ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕಾವೇರಿ ತೀರ್ಥೋದ್ಭವ ಬಂದದ್ದರಿಂದ ಆಚರಣೆಗಳಲ್ಲಿ ಕೆಲವೊಂದು ಮಾರ್ಪಾಡು ಗಳನ್ನು ಮಾಡುವುದು ಅನಿವಾರ್ಯವಾಗಿತ್ತು. ತೀರ್ಥೋದ್ಭವದ ಸಮಯದಲ್ಲಿ ಮಾಡಬೇಕಾದ ವ್ಯವಸ್ಥೆಗಳಿಗೆ ಸಂಬಂಧಿಸಿ ಚರ್ಚಿಸಲು ಅಕ್ಟೋಬರ್ 11ರಂದು ಒಂದು ಪೂರ್ವಭಾವಿ ಸಭೆ ನಡೆಯಿತು. ಅದರ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಜಿ. ಬೋಪಯ್ಯ ಅವರು “ಈ ಬಾರಿ ಆಚರಣೆ ಸರಳವಾಗಿರಬೇಕು, ಇಲ್ಲಿಗೆ ಬರುವವರು 72 ಗಂಟೆಗಳ ಮೊದಲು ಕೋವಿಡ್ ಪರೀಕ್ಷೆ ಮಾಡಿಸಿರುವ ವೈದ್ಯಕೀಯ ವರದಿಯನ್ನು ಕಡ್ಡಾಯವಾಗಿ ಜೊತೆಯಲ್ಲಿಯೇ ತರಬೇಕು. ಜಿಲ್ಲೆಯ ಜನರ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದ್ದು ಇಲ್ಲವಾದಲ್ಲಿ ಪ್ರವೇಶ ನೀಡಲಾಗುವುದಿಲ್ಲ’’ ಎಂದು ಘೋಷಿಸಿ ಈ ಬಗ್ಗೆ ವಿಶೇಷ ನಿಗಾ ವಹಿಸಬೇಕೆಂದು ಡಿವೈ.ಎಸ್‍ಪಿ ದಿನೇಶ್‍ಕುಮಾರ್ ರವರಿಗೆ ಸೂಚನೆ ಕೊಟ್ಟರು.
ತಾ. 13ರಂದು ಜಿಲ್ಲಾಧಿಕಾರಿ ಅನೀಸ್‍ಕಣ್ಮಣಿ ಜಾಯ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಇವರುಗಳು ಜಂಟಿಯಾಗಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ವಿವರಿಸಿದ ಅಂಶಗಳನ್ನು ತಾ. 14ರ ಶಕ್ತಿ ಪತ್ರಿಕೆ ಮುಖ ಪುಟದಲ್ಲೇ ಪ್ರಕಟಿಸಿತು. “ಕಾವೇರಿ ತೀರ್ಥೋದ್ಭವ ವೀಕ್ಷಣೆಗೆ ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಅವಕಾಶ” ಎಂಬ ದಪ್ಪಕ್ಷರದ ಶೀರ್ಷಿಕೆಯಡಿ ಯಲ್ಲಿ ಪ್ರಕಟಿಸಿದ ವರದಿಯಲ್ಲಿ “ತೀರ್ಥೋದ್ಭವ ಸನ್ನಿವೇಶವನ್ನು ಲಕ್ಷಾಂತರ ಮಂದಿ ವೀಕ್ಷಿಸುತ್ತಿದ್ದ ಅವಕಾಶ ಕೈ ತಪ್ಪಿ ಹೋಗಿದ್ದು ಕೇವಲ ಸಮಿತಿಯ ಕೆಲವು ಪ್ರಮುಖರು ಹಾಗೂ ದೇವಾಲಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಸೇರಿದಂತೆ ಸುಮಾರು 50 ಮಂದಿ ಮಾತ್ರ ವೀಕ್ಷಿಸಲು ನೀಡಲಾಗಿದೆ. ಆ ಪೈಕಿಯೂ ಭಾಗವಹಿಸುವ ಎಲ್ಲರೂ ಕೂಡ 48 ಗಂಟೆ ಅವಧಿಗೆ ಮುನ್ನ ಆರ್ ಟಿ.ಪಿ.ಸಿ.ಆರ್. ವಿಧಾನದಲ್ಲಿ ಕೋವಿಡ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಂಡು ‘ನೆಗೆಟಿವ್’ ದೃಢೀಕರಣ ಪತ್ರವನ್ನು ಪಡೆಯಬೇಕಿದೆ. ಅಂತಹವರಿಗೆ ಮಾತ್ರ ತೀರ್ಥೋದ್ಭವ ವೀಕ್ಷಿಸಲಾಗುತ್ತದೆ” ಎಂದು ವಿವರಣೆಕೊಟ್ಟರು
“ತೀರ್ಥೋದ್ಭವ ಘಟಿಸಿದ ಬಳಿಕ ಹೊರ ಭಾಗದಲ್ಲಿ ನಿಂತಿರುವ ಭಕ್ತಾದಿಗಳನ್ನು ಥರ್ಮಲ್‍ಪರೀಕ್ಷೆ ಮೂಲಕ ಒಳಗೆ ಬಿಡಲಾಗುತ್ತದೆ. ಅಲ್ಲಿ ಅವರು ತೀರ್ಥ ಪ್ರೋಕ್ಷಣೆ ಮೂಲಕವಷ್ಟೇ ಸಂತೃಪ್ತಿಪಟ್ಟುಗೊಳ್ಳಬೇಕಾಗಿದೆ.
“ಕೊರೊನಾ ಹಿನ್ನೆಲೆಯಲ್ಲಿ ದಸರಾ ಮತ್ತು ಕಾವೇರಿ ತೀರ್ಥೋದ್ಭವವನ್ನು ಸಾಕಷ್ಟು ಮುನ್ನೆಚ್ಚರಿಕೆಯೊಂದಿಗೆ ಆಚರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದ್ದು, ಜಿಲ್ಲಾಡಳಿತವು ದಸರಾ ಸಮಿತಿಗಳು ಹಾಗೂ ಕಾವೇರಿ ದೇವಾಲಯ ಸಮಿತಿ ಮತ್ತು ಜಿಲ್ಲೆಯ ಜನ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಕೈಗೊಂಡಿರವ ಕ್ರಮಗಳಾಗಿವೆಯೇ ಹೊರತು ಇದು ಜಿಲ್ಲಾಡಳಿತದ ಏಕಪಕ್ಷೀಯ ತೀರ್ಮಾನವಲ್ಲ” ಎಂದು ಅನೀಸ್‍ಕಣ್ಮಣಿ ಜಾಯ್ ಸ್ಪಷ್ಟಪಡಿಸಿದರು.
17 ರಂದು ನಿಗದಿತ ಸಮಯಕ್ಕೆ ತೀರ್ಥೋದ್ಭವವಾಯಿತು. ಅಂದಿನ ಮುಖ್ಯಾಂಶಗಳನ್ನು ಪತ್ರಿಕೆಯೊಂದು ಪ್ರಕಟಿಸಿದ್ದು ಪ್ರಸಕ್ತವಾದವು ಇವು-
1. ಭಾಗಮಂಡಲದಿಂದ ತಲಕಾವೇರಿ ತನಕ ವಿದ್ಯುತ್ ದೀಪದ ವ್ಯವಸ್ಥೆ ಮಾಡಲಾಗುತ್ತಿತ್ತು. ಈ ಬಾರಿ ಅದು ಇಲ್ಲ, ಪಾದಯಾತ್ರಿಗಳು ಕತ್ತಲಲ್ಲೇ ನಡೆದು ಕ್ಷೇತ್ರ ತಲುಪಿದರು. 2. ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಕ್ತರಿಗೆ ಬೆಳಕಿನ ವ್ಯವಸ್ಥೆ ಮಾಡಿದ್ದ ವಾಹನಕ್ಕೆ ಪೊಲೀಸರು ಅವಕಾಶ ಕೊಡಲಿಲ್ಲ. 3. ಕೋವಿಡ್ ಪರೀಕ್ಷೆ ಮಾಡಿದವರಿಗೆ ಮಾತ್ರ ಕ್ಷೇತ್ರದೊಳಗೆ ಪ್ರವೇಶ ಎನ್ನುವ ನಿರ್ಧಾರವನ್ನು ಗಾಳಿಗೆ ತೂರಲಾಗಿತ್ತು.
ಈ ಸಂದರ್ಭದಲ್ಲಿ ಮಾಡಬೇಕಾದ್ದನ್ನು ಮಾಡದೆ ಮಾಡಬಾರದ್ದನ್ನು ಮಾಡಿ ಭಾ.ಜ.ಪ. ಶಾಸಕರ ನೇತೃತ್ವದ ಜಿಲ್ಲಾಡಳಿತ ಕೃತಾರ್ಥಗೊಂಡಿತು. ಅವರ ವರ್ತನೆಯಿಂದ ಅರ್ಥವಾಗುವುದಿದು- ಅವರ ಪ್ರಕಾರ ರಸ್ತೆಯಲ್ಲಿ ಬೆಳಕು ಇದ್ದು ಪಾದಚಾರಿಗಳಿಗೆ ರಸ್ತೆ ಕಂಡು ಸುಗಮವಾಗಿ ನಡೆದರೆ ಕೊರೊನಾ ಬರುತ್ತದೆ. ಆದ್ದರಿಂದ ದಾರಿಯಲ್ಲಿ ದೀಪಗಳಿರಕೂಡದು.
ಕೊರೊನಾ ನಿಯಂತ್ರಿಸಲು ಭಾರತಿಯ ಜನತಾ ಪಕ್ಷದ ಕಾರ್ಯವೈಖರಿ ಹೀಗೆ ಎಂದು ಎಲ್ಲರಿಗೂ ಗೊತ್ತಾಯಿತು. ಕೊರೊನಾ ಬಗ್ಗೆ ಈ ಮಂದಿಯ ಜ್ಞಾನಕ್ಕೆ ಇವರಿಗೆ ನೋಬೆಲ್ ಪುರಸ್ಕಾರ ಘೋಷಿಸುವುದು ಸರಿಯಲ್ಲವೇ ?
“ಆಯ್ದ ವ್ಯಕ್ತಿಗಳಿಗಲ್ಲದೆ ಇತರರಿಗೆ ಪ್ರವೇಶವಿರುವುದಿಲ್ಲ” ಎಂದು ಘೋಷಿಸಿದ ಕೆ. ಜಿ. ಬೋಪಯ್ಯ ಅವರು ಅಂದು ಅಲ್ಲಿಗೆ ಬರಲೇ ಇಲ್ಲ. ಪೂರ್ವಭಾವಿ ಸಭೆಗಳಲ್ಲಿ ಭಾಗವಹಿಸದೆ ನೇಪಥ್ಯದಲ್ಲಿದ್ದ ಅಪ್ಪಚ್ಚುರಂಜನ್ ಅವರು ಆ ರಂಗ ಪ್ರವೇಶ ಮಾಡುತ್ತಾರೆ.
“ಈ ಬಾರಿ ಇಲ್ಲಿಗೆ ಬರುವವರು 72ಗಂಟೆಗಳ ಮೊದಲು ಕೋವಿಡ್ ಪರೀಕ್ಷೆ ಮಾಡಿಸಿರುವ ವೈದ್ಯಕೀಯ ವರದಿಯನ್ನು ಕಡ್ಡಾಯವಾಗಿ ಜೊತೆಯಲ್ಲಿಯೇ ತರಬೇಕು. ಜಿಲ್ಲೆಯ ಜನರ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದ್ದು ಇಲ್ಲವಾದಲ್ಲಿ ಪ್ರವೇಶ ನೀಡಲಾಗುವುದಿಲ್ಲ” ಎಂದು ಘೋಷಿಸಿ ‘ಈ ಬಗ್ಗೆ ವಿಶೇಷ ನಿಗಾ ವಹಿಸಬೇಕೆಂದು ಡಿವೈ.ಎಸ್‍ಪಿ ದಿನೇಶ್‍ಕುಮಾರ್ ಅವರಿಗೆ ಕೊಟ್ಟ ಕೆ. ಜಿ. ಬೋಪಯ್ಯ ಅವರ ಸೂಚನೆಯನ್ನು ಶಿರಸಾ ಪಾಲಿಸುತ್ತಿದ್ದ ಪೋಲಿಸರನ್ನು ಬದಿಗೆ ತಳ್ಳಿ ಕೆ. ಜಿ. ಬೋಪಯ್ಯ ಅವರ ನಿಲುವಿಗೆ ವ್ಯತಿರಿಕ್ತವಾಗಿ ಅಲ್ಲಿದ್ದ ಎಲ್ಲರನ್ನೂ ಒಳ ಬಿಟ್ಟು ಅಪ್ಪಚ್ಚುರಂಜನ್‍ಅವರು ಎಲ್ಲರೆದುರು ಹೀರೋ ಆದರು !
ಈ ಬಗ್ಗೆ ಪತ್ರಿಕೆಯೊಂದು ಈ ರೀತಿ ಬರೆಯಿತು-“ತೀರ್ಥೋದ್ಭವದ ವೇಳೆ ಭಕ್ತರಿಗೆ ದೇವಾಲಯದ ಒಳಗೆ ಪ್ರವೇಶವಿಲ್ಲ ಎನ್ನುವ ನಿಯಮ ರೂಪಿಸಿದ್ದ ಜನಪ್ರತಿನಿಧಿಗಳೇ ಮುಂದೆ ನಿಂತು ಭಕ್ತರನ್ನು ಒಳಗೆ ಕರೆದುಕೊಂಡ ಘಟನೆಯೂ ನಡೆಯಿತು. ಇದರಿಂದಾಗಿ ಜನದಟ್ಟಣೆ ನಿಯಂತ್ರಿಸಲು ನಿದ್ದೆಗೆಟ್ಟು ಮಧ್ಯರಾತ್ರಿಯಿಂದಲೇ ಬೈಗುಳಗಳನ್ನು ಕೇಳಿಸಿಕೊಂಡು ಕಾರ್ಯನಿರ್ವಹಿಸಿದ ಪೊಲೀಸರು ಇರಿಸು ಮುರಿಸು ಎದುರಿಸಿದರು. ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ ಅಸಮಾಧಾನದಿಂದ ಹೊರನಡೆದರು.”
‘‘ಪೊಲೀಸರಿಗೆ ನಿರ್ದೇಶನ ಕೊಟ್ಟವನು ನಾನು’’ ಎಂದು ಹೇಳಬೇಕಾಗಿದ್ದ ಕೆ. ಜಿ. ಬೋಪಯ್ಯ ಅವರು ಅಲ್ಲಿ ಇಲ್ಲ. ತಮ್ಮ ಪಕ್ಷದವರೇ ಆದ ತನ್ನಂತೆಯೇ ಶಾಸಕನಾದ ಬೋಪಯ್ಯ ಅವರು ಕೊಟ್ಟ ಆದೇಶ ತನಗೆ ಗೊತ್ತೇ ಇಲ್ಲ ಎಂಬಂತೆ ಅಪ್ಪಚ್ಚುರಂಜನ್ ಅವರ ನಟನೆ.
ನಿರ್ಬಂಧಗಳ ಸ್ವರೂಪವನ್ನು ಬೋಪಯ್ಯನವರೂ, ಜಿಲ್ಲಾಧಿಕಾರಿ ಯವರೂ ಮೂರು ದಿನಗಳ ಮೊದಲೇ ವಿವರಿಸಿದ್ದು ಅವು ಪತ್ರಿಕೆಗಳಲ್ಲಿ ಮುಖ ಪುಟಗಳಲ್ಲೇ ಪ್ರಕಟವಾಗಿದ್ದುವು. ಹೀಗಿದ್ದೂ ಕೊನೆಯ ಗಳಿಗೆಯವರೆಗೆ ಅಪ್ಪಚ್ಚು ರಂಜನ್ ಅವರು ಮೌನವಾಗಿದ್ದೇಕೆ ? “ಭಕ್ತರ ಮೇಲೆ ನಿರ್ಬಂಧ ಹೇರುವುದಕ್ಕೆ ನನ್ನ ವಿರೋಧವಿದೆ, ನಾನು ಅವರ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡುತ್ತೇನೆ” ಎಂದು ಮೊದಲೇ ಘೋಷಿಸಿದ್ದರೆ ಪೊಲೀಸರು ನಿರಾಳವಾಗಿ ಇರುತ್ತಿದ್ದರು, ನಿರ್ಬಂಧಗಳನ್ನು ಕೇಳಿ ಹೆದರಿ ಬಾರದಿದ್ದ ಭಕ್ತರನೇಕರು ಬರುತ್ತಿದ್ದರು.
ಕಾನೂನನ್ನು ಮಾಡಿದವರೂ ಭಾರತೀಯ ಜನತಾ ಪಕ್ಷದವರೇ, ತಾವೇ ರೂಪಿಸಿದ ನಿಯಮಗಳನ್ನು ಮುರಿದವರೂ ಭಾರತೀಯ ಜನತಾ ಪಕ್ಷದವರೇ. ಮಗುವನ್ನು ಚಿವುಟಿದ್ದೂ ಅವರೇ, ತೊಟ್ಟಿಲು ತೂಗಿದ್ದೂ ಅವರೇ. ಇದೇ ಭಾರತೀಯ ಜನತಾ ಪಕ್ಷ ! -ಇ. ರ. ದುರ್ಗಾಪ್ರಸಾದ್, ವೀರಾಜಪೇಟೆ.