ಮಡಿಕೇರಿ, ಅ. 27: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಸರಿಸಮಾನವೆಂಬಂತೆ ವಿಜೃಂಭಣೆಯಿಂದ ಹಗಲು - ರಾತ್ರಿ ಜನಜಂಗುಳಿಯೊಂದಿಗೆ, ವೈಭವೋಪೇತ ದಶಮಂಟಪಗಳ ಮೆರುಗಿನೊಂದಿಗೆ ಜರುಗುತ್ತಿದ್ದ ಮಡಿಕೇರಿ ದಸರಾದ ಸಂಭ್ರಮವನ್ನು ಈ ಬಾರಿ ಕೊರೊನಾ ನುಂಗಿಬಿಟ್ಟಿತು.ಐತಿಹಾಸಿಕ ಹಿನ್ನೆಲೆಯುಳ್ಳ ಸಾಂಪ್ರದಾಯಿಕ ಆಚರಣೆಯನ್ನು ಕೈಬಿಡಬಾರದೆಂಬ ಕಾರಣಕ್ಕಾಗಿ ಸರಕಾರದ ಕೋವಿಡ್ ಮಾರ್ಗಸೂಚಿಯೊಂದಿಗೆ ಸಾಂಪ್ರದಾಯಿಕವಾಗಿ ಸರಳವಾಗಿ ಆಚರಿಸಲಾಗಿದೆ. ವರ್ಷಂಪ್ರತಿ ವಿಜಯದಶಮಿ- ದಸರಾ ಆಚರಣೆಗೆ ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿಗಳು ಆರು ತಿಂಗಳಿನಿಂದಲೇ ತಯಾರಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದವು. ಆದರೆ ಈ ಬಾರಿ ಕೊನೆಯ ಕ್ಷಣದವರೆಗೂ ಆಚರಣೆಯಾಗಲಿದೆಯೇ ಎಂಬ ಸಂಶಯದೊಂದಿಗೆ ಕಳೆದು ಅಂತಿಮವಾಗಿ ನಿಯಮಾನುಸಾರ ನಿಗದಿತ ಅವಧಿಯೊಳಗಡೆ ಸರಳವಾಗಿ ಆಡಂಭರವಿಲ್ಲದೆ ಆಚರಿಸುವಂತೆ ತೀರ್ಮಾನವಾದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಸರಳ ದಸರಾ ಆಚರಣೆಯಾಗಿದೆ.
ಮರೆಯಾದ ಸಂಭ್ರಮರಾತ್ರಿಯಿಂದ ಮರುದಿನ ಮಧ್ಯಾಹ್ನದವರೆಗೂ ಜರುಗುತ್ತಿದ್ದ ಮಡಿಕೇರಿ ದಸರಾ ವೀಕ್ಷಿಸಲು ಕೊಡಗು ಜಿಲ್ಲೆ ಮಾತ್ರವಲ್ಲದೆ ಹೊರಜಿಲ್ಲೆ, ರಾಜ್ಯಗಳಿಂದ ಲಕ್ಷಾಂತರ ಮಂದಿ ಕುಟುಂಬ ಸಹಿತ ಆಗಮಿಸುತ್ತಿದ್ದರು. ನಗರದ ಪ್ರತಿ ರಸ್ತೆಗಳಲ್ಲೂ ಜನಜಂಗುಳಿ ಎದ್ದು ಕಾಣುತ್ತಿತ್ತು. ಝಗಮಗಿಸುವ ವಿದ್ಯುತ್ ಬೆಳಕಿನ ಚಿತ್ತಾರದೊಂದಿಗೆ, ಸುರಾಸುರರ ಕಾಳಗದ ಕಥನ ಸಹಿತ ಕಂಗೊಳಿಸುವ ದಶಮಂಟಪಗಳ ವೀಕ್ಷಣೆ ದಸರಾಗೆ ವಿಶೇಷ ಮೆರುಗು ನೀಡುತ್ತಿತ್ತು. ನೂಕುನುಗ್ಗಲಿನ ನಡುವೆ ಜನರು ಈ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದರು.
(ಮೊದಲ ಪುಟದಿಂದ) ಗಾಂಧಿ ಮೈದಾನದಲ್ಲಿ ನವರಾತ್ರಿ ಪ್ರಯುಕ್ತ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು, ಕೊನೆಯ ದಿನದ ರಸಮಂಜರಿ, ಯುವ ದಸರಾ, ಮಹಿಳಾ ದಸರಾ, ಮಕ್ಕಳ ದಸರಾ, ಕ್ರೀಡೆ, ಕವಿಗೋಷ್ಠಿ ಹೀಗೆ, ನಾನಾ ಕಾರ್ಯಕ್ರಮಗಳು ವಿಶೇಷ ಮೆರುಗು ನೀಡುತ್ತಿದ್ದವು. ಆದರೆ, ಈ ಬಾರಿ ಈ ಎಲ್ಲಾ ಸಂಭ್ರಮಗಳಿಗೆ ಕೊರೊನಾ ಪೆಟ್ಟು ನೀಡಿತ್ತು.
ಲಕ್ಷಾಂತರ ಮಂದಿ ಸೇರುತ್ತಿದ್ದ ಮಂಜಿನ ನಗರಿಯಲ್ಲಿ ಸ್ಥಳೀಯರು ಕೂಡ ಹೊರಬರಲಾರದಂತಹ ಪರಿಸ್ಥಿತಿ ಕಂಡು ಬಂದಿತು. ಆದರೂ ಸಾಂಪ್ರದಾಯಿಕ ಆಚರಣೆ ಹೇಗಿರಬಹುದೆಂಬ ಕುತೂಹಲದೊಂದಿಗೆ ಒಂದಷ್ಟು ಮಂದಿ ಬಂದು ಸರಳವಾದರೂ ಅಲಂಕೃತಗೊಂಡಿದ್ದ ಮಂಟಪಗಳನ್ನು ವೀಕ್ಷಿಸಿ ತೆರಳಿದರು. ವರ್ಷಂಪ್ರತಿ ದಶಮಂಟಪಗಳು ಬೆಳಗ್ಗಿನ ಜಾವ ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿದು ಹಿಂತಿರುಗುತ್ತಿದ್ದವು. ಈ ಬಾರಿ ಕೊಂಚ ಬೇಗ ಅಂದರೆ, ನಡುರಾತ್ರಿ 1.30 ರಿಂದ 3 ಗಂಟೆ ಅವಧಿಯೊಳಗೆ ಬನ್ನಿ ಕಡಿದು ಆಯಾ ದೇವಾಲಯಗಳಿಗೆ ತೆರಳಿದವು.
ನಿರಾಸೆ ಕಾದಿತ್ತು
ಪ್ರತಿವರ್ಷ ರಾತ್ರಿ ಕಳೆದು ಮರುದಿನ ಸಂಜೆಯವರೆಗೂ ದಶಮಂಟಪಗಳು ರಾಜಬೀದಿಯಲ್ಲಿ ಆಯಾ ದೇವಾಲಯಗಳಿಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿರುತ್ತಿತ್ತು. ಸಂಗೀತದ ಅಬ್ಬರ ನಗರದೆಲ್ಲೆಡೆ ಮೊಳಗುತಿತ್ತು. ರಾತ್ರಿ ಬರಲಾಗದವರು, ವಯಸ್ಸಾದವರು, ಮಹಿಳೆಯರು, ಮಕ್ಕಳು ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ಆಗಮಿಸಿ ದಶಮಂಟಪಗಳನ್ನು ನೋಡುವ ಭಾಗ್ಯ ಲಭಿಸುತ್ತಿತ್ತು. ಆದರೆ ಈ ಬಾರಿ ಮುಂಜಾವಿನಲ್ಲಿಯೇ ಮಂಟಪಗಳು ಆಯಾ ದೇವಾಲಯಗಳ ಬಳಿ ಸೇರಿಯಾಗಿತ್ತು. ದಶಮಂಟಪ ಸಮಿತಿ ಸದಸ್ಯರುಗಳು ಸಪ್ಪೆ ಮೋರೆಯೊಂದಿಗೆ ಮನೆ ಸೇರಿಯಾಗಿತ್ತು.
ಬಂದ್‍ನ ಛಾಯೆ..!
ದಸರೆ ಸಂದರ್ಭ ದಿನ ರಸ್ತೆ ಬದಿಯಲ್ಲಿ ಹಾಕಿದ್ದ ಅಂಗಡಿ, ಹೊಟೇಲ್‍ಗಳಲ್ಲಿ ಭರ್ಜರಿ ವ್ಯಾಪಾರ - ವಹಿವಾಟು ನಡೆಯುತ್ತಿದ್ದವು. ಆದರೆ ಈ ಬಾರಿ ರಸ್ತೆ ಬದಿ ಹೋಗಲಿ ಎಂದಿನಂತೆ ವ್ಯಾಪಾರ, ವಹಿವಾಟು ನಡೆಸುವ ಬಹುತೇಕ ಅಂಗಡಿ - ಮಳಿಗೆಗಳು ತೆರೆಯಲೇ ಇಲ್ಲ. ಬಾಗಿಲು ಮುಚ್ಚಿದ್ದ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿ ಒಂದು ರೀತಿಯಲ್ಲಿ ಬಂದ್ ವಾತಾವರಣ ಕಂಡು ಬಂದಿತು. ಅದೂ ಅಲ್ಲದೇ ಮರುದಿನ ಬೆಳಿಗ್ಗೆ ದಶಮಂಟಪಗಳು ಸಾಗುವ ರಾಜಬೀದಿಯಲ್ಲಿ ಉಂಟಾಗುವ ಜನಜಂಗುಳಿಯಲ್ಲಿ ಸಿಲುಕಿಕೊಂಡವರ ಚಪ್ಪಲಿ, ಟೋಪಿ, ಬ್ಯಾಗ್, ಟವೆಲ್‍ಗಳ ರಾಶಿಯೇ ಕಂಡುಬರುತಿತ್ತು. ಈ ಬಾರಿ ಕಸಗಳು ಕೂಡ ಇರಲಿಲ್ಲ; ಬಂದ್ ಸಂದರ್ಭದ ರಸ್ತೆಗಳಂತೆ ನಿರಾಳವಾಗಿದ್ದವು.
ನಿರಾಳರಾದ ಪೊಲೀಸರು
ವರ್ಷಂಪ್ರತಿ ದಸರಾದಲ್ಲಿ ಪೊಲೀಸರು, ಗೃಹರಕ್ಷಕದಳದವರ ಪಡಿಪಾಟಲು ಹೇಳತೀರದ್ದಾಗಿರುತ್ತಿದ್ದವು. ಗಲಾಟೆ, ಜನಜಂಗುಳಿ ನಿಭಾಯಿಸುವುದು, ಸಿಸಿ ಕ್ಯಾಮರಾ ಅಳವಡಿಕೆ, ಮಫ್ತಿಯಲ್ಲಿ ತಿರುಗಾಡುವುದು, ಚೆಕ್‍ಪೋಸ್ಟ್‍ಗಳಲ್ಲಿ, ಪಾರ್ಕಿಂಗ್ ಸ್ಥಳದಲ್ಲಿ ಹೆಣಗಾಡುವದು ಸಾಕಾಗಿ ಹೋಗುವಷ್ಟರ ಮಟ್ಟಿಗೆ ಕಷ್ಟವಾಗುತ್ತಿತ್ತು. ಆದರೆ, ಈ ಬಾರಿ ಆ ಒಂದು ಕಷ್ಟವನ್ನು ಕೊರೊನಾ ಇಲ್ಲದಂತೆ ಮಾಡಿತ್ತು.
ಆದರೂ ಅಚ್ಚುಕಟ್ಟಾದ ಬಂದೋಬಸ್ತ್‍ನೊಂದಿಗೆ, ಯಾವದೇ ತೊಂದರೆಯಾಗದಂತೆ ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಪೊಲೀಸ್ ಅಧಿಕಾರಿಗಳು ಕರ್ತವ್ಯ ನಿಭಾಯಿಸಿದರು. ದಶಮಂಟಪಗಳ ಮೆರವಣಿಗೆಗೆ ರಾತ್ರಿ. 10.30ರ ಗಡುವು ನೀಡಿದ್ದರಾದರೂ ಒಂದಿಷ್ಟು ಮಾನವೀಯತೆಯೊಂದಿಗೆ ಸಾಂಪ್ರದಾಯಿಕ ಆಚರಣೆಗೆ ತೊಂದರೆ ಮಾಡದೆ ಇನ್ನಷ್ಟು ಸಮಯಾವಕಾಶ ನೀಡಿರುವ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದವು.
ಒಟ್ಟಿನಲ್ಲಿ ಎಲ್ಲಾ ಸಂಭ್ರಮ ಆಚರಣೆಗಳನ್ನು ಕಸಿದುಕೊಂಡಿರುವ ಕೊರೊನಾ ಮಹಾಮಾರಿ ತೊಲಗಲಿ ಎಂಬ ಸರ್ವರ ಪ್ರಾರ್ಥನೆಯೊಂದಿಗೆ ಈ ಬಾರಿಯ ದಸರಾ ಸಂಪನ್ನಗೊಂಡಿತು.
- ಸಂತೋಷ್