ಮಡಿಕೇರಿ, ಅ. 28: 17081ನೇ ಕೊಡಗು ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಇಂದು ಚುನಾವಣೆ ನಡೆಯಿತು. ಈ ಸಂಸ್ಥೆಯಲ್ಲಿ ನಾಲ್ವರು ಸರಕಾರದ ಹಂತದ ಅಧಿಕಾರಿಗಳೊಂದಿಗೆ ಇತರ 11 ಮಂದಿ ನಿರ್ದೇಶಕರುಗಳಾಗಿ ಕರ್ತವ್ಯ ನಿರ್ವಹಣೆಗೆ ಅವಕಾಶವಿದೆ. ಈ 11 ಸ್ಥಾನಗಳ ಪೈಕಿ ಇಂದು ಸಾಮಾನ್ಯ ವರ್ಗದ ಮೂರು ಸ್ಥಾನಗಳಿಗೆ ಐವರು ಸ್ಪರ್ಧಿಸಿದ್ದರಿಂದ ಚುನಾವಣೆ ನಡೆಯಿತು.ಇಂದು ಬೆಳಿಗ್ಗೆಯಿಂದ ಸಂಜೆಯ ತನಕ ನಡೆದ ಮತದಾನ ಪ್ರಕ್ರಿಯೆಯಲ್ಲಿ ಐವರು ಸ್ಪರ್ಧಿಗಳಿಗೆ ಕೇವಲ 17 ಸದಸ್ಯರು ಮತ ನೀಡುವ ಅಧಿಕಾರ ಹೊಂದಿದ್ದರು. ಜಿಲ್ಲೆಯ ಕೈಗಾರಿಕಾ ಉದ್ಯಮಗಳ ಪ್ರತಿನಿಧಿತ್ವ ಹೊಂದಿರುವ ಸುಮಾರು 167 ಸದಸ್ಯರ ಪೈಕಿ ಬಹುತೇಕ ಮಂದಿ ಕನಿಷ್ಟ ಮೂರು ವಾರ್ಷಿಕ ಮಹಾಸಭೆಗಳಿಗೆ ಭಾಗವಹಿಸದೆ ತಮ್ಮ ಮತದಾನ ಹಕ್ಕು ಕಳೆದುಕೊಂಡಿದ್ದರು. ಈ ಪೈಕಿ ಕೇವಲ 15 ಮಂದಿ ಹಕ್ಕು ಚಲಾಯಿಸಲು ಅವಕಾಶ ಪಡೆದಿದ್ದರು.

ಅಂತೆಯೇ ದ್ವಾಕ್ರಾ ಗುಂಪಿನ 97 ಸ್ವಸಹಾಯ ಸಂಘಗಳ ಪೈಕಿ ಬಹುತೇಕ ಸದಸ್ಯರು, ಈ ಸಂಸ್ಥೆಯ ಐದು ವರ್ಷಗಳ ಅಧಿಕಾರ ಅವಧಿಯ 3 ಮಹಾಸಭೆಗಳಿಗೆ ಗೈರು ಹಾಜರಾಗಿದ್ದ ರಿಂದ ಇಂದಿನ ಮತದಾನದಿಂದ ಅರ್ಹತೆ ಕಳೆದುಕೊಂಡಿದ್ದರು. ಬದಲಾಗಿ ಈ ಗುಂಪಿನಿಂದ ಇಬ್ಬರು ಮಾತ್ರ ಅವಕಾಶ ಹೊಂದಿದ್ದರು.

(ಮೊದಲ ಪುಟದಿಂದ) ಸ್ಪರ್ಧಾ ವಿಜೇತರು : ಇಂದಿನ ಚುನಾವಣೆಯಲ್ಲಿ ತಲಾ 12 ಮತಗಳೊಂದಿಗೆ ಸಾಮಾನ್ಯ ವರ್ಗದಿಂದ ಎ. ಜೇಕಬ್, ಸಿ.ವಿ. ನಾಗೇಶ್ ಹಾಗೂ ಸಿ.ಎಂ. ಯಶವಂತ್ ಅವರುಗಳು ಸ್ಪರ್ಧಿಸಿ ಜಯಗಳಿಸಿದ್ದಾರೆ. ಕಣದಲ್ಲಿದ್ದ ಇನ್ನಿಬ್ಬರ ಪೈಕಿ ಎನ್.ಸಿ. ಲೋಕೇಶ್ 2 ಮತಗಳಿಸಿದರೆ, ರಾಜಶೇಖರ್ ಸಿ. ಯತ್ನಟಿ ಶೂನ್ಯದೊಂದಿಗೆ ಪರಾಜಯಗೊಂಡಿದ್ದಾರೆ.

ಇನ್ನು ಮಹಿಳಾ ಸ್ಥಾನಗಳಿಗೆ ಅವಿರೋಧವಾಗಿ ಎಂ.ಜಿ. ಲಲಿತಾ ಹಾಗೂ ಆ್ಯನಿ ಫಾತಿಮಾ ನೇಮಕಗೊಂಡಿದ್ದಾರೆ. ಕೈಗಾರಿಕಾ ಸಹಕಾರ ಸಂಸ್ಥೆ ಪ್ರತಿನಿಧಿಗಳಾಗಿ ಹೊಸೂರು ಜೆ. ಸತೀಶ್‍ಕುಮಾರ್ ಹಾಗೂ ಆಶಾ ಚಿಣ್ಣಪ್ಪ ಆಯ್ಕೆಗೊಂಡಿದ್ದಾರೆ. ಚುನಾವಣಾಧಿಕಾರಿಯಾಗಿ ಸಿ.ಎನ್. ರಘು ಕಾರ್ಯನಿರ್ವಹಿಸಿದರು. ಸಂಸ್ಥೆಯ ವ್ಯವಸ್ಥಾಪಕ ಕಾರ್ಯಪ್ಪ ಹಾಗೂ ಇತರರು ಹಾಜರಿದ್ದರು.