ಕೂಡಿಗೆ, ಅ. 29 : ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಎದುರು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗು ಸೇತುವೆ ಬೀಳುವ ಹಂತವನ್ನು ತಲುಪಿದೆ. ಇದರ ಎರಡು ಕಡೆಯ ಬೃಹತ್ ಕಬ್ಬಿಣದ ಕಂಬಗಳು ಮಧ್ಯ ಭಾಗದಲ್ಲಿ ತುಂಡಾಗಿವೆ. ಅಲ್ಲದೆ ಕಳೆದ ಎರಡು ವರ್ಷಗಳಿಂದಲೂ ಸತತವಾಗಿ ಕಾವೇರಿ ನದಿಯ ನೀರಿನ ಮಟ್ಟ ಹೆಚ್ಚಾಗಿ ತೂಗು ಸೇತುವೆಗೆ ಬಡಿದು ಸೇತುವೆಯ ಕೆಲ ಭಾಗಗಳು ಹಾಳಾಗಿದ್ದು ಸರಿಪಡಿಸುವಂತೆ ಗ್ರಾಮಸ್ಥರ ಆಗ್ರಹವಾಗಿದೆ.
ಈ ತೂಗು ಸೇತುವೆಯು ಕೊಡಗು ಮೈಸೂರು ಗಡಿ ಭಾಗದ ಹತ್ತು ಗ್ರಾಮಗಳಿಗೆ ಹತ್ತಿರದ ಮಾರ್ಗವಾಗಿದೆ ಅಲ್ಲದೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ತಾಲೂಕಿನ ಕೆಲ ಗ್ರಾಮಗಳ ನೂರಾರು ಗ್ರಾಮಸ್ಥರು ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ಕೆಲಸವನ್ನು ನಿರ್ವಹಿಸಲು ಬರುತ್ತಾರೆ.
ಕಳೆದ ಎರಡು ವರ್ಷಗಳಿಂದ ಕಾವೇರಿ ನದಿಯ ನೀರಿನ ಮಟ್ಟ ಹೆಚ್ಚಾದ ಪರಿಣಾಮವಾಗಿ ತೂಗು ಸೇತುವೆ ತೀರ ಹಾಳಾಗಿತ್ತು ಮೊದಲ ಸಾಲಿನಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಅನುದಾನದ ಐದು ಲಕ್ಷ ರೂ ವೆಚ್ಚದಲ್ಲಿ ದುರಸ್ತಿ ಮಾಡಲಾಗಿತ್ತು. ಅದೇ ರೀತಿಯಲ್ಲಿ ಈ ಬಾರಿಯು ನೀರಿನ ಸೆಳೆತಕ್ಕೆ ಸಿಲುಕಿ ಅನೇಕ ಕಬ್ಬಿಣದ ರಾಡುಗಳು ಮತ್ತು ಕಬ್ಬಿಣದ ಸಲಾಕಿಗಳು ತುಂಡಾಗಿವೆ ಸಂಬಂಧಿಸಿದ ಇಲಾಖೆಯವರು ತುರ್ತಾಗಿ ಸ್ಪಂದಿಸಿ ಸೇತುವೆ ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.