ಪ್ರಸಾದ ಸೇವಿಸಿ 70 ಭಕ್ತರು ಅಸ್ವಸ್ತ

ಮಳವಳ್ಳಿ, ಅ.28 : ಮಂಡ್ಯ ಜಿಲ್ಲೆಯ ಲಿಂಗಪಟ್ಟಣ ಗ್ರಾಮದ ಮಾರಮ್ಮ ದೇವಸ್ಥಾನವೊಂದರಲ್ಲಿ ಪ್ರಸಾದ ಸೇವಿಸಿದ ನಂತರ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 70 ಕ್ಕೂ ಹೆಚ್ಚು ಭಕ್ತಾಧಿಗಳು ಅಸ್ವಸ್ತಗೊಂಡಿರುವ ಘಟನೆ ಬುಧವಾರ ನಡೆದಿದೆ. ಅಧಿಕೃತ ಮೂಲಗಳಂತೆ, ಪ್ರಸಾದ ಸೇವಿಸಿದ ಭಕ್ತಾಧಿಗಳು ವಾಂತಿ ಮಾಡಿಕೊಂಡು ಅಸ್ವಸ್ತಗೊಂಡಿದ್ದು, ಮಳವಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಗ್ರಾಮದ ನಡುವೆ ಇರುವ ಮಾರಮ್ಮನ ದೇವಸ್ಥಾನದಲ್ಲಿ ಪ್ರತೀ ಮಂಗಳವಾರ ವಿಶೇಷ ಪೂಜೆ ನಡೆಯುತ್ತದೆ. ಪೂಜೆ ನಂತರ ಪೊಂಗಲ್ ಹಾಗೂ ಪುಳಿಯೋಗರೆಯನ್ನು ಪ್ರಸಾದ ರೂಪದಲ್ಲಿ ನೀಡುತ್ತಾರೆ. ನಿನ್ನೆ ಸಹ ಇದೇ ರೀತಿ ಪ್ರಸಾದ ವಿತರಿಸಿದ್ದು ಪ್ರಸಾದ ಸೇವಿಸಿದ ಭಕ್ತರು ಅಸ್ವಸ್ಥರಾಗಿದ್ದಾರೆ.

ದೆಹಲಿ ವಿವಿ ಉಪಕುಲಪತಿ ಅಮಾನತು

ನವದೆಹಲಿ, ಅ.28 : ಆಡಳಿತಾತ್ಮಕ ವಿಫಲತೆಯ ಆರೋಪದ ನಡುವೆ ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿ ಯೋಗೇಶ್ ತ್ಯಾಗಿ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಆದೇಶದ ಮೇರೆಗೆ ಅಮಾನತುಗೊಳಿಸಲಾಗಿದೆ. ಈಗ ಅಮಾನತುಗೊಂಡಿರುವ ಯೋಗೇಶ್ ತ್ಯಾಗಿ ಅವರು ವೈದ್ಯಕೀಯ ನೆಲೆಯಲ್ಲಿ ಅನುಪಸ್ಥಿತಿಯ ಅವಧಿಯಲ್ಲಿ ಹೊರಡಿಸಿದ ಆದೇಶಗಳನ್ನು ಶೂನ್ಯ ಮತ್ತು ಅನೂರ್ಜಿತವೆಂದು ಪರಿಗಣಿಸಲಾಗುತ್ತದೆ" ಎಂದು ಶಿಕ್ಷಣ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಆಡಳಿತಾತ್ಮಕ ವೈಫಲ್ಯದ ಕಾರಣ ದೆಹಲಿ ವಿವಿಉಪಕುಲಪತಿ ಯೋಗೇಶ್ ತ್ಯಾಗಿ ವಿರುದ್ಧ ತನಿಖೆ ನಡೆಸಲು ಶಿಕ್ಷಣ ಸಚಿವಾಲಯದ ಶಿಫಾರಸುಗಳನ್ನು ದೆಹಲಿ ವಿಶ್ವವಿದ್ಯಾಲಯ ವಿಸಿಟರ್ ರಾಷ್ಟ್ರಪತಿ ಅಂಗೀಕರಿಸಿದ್ದರು. ರಾಷ್ಟ್ರಪತಿಗಳು ವಿಶ್ವವಿದ್ಯಾನಿಲಯದ ವಿಸಿಟರ್ ದಾಖಲೆಯಲ್ಲಿ ಲಭ್ಯವಿರುವ ಸಂಗತಿಗಳು ಮತ್ತು ಅಂಶಗಳನ್ನು ಪರಿಗಣಿಸಿ, ಕರ್ತವ್ಯಗಳ ಅಪಮೌಲ್ಯ ಬದ್ಧತೆಯ ಕೊರತೆಯ ಆರೋಪಗಳ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ.

ಶ್ರೀಚಾಮುಂಡಿ ರಥೋತ್ಸವಕ್ಕೆ 200 ಮಂದಿ

ಮೈಸೂರು, ಅ.28 : ಚಾಮುಂಡಿ ಬೆಟ್ಟದ ಮೇಲಿನ ಚಾಮುಂಡೇಶ್ವರಿ ದೇಗುಲದಲ್ಲಿ ನಡೆಯುವ ವಾರ್ಷಿಕ ಶ್ರೀಚಾಮುಂಡಿ ರಥೋತ್ಸವದಲ್ಲಿ ಭಾಗವಹಿಸುವವರ ಸಂಖ್ಯೆ 200ಕ್ಕೆ ಸೀಮಿತಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಗುರುವಾರ ಬೆಳಗ್ಗೆ 9.45ರಿಂದ 10.05ರವರೆಗೆ ರಥೋತ್ಸವ ಹಮ್ಮಿಕೊಳ್ಳಲಾಗುವುದು. ಆದ್ದರಿಂದ ಕೋವಿಡ್‍ಹರಡುವಿಕೆ ತಡೆಯುವ ಮುಂಜಾಗ್ರತಾ ಕ್ರಮಗಳಾಗಿ, ಜನರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ. ರಥೋತ್ಸವದ ಎಲ್ಲಾ ಸಂಪ್ರದಾಯಗಳು ಹಿಂದಿನಂತೆಯೇ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಸಂಜಯ್ ಕುಮಾರ್‍ಗೆ ಗಲ್ಲು ಶಿಕ್ಷೆ

ವಾರಂಗಲ್, ಅ.28 : ಒಂದು ಕೊಲೆಯನ್ನು ಮುಚ್ಚಿಹಾಕಲು 9 ಮಂದಿಯನ್ನು ಬಾವಿಗೆ ಎಸೆದು ಕೊಂದಿದ್ದ ನಿರ್ಧಯಿ ಸಂಜಯ್ ಕುಮಾರ್ ಗೆ ಜಿಲ್ಲಾ ಸೆಷನ್ಸ್ ಕೋರ್ಟ್ ಗಲ್ಲು ಶಿಕ್ಷೆ ನೀಡುವ ಮೂಲಕ ಮಹತ್ವದ ತೀರ್ಪು ನೀಡಿದೆ. ತೆಲಂಗಾಣದ ವಾರಂಗಲ್ ಜಿಲ್ಲೆಯ ಗೊರ್ರಕುಂಟ ಎಂಬಲ್ಲಿ ಸಂಜಯ್ ಕುಮಾರ್ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ನಂತರ 9 ಮಂದಿಯನ್ನು ಪಕ್ಕದಲ್ಲಿದ್ದ ಬಾವಿಗೆ ಎಸೆದಿದ್ದ. ಈ ಪ್ರಕರಣದಲ್ಲಿ ಕೋರ್ಟ್ ಅಪರಾಧಿ ಸಂಜಯ್ ಗೆ ಗಲ್ಲು ಶಿಕ್ಷೆ ವಿಧಿಸಿದೆ.

ಈಜುತ್ತಿದ್ದ 6 ಬಾಲಕರು ನೀರುಪಾಲು

ಏಲೂರು, ಅ.28 : ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ವೇಲೈರುಪಾಡು ಮಂಡಲದ ವಸಂತವಾಡ ಗ್ರಾಮದಲ್ಲಿ ಬುಧವಾರ ಹೊಳೆಯಲ್ಲಿ ಈಜಲು ಹೋಗಿದ್ದ ಆರು ಬಾಲಕರು ನೀರು ಪಾಲಾಗಿದ್ದಾರೆ. ಭೂದೇವಿಪೇಟ ಗ್ರಾಮಸ್ಥರ ಗುಂಪೊಂದು ವಿಹಾರಕ್ಕಾಗಿ ಹೊಳೆಗೆ ಹೋಗಿತ್ತು. ಭಾರೀ ಮಳೆಯಿಂದ ತುಂಬಿದ್ದ ಹೊಳೆಗೆ ಈಜಾಡಲು ಆರು ಹುಡುಗರು ಇಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕರಾದ ಶ್ರೀರಾಮುಲು ಶಿವಾಜಿ , ಗಂಗಾಧರ್ ವೆಂಕಟ ರಾವ್ , ಕುನವರಂ ರಾಧಾ ಕೃಷ್ಣ ಮತ್ತು ಕರ್ನಾತಿ ರಂಜಿತ್ ಮೃತದೇಹಗಳನ್ನು ಈವರೆಗೆ ಹೊಳೆಯಿಂದ ಹೊರತೆಗೆಯಲಾಗಿದೆ. ಇನ್ನಿಬ್ಬರು ಬಾಲಕರ ಮೃತದೇಹಗಳ ಪತ್ತೆಗೆ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಚಿವೆ ಸ್ಮೃತಿ ಇರಾನಿಗೆ ಕೋವಿಡ್

ನವದೆಹಲಿ, ಅ.28 : ಕೋವಿಡ್ -19 ಪರೀಕ್ಷೆಯಲ್ಲಿ ತಮಗೆ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಬುಧವಾರ ತಿಳಿಸಿದ್ದಾರೆ. `ಪ್ರಕಟಣೆ ನೀಡುವಾಗ ಪದಗಳನ್ನು ಹುಡುಕುವುದು ನನಗೆ ಅಪರೂಪವಾಗಿರುವುದರಿಂದ ಸರಳವಾಗಿ ಹೇಳುತ್ತಿದ್ದೇನೆ. ಕೋವಿಡ್-19 ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲ ತಕ್ಷಣವೇ ಪರೀಕ್ಷೆಗೆ ಒಳಪಡಲು ವಿನಂತಿಸುತ್ತಿದ್ದೇನೆ.' ಎಂದು ಸಚಿವೆ ಟ್ವೀಟ್ ಮಾಡಿದ್ದಾರೆ.

ಅನನ್ಯಾ ಭಟ್ ತಂದೆ ವಿಶ್ವನಾಥ್ ಬಂಧನ

ಮೈಸೂರು, ಅ.28 : ನಗರದ ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಕೊಲೆ ಪ್ರಕರಣವನ್ನು ಭೇದಿಸಿರುವ ಸರಸ್ವತಿಪುರಂ ಪೊಲೀಸರು ಮೂವರು ಶಿಕ್ಷಕರು ಸೇರಿ ಐದು ಮಂದಿಯನ್ನು ಬಂಧಿಸಿದ್ದಾರೆ. ಸಂಸ್ಕೃತ ಪಾಠ ಶಾಲೆಯ ನಿವೃತ್ತ ಪ್ರಾಂಶುಪಾಲರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಗಾಯಕಿ ಅನನ್ಯಾ ಭಟ್ ತಂದೆ ವಿಶ್ವನಾಥ ಭಟ್ ಅವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಗಾಯಕಿ ಅನನ್ಯ ಭಟ್ ಅವರ ತಂದೆ ಸೇರಿ ಮಧ್ಯಸ್ಥಿಕೆದಾರ ಮಡಿವಾಳಸ್ವಾಮಿ, ಸಂಸ್ಕೃತ ಪಾಠಶಾಲೆ ಮುಖ್ಯಶಿಕ್ಷಕ ಸಿದ್ದರಾಜು, ಸಹ ಶಿಕ್ಷಕ ಪರಶಿವ, ಗಾರೆ ಮೇಸ್ತ್ರಿ ನಿರಂಜನ್, ಐಡಿಎಫ್ ಸಿ ಬ್ಯಾಂಕ್ ಸಾಲ ವಸೂಲಾತಿ ಅಧಿಕಾರಿ ನಾಗೇಶ್ ಅವರನ್ನು ಬಂಧಿಸಲಾಗಿದೆ. ಬಂಧಿತರಿಂದ 55 ಸಾವಿರ ನಗದು, ನಾಲ್ಕು ದ್ವಿಚಕ್ರ ವಾಹನ, ಟಾಟಾ ಏಸ್ ಗೂಡ್ಸ್ ವಾಹನ, 8 ಮೊಬೈಲ್ ಫೋನ್ ಮತ್ತು 2 ಚಾಕುಗಳನ್ನು ವಶಕ್ಕೆ ಪಡೆಯಲಾಗಿದೆ. ಸುಪಾರಿ ಕೊಟ್ಟು ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಅವರನ್ನು ಕೊಲೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.