ಸುಂದರನಾಡು-ಅಂದದ ಬೀಡು- ದಕ್ಷಿಣದ ಕಾಶ್ಮೀರ-ವೀರಶೂರರಿಗೆ ಜನ್ಮಕೊಟ್ಟ ನಾಡು- ಮಂಜಿನ ನಗರಗಳು-ಆಹ್ಲಾದಕರ ಪ್ರವಾಸೀ ತಾಣಗಳು ಇತರ ಸುಂದರ ಮನಮೋಹಕ ತಾಣಗಳ ತವರೂರು ಕೊಡಗು ಜಿಲ್ಲೆ.
ಆದರೆ ಇಲ್ಲಿ ತಲತಲಾಂತರದಿಂದ ವಾಸವಿರುವ ಕೃಷಿಕರ ಬದುಕು ಎತ್ತ ಸಾಗಿದೆ ಎಂಬ ಬಗ್ಗೆ ಸ್ವಲ್ಪ ಚಿಂತನೆ ಮಾಡಿದರೆ ವಾಸ್ತವ ಸ್ಥಿತಿ... ಬಲು ಭಯಾನಕ ಹಾಗೂ ನಿರಾಸೆಯಿಂದ ಕೂಡಿರುತ್ತದೆ.
ಕೊಡಗು ಜಿಲ್ಲೆಯಲ್ಲಿ ಮುಖ್ಯ ಬೆಳೆಗಳು ಕಾಫಿ-ಕಿತ್ತಳೆ-ಕಾಳುಮೆಣಸು-ಭತ್ತ ಇತ್ಯಾದಿಗಳು -ಅದರಲ್ಲೂ ಕಿತ್ತಳೆ ಕೃಷಿಯು ನಾನಾ ಕಾರಣಗಳಿಂದ ನಶಿಸಿಹೋಗುವ ಹಂತ ತಲುಪಿದೆ. ಭತ್ತದ ಕೃಷಿಯು ಸರಕಾರದ ನಿರ್ಲಕ್ಷ್ಯದಿಂದ ಶೇ.75 ಭಾಗ ಸ್ಥಗಿತಗೊಂಡಿದೆ. ಸ್ವಂತ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಕ್ಷೀಣವಾಗುತ್ತಿರುವುದು-ನೀರಾವರಿ ಸೌಕರ್ಯ ಗಳ ಕೊರತೆ-ಕಾರ್ಮಿಕರ ಕೊರತೆ ವಿದ್ಯುತ್ ಸರಬರಾಜಿನ ಸಮಸ್ಯೆ ಮುಂತಾದುವುಗಳಿಂದ ರೈತರು ಭತ್ತದ ಕೃಷಿಯಿಂದ ವಿಮುಖರಾಗಿದ್ದಾರೆ.
ಕಾಫಿ ಹಾಗೂ ಕಾಳುಮೆಣಸಿನ ಬೆಳೆಗಳು ಕುಂಟುತ್ತಾ ಸಾಗಿವೆ. 1993-94ರಲ್ಲಿ ಕಾಫಿ ಮಂಡಳಿಯ ಹಿಡಿತದಿಂದ ಹೊರಬಂದ ಕಾಫಿ ಬೆಳೆಗಾರರು ಚೀಲ (50 ಕೆಜಿ) ವೊಂದರ (ಚೆರಿ) ಕಾಫಿಗೆ ರೂ.3000/- ದಿಂದ ರೂ.3500/- ರ ತನಕ ಪಡೆಯುತ್ತಿದ್ದರು. 25 ವರ್ಷಗಳ ನಂತರವೂ ಈಗಲೂ ಅದೇ ದರ ಮುಂದುವರಿಯುತ್ತಿದೆ. ಕಾರ್ಮಿಕರ ವೇತನ ಅಂದು 25-30 ರೂ.ಗಳಿದ್ದದ್ದು ಈಗ 350-600 ರೂ.ಗಳಿಗೆ ತಲುಪಿದೆ. ಕೃಷಿಗೆ ಅವಶ್ಯವಿರುವ ಗೊಬ್ಬರಗಳ ಧಾರಣೆ ನಾಲ್ಕು ಪಟ್ಟು ಜಾಸ್ತಿಯಾಗಿದೆ.
ಕಾಳುಮೆಣಸು ಕೆಲವೇ ವರ್ಷಗಳ ಹಿಂದೆ ಕೆ.ಜಿಗೆ ರೂ.600 ರಿಂದ 700/- ರ ತನಕ ಲಭಿಸುತ್ತಿತ್ತು. ಈಗ ರೂ.300/- ರ ಹೊಸ್ತಿಲಲ್ಲಿ ನಿಂತಿದೆ. 25 ವರ್ಷಗಳ ಹಿಂದೆ ಕಾರ್ಮಿಕರ ಅಭಾವ ಇರಲಿಲ್ಲ. ರೈತರ ಜೀವನ ಕೊಡಗು ಜಿಲ್ಲೆಯಲ್ಲಿ ನೆಮ್ಮದಿಯಿಂದ ಸಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ಕೃಷಿ ನಿರ್ವಹಣೆಯಲ್ಲಿ ಸೋಲುತ್ತಿದ್ದ ಅನೇಕ ರೈತರು ಪರ್ಯಾಯ ವ್ಯವಸ್ಥೆಗಾಗಿ ಪ್ರವಾಸೋದ್ಯಮ ಆಕರ್ಷಣೆಗೊಳಗಾಗಿ ಹೋಂಸ್ಟೇ ಆರಂಭಿಸಿದರು. ಕಾಫಿ ತೋಟಗಳಿಂದ ತಮ್ಮ ಜೀವನ ನಿರ್ವಹಣೆ ಕಷ್ಟಸಾಧ್ಯವೆಂದು ಅರಿತ ಅನೇಕ ಬೆಳೆಗಾರರು ಬ್ಯಾಂಕ್ ಸಾಲ ಮಾಡಿ ಪ್ರವಾಸಿಗರಿಗೆ ಸೌಕರ್ಯದ ವ್ಯವಸ್ಥೆಗಳನ್ನು ಆರಂಭಿಸಿದರು. ಈ ಪರ್ಯಾಯ ವ್ಯವಸ್ಥೆಯಿಂದ ಜೀವನ ಸಾಗಿಸುತ್ತಿದ್ದ ಬೆಳೆಗಾರರ ಆಸೆ ಆಕಾಂಕ್ಷೆಗಳು ಇತ್ತೀಚಿಗಿನ ವರ್ಷಗಳ ಹವಾಮಾನ ಏರುಪೇರುಗಳು-ಭೂಕುಸಿತ- ಇನ್ನಿತರ ಅಡಚಣೆಗಳಿಂದಾಗಿ ಮಣ್ಣು ಪಾಲಾಗಿದೆ. ಇತ್ತ ಕಾಫಿ/ಕಾಳುಮೆಣಸು ಬೆಳೆಗಳಿಂದ ಜೀವನ ಸಾಗಿಸಲಾಗದೇ ಪರ್ಯಾಯ ವ್ಯವಸ್ಥೆಗಳೂ ಕೈ ಕೊಟ್ಟಾಗ ಕಾಫಿ ಬೆಳೆಗಾರರ ಬವಣೆ ಹೇಳಲಸಾಧ್ಯವಾಗಿದೆ.
ಬ್ಯಾಂಕ್ ಹಾಗೂ ಸಹಕಾರ ಸಂಘಗಳಿಂದ ರೈತರಿಗೆ ದೊರಕುವ ಸಾಲ ಸೌಲಭ್ಯಗಳು-ಸಹಕಾರ ಸಂಘಗಳಿಂದ ದೊರಕುತ್ತಿರುವುದು ಸಮಾಧಾನದ ವಿಷಯವೇ ಆಗಿದ್ದರೂ ಅಲ್ಲಿಯೂ ಇತ್ತೀಚಿಗಿನ ದಿನಗಳಲ್ಲಿ ಹೊಸ ಸಮಸ್ಯೆಗಳು ಬಂದೊದಗುತ್ತಿವೆ. ಸಾಲ ಪಡೆಯುವಾಗ ಅನೇಕ ದಾಖಲೆಗಳನ್ನು ಹೊಂದಿಸಿಕೊಳ್ಳಲು ಕೃಷಿಕರು ಬಹಳ ಕಷ್ಟ ಪಡಬೇಕಾಗಿದೆ.
ಕಂದಾಯ ಇಲಾಖೆಯಲ್ಲಿ ದಾಖಲೆಗಳಿಗಾಗಿ ಓಡಾಟ- ಕುಟುಂಬದ ಸದಸ್ಯರ ಹೆಸರಿನಲ್ಲಿ ಪ್ರತ್ಯೇಕ ದಾಖಲಾತಿಗಳು ಇಲ್ಲದ ಸಂದರ್ಭಗಳು-ಕುಟುಂಬದ ಆಸ್ತಿ ವಿಭಜನೆ ಆಗದಿರುವುದು-ಪೌತಿ ಖಾತೆಗಳ ವರ್ಗಾವಣೆ ಹೀಗೆ ಹಲವಾರು ಸಮಸ್ಯೆಗಳು ಕೊಡಗಿನ ರೈತರ ಜೀವನಕ್ಕೆ ಕಂಟಕವಾಗಿರುವ ಅಂಶಗಳು.
ಈ ಮೊದಲು ಬೆಳೆಗಾರರ/ರೈತರ ಸಾಲ ಮನ್ನಾ ಮಾಡುವ ಸಂದರ್ಭ ಸಹಕಾರ ಸಂಘಗಳ ದಾಖಲೆಗಳು-ಸಾಲ ಪಡೆದುಕೊಂಡ ರೈತರಿಗೆಲ್ಲರಿಗೂ ದೊರಕಿದ ನಿದರ್ಶನಗಳು ಇವೆ. ಆದರೆ ಇತ್ತೀಚೆಗೆ ಸರಕಾರದ 1 ಲಕ್ಷದವರೆಗಿನ ಸಾಲ ಮನ್ನಾ ಯೋಜನೆಯಿಂದ ಅನೇಕ ರೈತರು ವಂಚಿತರಾಗಿದ್ದಾರೆ.
ಸಾಲ ಪಡೆಯುವಾಗ ರೈತರಿಂದ ಪಡೆದು ಕೊಳ್ಳುವ ದಾಖಲಾತಿಗಳು ಅಸಲಿಯಲ್ಲವೇ ? ಸಾಲ ಮನ್ನಾ ಸಮಯದಲ್ಲಿ ಪುನಃ ಕೆಲ ದಾಖಲೆಗಳು ಹಾಜರುಪಡಿಸಲಿಲ್ಲವೆಂಬ ನೆಪ ಒಡ್ಡಿ ಅನೇಕ ರೈತರ ಸಾಲ ಮನ್ನಾ ಹಣ ಸಂದಾಯವಾಗದೇ ರೈತರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇನ್ನು ಸಹಕಾರ ಸಂಘಗಳ ಮೂಲಕ ಕಾಫಿ ಬೆಳೆಗಾರರಿಗೆ ದೊರಕುತ್ತಿರುವ ಸಾಲ ಸೌಲಭ್ಯಗಳು. ರೂ. 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ. ರೂ. 3 ಲಕ್ಷದ ಮೇಲೆ 1 ರೂಪಾಯಿ ಪಡೆದರೂ ರೂ.32000/- ಬಡ್ಡಿ ಪಾವತಿಸಬೇಕು.
ಉದಾಹರಣೆಗಾಗಿ: ಒಬ್ಬ ರೈತ 5 ಲಕ್ಷ ಸಾಲ ಪಡೆದರೆ ಅದರಲ್ಲಿ ಬಡ್ಡಿ ರಹಿತ ಸಾಲ 3 ಲಕ್ಷ ವಜಾ ಆಗುವುದಿಲ್ಲ. ಪೂರ್ತಿ 5 ಲಕ್ಷಕ್ಕೆ ಬಡ್ಡಿ ಕಟ್ಟಬೇಕು. ಈ ವ್ಯವಸ್ಥೆಯಲ್ಲಿ ರೂ. 53,750/- ಬಡ್ಡಿಯಾಗುತ್ತದೆ. ಓರ್ವ ಬೆಳೆಗಾರ 5-10 ಎಕ್ರೆ ತೋಟವನ್ನು ನಿರ್ವಹಿಸಲು ರೂ. 5 ಲಕ್ಷದ ಅವಶ್ಯವಿರುತ್ತದೆ. ಅದಕ್ಕಾಗಿ ಬಡ್ಡಿ ಇಲ್ಲದ (ಶೂನ್ಯ ಬಡ್ಡಿಯ) ಸೌಲಭ್ಯವೇ ಇಲ್ಲದೇ ಆತನು ದೊಡ್ಡ ಮೊತ್ತದ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಈ ಸೌಲಭ್ಯಕ್ಕೆ ಸಹಕಾರ ಸಂಘಗಳೇ ಬೇಕಿಲ್ಲ. ಬೇರೆ ಬ್ಯಾಂಕ್‍ಗಳಲ್ಲಿಯೂ ಈ ವಿಧದ ಸಾಲ ಕಡಿಮೆ ಬಡ್ಡಿ ದರಗಳಲ್ಲಿ ದೊರಕುತ್ತದೆ. ಈ ಬಗ್ಗೆ ಸಹಕಾರ ಸಚಿವರಿಗೆ ಅನೇಕ ಮನವಿಗಳನ್ನು ಸಲ್ಲಿಸಿದರೂ ಶೂನ್ಯ ಬಡ್ಡಿ ದರ ವಿನಾಯಿತಿಯಿಂದ ಅನೇಕ ರೈತರು ವಂಚಿತರಾಗಿದ್ದಾರೆ. ಸರಕಾರ ರೈತರಿಗೆ ಈ ನಿಟ್ಟಿನಲ್ಲಿ ಯಾವುದೇ ಸ್ಪಂದನ ಈವರೆಗೂ ಕೈಗೊಂಡಿರುವುದಿಲ್ಲ. ಇದು ಕೊಡಗಿನ ಸಣ್ಣ/ಮಧ್ಯಮ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಹೊಡೆತವಾಗಿದೆ. ಕಾಳುಮೆಣಸಿನ ನಿರ್ವಹಣೆ ಕೊಡಗು ಜಿಲ್ಲೆಯ ಬೆಳೆಗಾರರಿಗೆ ದೊಡ್ಡ ಸಮಸ್ಯೆಯಾಗತೊಡಗಿದೆ. ಕೆ.ಜಿ.ಗೆ 600-700 ರೂ. ಗಳಿದ್ದ ಕಾಳುಮೆಣಸು ದಿಢೀರನೆ 300/- ರೂ.ಗೆ ಇಳಿದುಹೋಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ನಿಟ್ಟಿನಲ್ಲಿ ಯಾವುದೇ ಆಸಕ್ತಿ ತಳೆಯದಿರುವುದು ಬೆಳೆಗಾರರಲ್ಲಿ ಸಂಶಯಮೂಡಿಸುತ್ತಿದೆ. ವಿಯಟ್ನಾಂ ದೇಶಗಳಿಂದ ಶ್ರೀಲಂಕಾ ಮೂಲಕ ಕಳಪೆ ಕಾಳುಮೆಣಸನ್ನು ಆಮದು ಮಾಡಿ ಇಲ್ಲಿನ ಒಳ್ಳೆಯ ಗುಣಮಟ್ಟದ ಕಾಳುಮೆಣಸಿಗೆ ಮಿಶ್ರ ಮಾಡಿ ಮಾರಾಟ ಮಾಡುವ ದಂಧೆಯಿಂದ ಬೆಳೆಗಾರರು ಸರಿಯಾದ ದರ ಸಿಗದೆ ಬವಣೆ ಪಡುವಂತಾಗಿದೆ. ಯಾವುದೇ ಹೋರಾಟ ಮಾಡಿದರೂ ಈ ದಿಶೆಯಲ್ಲಿ ಬೆಳೆಗಾರರಿಗೆ ಏನೇನೂ ಪ್ರಯೋಜನ ಆಗಲಿಲ್ಲ. (ಮುಂದುವರಿಯುವುದು)
-ಹೆಚ್. ಎಸ್. ತಿಮ್ಮಪ್ಪಯ್ಯ,
ಮೊ: 8571809501