ಕಣಿವೆ, ಅ. 28: ಕೊಡಗಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯ ಸರ್ಕಾರ ಈ ಬಾರಿ ಕೊಡಮಾಡುವ ಪ್ರತಿಷ್ಠಿತ ‘‘ಕರ್ನಾಟಕ ಕ್ರೀಡಾ ರತ್ನ 2020’’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದ ಪ್ರಗತಿಪರ ಕೃಷಿಕ ಬಿ.ಎಸ್.ಧನಪಾಲ್ ಹಾಗೂ ನಾಗರತ್ನ ದಂಪತಿಗಳ ಪುತ್ರಿ ಬಿ.ಡಿ. ಲಾವಣ್ಯ ಹಾಗೂ ಕೊಡ್ಲಿಪೇಟೆ ಬಳಿಯ ಶಿವರಳ್ಳಿ ಗ್ರಾಮದ ಕೃಷಿ ಕುಟುಂಬದ ಕೊಮಾರಪ್ಪ ಹಾಗೂ ಕುಸುಮಾವತಿ ದಂಪತಿಗಳ ಪುತ್ರಿ ಪಲ್ಲವಿ ಭಾಜನರು. ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ತೋರಿರುವ ಸಾಧನೆಗೆ ರಾಜ್ಯ ಸರ್ಕಾರದ ವತಿಯಿಂದ ಇದೇ ನವೆಂಬರ್ 2 ರಂದು ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಸ್ವೀಕರಿಸಲಿರುವ ರಾಜ್ಯದ ಒಟ್ಟು 65 ಸಾಧಕರ ಪೈಕಿ ಈ ಇಬ್ಬರು ಸೇರಿದ್ದಾರೆ. 2017, 2018 ಹಾಗೂ 2019 ರ ಏಕಲವ್ಯ, ಕರ್ನಾಟಕ ಕ್ರೀಡಾ ರತ್ನ, ಕ್ರೀಡಾ ಪೆÇೀಷಕ ಹಾಗೂ ಜೀವಮಾನ ಶ್ರೇಷ್ಠ ಪ್ರಶಸ್ತಿಗಳನ್ನು ಈ ಬಾರಿ ಒಂದೇ ವೇದಿಕೆಯಲ್ಲಿ ನೀಡುವ ಮೂಲಕ ಗೌರವಿಸಲಾಗುತ್ತಿದೆ. ಮೂಡಬಿದಿರೆಯ ಆಳ್ವಾಸ್ನ ಸ್ನಾತಕೋತ್ತರ ಕೇಂದ್ರದ ಎಂಬಿಎ ಪದವೀಧರೆ ಪಲ್ಲವಿ, ಎಂಕಾಂ ಪದವೀಧರೆ ಲಾವಣ್ಯ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆರರಿಂದ ಹತ್ತನೇ ತರಗತಿವರೆಗೆ ವ್ಯಾಸಾಂಗ ಮಾಡಿದ ಲಾವಣ್ಯ ಹಾಗೂ ಪಲ್ಲವಿ ಪ್ರೌಢ ಶಿಕ್ಷಣದ ಅವಧಿಯಲ್ಲಿ ರಾಜ್ಯ ಮಟ್ಟದ ಕ್ರೀಡೆಯಲ್ಲಿ ಎರಡು ಬಾರಿ ಹಾಗೂ ರಾಷ್ಟ್ರೀಯ ಕ್ರೀಡೆಯಲ್ಲಿ ಒಂದು ಬಾರಿ ಪಾಲ್ಗೊಂಡಿದ್ದರು. ಪಿಯು ಶಿಕ್ಷಣಕ್ಕೆ ಈ ಇಬ್ಬರು ಮೂಡಬಿದಿರೆಯ ಆಳ್ವಾಸ್ ಕಾಲೇಜಿಗೆ ಕ್ರೀಡಾ ಕೋಟಾದಲ್ಲಿ ಉಚಿತವಾದ ಪ್ರವೇಶ ಪಡೆದು ಪಿಯುನಿಂದ ಸ್ನಾತಕೋತ್ತರ ಪದವಿವರೆಗೂ ಎಂಟು ವರ್ಷಗಳ ಕಾಲ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ದೇಶದ ಹಲವು ರಾಜ್ಯಗಳಲ್ಲಿ ನಡೆದ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಗಣನೀಯವಾದ ಸಾಧನೆ ತೋರಿದರು.
2014 ರಲ್ಲಿ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಯಲ್ಲಿ ಪಾಲ್ಗೊಂಡು ಅದ್ವಿತೀಯ ಸಾಧನೆ ತೋರಿದ ಲಾವಣ್ಯ ಅವರಿಗೆ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ಎರಡು ಬಾರಿ ಬಂದರೆ, ಪಲ್ಲವಿ ಅವರಿಗೆ ಮೂರು ಬಾರಿ ಬಂದಿದೆ. ಈ ಇಬ್ಬರು ವಿದ್ಯಾರ್ಥಿಗಳು ದೇಶದ ಹಲವು ರಾಜ್ಯಗಳಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿ ಗೆಲುವಿನ ಕಿರೀಟವನ್ನು ಧರಿಸುವುದರ ಜೊತೆಗೆ, ಓದಿನಲ್ಲೂ ಪ್ರತಿಭಾವಂತರು ಲಾವಣ್ಯ ಎಂಕಾಂನಲ್ಲಿ ಹ್ಯೂಮನ್ ರಿಸೋರ್ಸ್ ಡೆವಲಪ್ಮೆಂಟ್ ವಿಭಾಗದಲ್ಲಿ ಸಾಧನೆ ತೋರಿದ್ದಾರೆ.
(ಮೊದಲ ಪುಟದಿಂದ) ಮುಂದೆ ಕ್ರೀಡಾ ವಿಷಯದಲ್ಲಿ ಪಿಎಚ್ ಡಿ ಮಾಡುವ ಇಂಗಿತ ವ್ಯಕ್ತಪಡಿಸಿರುವ ಲಾವಣ್ಯ ಹಾಗೂ ಪಲ್ಲವಿ ನಾವು ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಈ ಮಟ್ಟದ ಸಾಧನೆ ತೋರಲು ಪ್ರೌಢ ಹಂತದಲ್ಲಿದ್ದಾಗಲೇ ನಮ್ಮ ಪ್ರತಿಭೆಯನ್ನು ಗುರುತಿಸಿ ಬೆನ್ನೆಲುಬಾಗಿ ನಿಂತ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂದಿನ ಪ್ರಾಂಶುಪಾಲರಾಗಿದ್ದ ಕೆ.ವಿ. ಸುರೇಶ್, ದೈಹಿಕ ಶಿಕ್ಷಕರಾಗಿದ್ದ ಲಿಂಗಾನಂದ ಹಾಗೂ ಗಿರೀಶ್ ಮಾವತ್ತೂರು ಅವರೇ ಕಾರಣರು ಎನ್ನುತ್ತಾರೆ. ನಂತರ ನಮ್ಮ ಪ್ರತಿಭೆಗೆ ಆಳ್ವಾಸ್ ಕಾಲೇಜಿನ ಮುಖ್ಯಸ್ಥರಾದ ಮೋಹನ್ ಆಳ್ವಾ ಹಾಗೂ ಕ್ರೀಡಾ ತರಬೇತುದಾರ ಪ್ರವೀಣ್ ಅವರ ಮಾರ್ಗದರ್ಶನ ರಾಷ್ಟ್ರಮಟ್ಟದಲ್ಲಿ ನಮ್ಮನ್ನು ಬೆಳಗಿಸಿತು ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಮೂಲತಃ ಕೃಷಿಕರಾದ ಲಾವಣ್ಯ ಪೆÇೀಷಕರಾದ ಧನಪಾಲ್ ಅವರಿಗೂ 2014ರಲ್ಲಿ ಸಾವಯವ ಕೃಷಿಗೆ ರಾಜ್ಯಮಟ್ಟದ ಪ್ರಶಸ್ತಿ ದೊರಕಿತ್ತು. ಮಗಳ ಕಠಿಣ ಪರಿಶ್ರಮದ ಸಾಧನೆ ಹಾಗೂ ಆ ಸಾಧನೆ ಗುರುತಿಸಿ ಸರ್ಕಾರ ನೀಡುತ್ತಿರುವ ಪ್ರಶಸ್ತಿ ವಿಷಯ ತಿಳಿದ ಲಾವಣ್ಯ ಪೆÇೀಷಕರು ಭಾವುಕರಾಗಿದ್ದಾರೆ.
ಹಾಗೆಯೇ ಎಂಬಿಎ ಸ್ನಾತಕೋತ್ತರ ಪದವಿ ಪೂರೈಸಿರುವ ಪಲ್ಲವಿ ಮಾತನಾಡಿ, ತನ್ನ ಪರಿಶ್ರಮಕ್ಕೆ ಪ್ರತಿಫಲ ದೊರಕಿದೆ. ಇನ್ನು ಮುಂದೆ ಉದ್ಯೋಗ ಹುಡುಕುತ್ತೇನೆ ಎಂದು ಭವಿಷ್ಯದ ಬಗ್ಗೆ ಬಯಕೆ ಹೊಂದಿದ್ದಾರೆ.
- ಕೆ.ಎಸ್. ಮೂರ್ತಿ