ಬೆಂಗಳೂರು, ಅ. 28: ಕೊಡಗಿನ ಸಣ್ಣ ಗ್ರಾಮವಾದ ಬೆಟ್ಟತ್ತೂರುವಿನಲ್ಲಿ ಜನಿಸಿ ರಾಜ್ಯದ ಸಿನಿಮಾ ಲೋಕದಲ್ಲಿ ಹೆಸರು ಮಾಡಿರುವ ಆಪಾಡಂಡ ಟಿ. ರಘು ಅವರಿಗೆ 2020ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ರಾಜ್ಯದ 65 ಮಂದಿಗೆ ಪ್ರಸಕ್ತ ವರ್ಷ ಪ್ರಶಸ್ತಿ ದೊರಕಿದ್ದು, ಆ ಪೈಕಿ ಕೊಡಗಿನಿಂದ ಆಯ್ಕೆಯಾದ ಏಕೈಕ ವ್ಯಕ್ತಿಯೆಂದರೆ ಎ.ಟಿ. ರಘು ಅವರು.ಒಂದೆಡೆ ಸಂತೋಷದ ಸುದ್ದಿ ಸಿಗುತ್ತಿದ್ದಂತೆ, ಮತ್ತೊಂದೆಡೆ ಅನಾರೋಗ್ಯದಿಂದ ಬಳಲುತ್ತಿರುವ ರಘು ಅವರು, ಬೆಂಗಳೂರಿನ ಆಸ್ಪತ್ರೆಯೊಂದರ ‘ಡಯಾಲಿಸಿಸ್’ ಕೇಂದ್ರದಿಂದ ಮೊಬೈಲ್ ಮೂಲಕ ‘ಶಕ್ತಿ’ಯೊಂದಿಗೆ ಸಂಭಾಷಿಸಿದರು.‘ಶಕ್ತಿ’ಯೊಂದಿಗೆ ಮಾತನಾಡಿದ ರಘು ಅವರ ಮನದಾಳದ ಮಾತು ಹೀಗಿದೆ : 1980ರ ದಶಕದ ಸಂದರ್ಭ ಮಡಿಕೇರಿಯಲ್ಲಿ ಚಿತ್ರೀಕರಣವೊಂದು ನಡೆಯುತ್ತಿದ್ದು, ದಿಢೀರಾಗಿ ಅದರಲ್ಲಿ ಕಿರುಪಾತ್ರವೊಂದರಲ್ಲಿ ಪಾಲ್ಗೊಳ್ಳುವ ಮುಹೂರ್ತ ನನಗೆ ಒದಗಿಬಂತು. ಅಲ್ಲಿಂದ ಆಗಿನ ಮದ್ರಾಸ್‍ಗೆ ತೆರಳಿ ಚಿತ್ರೀಕರಣದ ತಾಂತ್ರಿಕ ವಿಭಾಗದಲ್ಲಿ ವಿಶೇಷ ಅನುಭವ ಪಡೆದೆ. ಬಳಿಕ ಒಂದೊಂದಾಗಿ ನನಗೆ ಚಿತ್ರಲೋಕದಲ್ಲಿ ಅವಕಾಶಗಳು ಲಭಿಸಿದವು. ಕನ್ನಡ ಚಿತ್ರದ ನಿರ್ದೇಶನವನ್ನು ಮಾಡುವ ಸಂದರ್ಭ ‘ನ್ಯಾಯ ನೀತಿ ಧರ್ಮ’ ಪ್ರಥಮ ಚಿತ್ರವಾಗಿದ್ದು, ಅಂಬರೀಶ್ ಅವರು ನಾಯಕ ನಟರಾಗಿದ್ದರು. ಬಳಿಕ 1984ರಲ್ಲಿ ಹಿಂದಿ ಚಿತ್ರ ‘ಮೇರಿ ಅದಾಲತ್’ನಲ್ಲಿಯೂ ಪಾಲ್ಗೊಳ್ಳುವ ಸನ್ನಿವೇಶ ಒದಗಿತ್ತು. ಬಳಿಕ ‘ಅಜಯ್ - ವಿಜಯ್’ ಚಿತ್ರದಲ್ಲಿ ಅಂಬರೀಶ್, ಜಗ್ಗೇಶ್ ಪ್ರಮುಖ ನಟರಾಗಿದ್ದು, ಸುಮಾರು 32 ಕನ್ನಡ ಚಿತ್ರಗಳಲ್ಲಿ ಆಯಾ ಸಂದರ್ಭ ನಿರ್ದೇಶಕ, ನಿರ್ಮಾಪಕ ಹಾಗೂ ಶಿವರಾಜ್‍ಕುಮಾರ್ ಅವರೊಂದಿಗೆ ನಟನಾ ಪಾತ್ರಧಾರಿಯಾಗಿಯೂ ಅವಕಾಶ ದೊರಕಿತು. ಜನ್ಮಭೂಮಿ, ಶ್ರಾವಣ ಸಂಜೆ ಹಾಗೂ ಅಂಬರೀಶ್ ಅಭಿನಯದ ‘ಮಂಡ್ಯದ ಗಂಡು’, ಮಿಡಿದ ಹೃದಯಗಳು, ಕೆಂಪುಸೂರ್ಯ, ಕೃಷ್ಣ ಮೆಚ್ಚಿದ ರಾಧೆ, ಆಪದ್ಭಾಂದವ, ದೇವರಮನೆ, ಕಾಡಿನರಾಜ, ಬೆಂಕಿಚೆಂಡು ಮೊದಲಾದ ಖ್ಯಾತ ಚಲನಚಿತ್ರಗಳಲ್ಲಿ ನಾನು ಪಾಲ್ಗೊಳ್ಳುವಂತಾದದ್ದು ಇನ್ನೂ ನೆನಪಿನಲ್ಲಿ ಉಳಿದಿದೆ. ಖ್ಯಾತ ನಟರುಗಳಾದ ಅಂಬರೀಶ್, ವಿಷ್ಣುವರ್ಧನ್, ದೇವರಾಜ್, ಮುಖ್ಯಮಂತ್ರಿ ಚಂದ್ರು, ದ್ವಾರಕೀಶ್, ಶಂಕರನಾಗ್, ವಜ್ರಮುನಿ, ಮಾಲಾಶ್ರೀ, ಪ್ರಭಾಕರ್ ಹೀಗೆ ಅನೇಕ ಪ್ರಮುಖರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದುದು ಇನ್ನೂ ಸ್ಮರಣೀಯವಾಗಿದೆ ಎಂದು ಅವರು

(ಮೊದಲ ಪುಟದಿಂದ) ಅನಾರೋಗ್ಯದ ನಡುವೆಯೂ ಅಂತರಾಳದ ನುಡಿಯಾಡಿದರು.

ಜಿಲ್ಲೆಯ ಯುವ ಪೀಳಿಗೆಗೆ ನಿಮ್ಮ ಕರೆ ಏನು? ಎಂದಾಗ ಅವರ ಅನಿಸಿಕೆ ಹೀಗಿತ್ತು ‘‘ಕೊಡಗಿನಲ್ಲಿ ಜನಿಸಿ ಓರ್ವ ಕೊಡವ ಜನಾಂಗದವನಾಗಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಕೊಡಗಿನ ಯುವಕರು ಶ್ರಮಪಟ್ಟರೆ, ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶವಿದೆ. ನಾನು ಆರು ಕೊಡವ ಭಾಷೆಯ ‘ಟೆಲಿಫಿಲಂ’ಗಳನ್ನು ಕೂಡ ಚಿತ್ರೀಕರಿಸಿ ದೂರದರ್ಶನ ಮಾಧ್ಯಮ ಮೂಲಕ ಪ್ರಸಾರಗೊಂಡಾಗ; ಕೊಡಗಿನ ಜನರು ನನಗೆ ಪ್ರೀತಿಯ ಧಾರೆಯೆರೆದು ಪ್ರೋತ್ಸಾಹಿಸಿದರು.

‘ಐನ್‍ಮನೆ’ ಧಾರಾವಾಹಿಯಿಂದ ಪ್ರಾರಂಭಗೊಂಡು ನನ್ನ ಚಿತ್ರಲೋಕದ ಕೊನೆಯ ಧಾರಾವಾಹಿ ‘ನಂಗ ಕೊಡವ’ದಲ್ಲಿ ಮುಕ್ತಾಯಗೊಂಡಿತು. ಈ ಟೆಲಿಫಿಲಂಗಳಲ್ಲಿ ಕೊಡಗಿನ ತರುಣರುಗಳಾದ ಬಲ್ಲಚಂಡ ಭಜನ್ ಬೋಪಣ್ಣ, ನೆರವಂಡ ಉಮೇಶ್, ತಾತಂಡ ಪ್ರಭ, ಕೋಳೇರ ಸನ್ನು, ಅಪ್ಪಂಡೇರಂಡ ತೇಜು ಪೊನ್ನಪ್ಪ, ಕಾಳಿಮಾಡ ದಿನೇಶ್ ನಾಚಪ್ಪ, ನೆಲ್ಲಚಂಡ ರಿಷಿ, ಕೊಟ್ಟುಕತ್ತಿರ ಪ್ರಕಾಶ್, ತೇಲಪಂಡ ಪವನ್, ಪೊನ್ನಚೆಟ್ಟಿರ ರಮೇಶ್, ಪಾಡೆಯಂಡ ಪಲ್ಲವಿ, ನೆಲ್ಲಚಂಡ ರೇಖಾ ಹಾಗೂ ಬೊಪ್ಪಂಡ ಬೊಳ್ಳಮ್ಮ ಮೊದಲಾದವರು ಪಾತ್ರಧಾರಿಗಳಾಗಿ ಜನರ ಪ್ರೀತಿ ಗಳಿಸಿದುದು ನನ್ನ ಪರಿಶ್ರಮಕ್ಕೆ ಸಿಕ್ಕಿದ ಫಲವೆಂದು ತೃಪ್ತನಾಗಿದ್ದೇನೆ ಎಂದು ಮುಕ್ತ ನುಡಿಯಾಡಿದರು.

ಎ.ಟಿ. ರಘು ಅವರು ಇದೀಗ ತಮ್ಮ ಪತ್ನಿಯೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದಾರೆ. ಇಬ್ಬರು ಮಕ್ಕಳಿದ್ದಾರೆ. ‘‘ವಾರಕ್ಕೆ ಮೂರು ಬಾರಿ ‘ಡಯಾಲಿಸಿಸ್’ ಅನಿವಾರ್ಯ. ಹೃದಯ ಶಸ್ತ್ರಚಿಕಿತ್ಸೆ, ನೇತ್ರ ಶಸ್ತ್ರಚಿಕಿತ್ಸೆ ಕೂಡ ಆಗಿದೆ. ಈ ನಡುವೆಯೇ ಈ ಹಿಂದೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪಡೆದಿದ್ದ ನನಗೆ ಮತ್ತೆ ಇದೀಗ ರಾಜ್ಯ ಪ್ರಶಸ್ತಿ ದೊರಕಿರುವುದು ಹರ್ಷ ಮೂಡಿಸಿದೆ’’ ಎಂದು ಅಭಿಪ್ರಾಯಪಟ್ಟರು.

ಈ ಹಿಂದೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರೂ ಆಗಿದ್ದ ರಘು ಅವರನ್ನು ಅಕಾಡೆಮಿಯ ಮಾಜೀ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ಹಾಗೂ ಮಾಜೀ ಸದಸ್ಯ ಐತಿಚಂಡ ರಮೇಶ್ ಉತ್ತಪ್ಪ ಅಭಿನಂದಿಸಿದ್ದಾರೆ.