ಕುಶಾಲನಗರ, ಅ 29: ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನವೆಂಬರ್ 3 ರಂದು ಚುನಾವಣೆ ನಿಗದಿಯಾಗಿದೆ. ಈ ಹಿಂದೆ ಅಕ್ಟೋಬರ್ 20 ಕ್ಕೆ ನಿಗದಿಪಡಿಸಿದ್ದ ಚುನಾವಣೆ ಮುಂದೂಡಲಾಗಿ ಇದೀಗ ಮತ್ತೆ ಸರಕಾರ ಚುನಾವಣೆಗೆ ದಿನಾಂಕ ನಿಗದಿಪಡಿಸಿದೆ. ಕುಶಾಲನಗರ ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಒಟ್ಟು 16 ಮಂದಿ ಸದಸ್ಯರನ್ನು ಹೊಂದಿರುವ ಕುಶಾಲನಗರ ಪ. ಪಂ.ಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲದಿರುವ ಕಾರಣ ಮೈತ್ರಿ ಬಗ್ಗೆ ಬಿರುಸಿನ ಚಟುವಟಿಕೆ ಮುಂದುವರೆದಿದೆ. ಆ ದಿನವೇ ಸೋಮವಾರಪೇಟೆ ಪ. ಪಂ. ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಕೂಡ ನಡೆಯಲಿದೆ.

ವೀರಾಜಪೇಟೆ, ಅ. 29 : ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷ ಪದವಿಗಳಿಗೆ ನವೆಂಬರ್ 3ರಂದು ಜಿಲ್ಲಾಧಿಕಾರಿ ದಿನಾಂಕವನ್ನು ನಿಗಧಿ ಪಡಿಸಿದ್ದು ಅಂದು 12ಗಂಟೆಯಿಂದ 1ಗಂಟೆಯವರೆಗೆ ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಎಲ್. ಎಂ. ನಂದೀಶ್ ತಿಳಿಸಿದ್ದಾರೆ.

ಈ ಚುನಾವಣೆಯ ಮತದಾನದಲ್ಲಿ ಭಾಗವಹಿಸಲು ಕೊಡಗು ಮೈಸೂರು ಕ್ಷೇತ್ರದ ಸಂಸದ ಹಾಗೂ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಿಗೂ ಆಹ್ವಾನ ಕಳುಹಿಸಲಾಗಿದ್ದು ಸೋಮವಾರಪೇಟೆ, ಕುಶಾಲನಗರ ಪಟ್ಟಣ ಪಂಚಾಯಿತಿಯ ಜೊತೆಯಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಚುನಾವಣೆ ನಡೆಯಲಿದೆ.

ಸರಕಾರದ ಈಗಿನ ಮೀಸಲಾತಿಯಂತೆ ಅಧ್ಯಕ್ಷ ಸ್ಥಾನ ಅವಿರೋಧವಾಗಿ ಆಯ್ಕೆಯಾಗಲಿದ್ದು ಉಪಾಧ್ಯಾಕ್ಷ ಸ್ಥಾನಕ್ಕೆ ಎರಡು ಪಕ್ಷಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಪಟ್ಟಣ ಪಂಚಾಯಿತಿಯಲ್ಲಿ ಎಂಟು ಸ್ಥಾನಗಳನ್ನು ಹೊಂದಿರುವ ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ಸ್ಥಾನವನ್ನು ಈಗಾಗಲೇ ಗಿಟ್ಟಿಸಿಕೊಂಡಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಹಾಗೂ ಪಕ್ಷೇತರ ಬೆಂಬಲಿತ ಕಾಂಗ್ರೆಸ್ ಪಕ್ಷದ ನಡುವೆ ಸ್ಪರ್ಧೆ ಏರ್ಪಟ್ಟಿದೆ ಈ ಸ್ಥಾನ ಯಾವ ಪಕ್ಷಕ್ಕೆ ದಕ್ಕಲಿದೆ ಎಂಬುದು ಇನ್ನೂ ನಿಗೂಢವಾಗಿದೆ.