರಮುಖ ಕಾಮಗಾರಿಯಾಗಿದೆ.

ಇದರೊಂದಿಗೆ 100 ಹೆಚ್‍ಪಿ ಸಾಮಥ್ರ್ಯದ 3 ಪಂಪ್‍ಸೆಟ್‍ಗಳು, 75 ಹೆಚ್‍ಪಿಯ 2, 50 ಹೆಚ್‍ಪಿಯ 2 ಹಾಗೂ 25 ಹೆಚ್‍ಪಿ ಸಾಮಥ್ರ್ಯದ 3 ಪಂಪ್‍ಸೆಟ್‍ಗಳನ್ನು ಘಟಕಗಳಿಗೆ ಅಳವಡಿಸಬೇಕಾಗಿದೆ. ಇದೀಗ ಕುಶಾಲನಗರ ಹಾರಂಗಿ ರಸ್ತೆಯ ಒತ್ತಿನಲ್ಲಿರುವ ಸುಮಾರು 2 ಎಕರೆ ಜಾಗದಲ್ಲಿ 45 ಲಕ್ಷ ಲೀಟರ್ ಪ್ರಮಾಣದ ಮಲಿನ ನೀರನ್ನು ಶುದ್ಧೀಕರಿಸುವ ಘಟಕಕ್ಕೆ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಭೂಮಿಪೂಜೆ ನೆರವೇರಿಸಲಿದ್ದಾರೆ. ಇದರೊಂದಿಗೆ ಪಟ್ಟಣದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಎರಡೂ ಕಡೆ ಒಟ್ಟು 8.5 ಕಿಮೀ ಉದ್ದದ ಕೊಳವೆ ಸಂಪರ್ಕ ಕಾಮಗಾರಿ ಅಲ್ಲದೆ ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆ, ಮಾರುಕಟ್ಟೆ ಮತ್ತು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ತಲಾ 11 ಕೆವಿ ಪ್ರಮಾಣದ ವಿದ್ಯುತ್ ಘಟಕಗಳ ಕಾಮಗಾರಿ ನಡೆಯಲಿದೆ. ಈ ಎಲ್ಲಾ ಕಾಮಗಾರಿಗಳು ಒಂದು ವರ್ಷದ ಅವಧಿಯೊಳಗೆ ಪೂರ್ಣಗೊಳ್ಳಲಿದ್ದು ಕುಶಾಲನಗರ ಒಳಚರಂಡಿ ಯೋಜನೆ ಲೋಕಾರ್ಪಣೆಗೊಳ್ಳಲಿದೆ ಎಂದು ರಾಜ್ಯ ಒಳಚರಂಡಿ ಮತ್ತು ಕುಡಿವ ನೀರು ಸರಬರಾಜು ಮಂಡಳಿ ಸಹಾಯಕ ಅಭಿಯಂತರ ಆನಂದ್ ಶಕ್ತಿಗೆ ತಿಳಿಸಿದ್ದಾರೆ.

ಈಗಾಗಲೆ 71 ಕಿಮೀ ಉದ್ದದ ಕೊಳವೆ ಮಾರ್ಗ ಕಾಮಗಾರಿ ಸಂಪೂರ್ಣಗೊಂಡಿದ್ದು ಉಳಿದಂತೆ 600 ಮೀ ಉದ್ದದ ವ್ಯಾಪ್ತಿಯಲ್ಲಿ ಪೈಪ್‍ಲೈನ್ ಅಳವಡಿಸುವುದು, ಎಸ್‍ಟಿಪಿ ಕಾಮಗಾರಿ ನಡೆಯಬೇಕಾಗಿದೆ ಎಂದು ತಿಳಿಸಿದ್ದಾರೆ. ಗುತ್ತಿಗೆದಾರರಿಗೆ ರೂ. 35 ಕೋಟಿ ಹಣ ಪಾವತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರಥಮ ಹಂತದಲ್ಲಿ ನಡೆದ ಯುಜಿಡಿ ಕಾಮಗಾರಿಯ ಬಹುತೇಕ ಕಡೆಯ ಕೆಲಸ ಕಾವೇರಿ ನದಿ ಪ್ರವಾಹಕ್ಕೆ ಬಲಿಯಾಗಿದ್ದು ಈ ಕಾಮಗಾರಿ ಮತ್ತೆ ಪುನರ್ ನಿರ್ಮಾಣ ಮಾಡುವ ಅವಶ್ಯಕತೆ ಉಂಟಾಗಿದೆ. ನದಿ ಬದಿಯಲ್ಲಿ ನಿರ್ಮಾಣಗೊಂಡಿರುವ ಯುಜಿಡಿ ಕಾಮಗಾರಿಯನ್ನು ತೆರವುಗೊಳಿಸಿ ಪುನರ್ ನಿರ್ಮಿಸುವಂತೆ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಪ್ರಮುಖರು ಆಗ್ರಹಿಸಿದ್ದಾರೆ. ಇಲ್ಲದಿದ್ದಲ್ಲಿ ಮಳೆಗಾಲ ಸಂದರ್ಭ ತ್ಯಾಜ್ಯ ಕೊಳವೆಗಳು, ವೆಟ್‍ವೆಲ್‍ಗಳು ಪ್ರವಾಹದಿಂದ ತುಂಬಿ ಕಲುಷಿತ ತ್ಯಾಜ್ಯ, ಮಲಿನ ನೀರು ನೇರವಾಗಿ ಕಾವೇರಿ ನದಿ ಸೇರುವ ಅಪಾಯ ಉಂಟಾಗಲಿದೆ.

ನೆನೆಗುದಿಗೆ ಬಿದ್ದಿದ್ದ ಕುಶಾಲನಗರ ಒಳಚರಂಡಿ ಯೋಜನೆಯ ಕಾಮಗಾರಿ ತಕ್ಷಣ ಪೂರ್ಣಗೊಳಿಸುವಂತೆ ಸ್ಥಳೀಯ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಉಪವಾಸ ಸತ್ಯಾಗ್ರಹ ಹೂಡಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದು ಇಲ್ಲಿ ಸ್ಮರಿಸಬಹುದು. ಕಳೆದ ಎರಡು ವರ್ಷಗಳಿಂದ ಕುಶಾಲನಗರ ಯುಜಿಡಿಯ ಆವಾಂತರದ ಬಗ್ಗೆ ಶಕ್ತಿ ಹಲವು ಬಾರಿ ವರದಿ ಪ್ರಕಟಿಸಿದ್ದು ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದಿತ್ತು, -ಎಂ.ಎನ್. ಚಂದ್ರಮೋಹನ್