*ಗೋಣಿಕೊಪ್ಪಲು, ಅ. 26: ಅರುವತ್ತೊಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿ.ಹೆಚ್.ಎಸ್ ಕಾಲೋನಿ ಪರಿಶಿಷ್ಟ ವರ್ಗದ ಜನಾಂಗದವರು ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದಾರೆ ಎಂಬ ಆರೋಪವನ್ನು ಮನಗಂಡು ಜಿಲ್ಲಾ ಪಂಚಾಯ್ತಿ ಸದಸ್ಯ ಸಿ.ಕೆ. ಬೋಪಣ್ಣ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸುಮಾರು 9ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ಇಲ್ಲಿನ ಪರಿಶಿಷ್ಟ ವರ್ಗದ ಕುಟುಂಬಸ್ಥರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ನರಳುತ್ತಿರುವುದನ್ನು ಕಂಡು ಸಿ.ಕೆ. ಬೋಪಣ್ಣ ಅವರು ತಕ್ಷಣ ಅಧಿಕಾರಿಗಳೊಂದಿಗೆ ಸಮಸ್ಯೆಯನ್ನು ಬಗೆಹರಿಸಲು ಕಾರ್ಯಪ್ರವೃತರಾದರು.

ಹಲವು ವರ್ಷಗಳಿಂದ ಇಲ್ಲಿ ನೆಲೆ ಕಂಡುಕೊಂಡ ಕುಟುಂಬಗಳು ಉತ್ತಮ ಸೂರಿಲ್ಲದೆ, ವಿದ್ಯುತ್ ಸೌಕರ್ಯವಿಲ್ಲದೆ, ಶೌಚಾಲಯಗಳಿಲ್ಲದೆ ವಂಚಿತರಾಗಿರು ವುದು ಮೇಲ್ನೋಟಕ್ಕೆ ಕಂಡುಬಂದಿತು.

ಸೋರುವ ಮನೆಗಳು ಮತ್ತು ಬೀಳುವ ಹಂತದಲ್ಲಿರುವ ಗೋಡೆ ಗಳನ್ನು ಕಂಡು ತಕ್ಷಣವೇ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶಿವಕುಮಾರ್ ಅವರಿಗೆ ಸೂಕ್ತ ಮನೆಗಳನ್ನು ನಿರ್ಮಿಸಿಕೊಡಲು ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದರು.

ಈಗಾಗಲೇ ನಿರ್ಮಿಸಿರುವ ಮನೆಗಳು ಬೀಳುವ ಹಂತದಲ್ಲಿದ್ದು, ಅಪಾಯದ ಸೂಚನೆಯನ್ನು ನೀಡುತ್ತಿದೆ. ಇದರೊಂದಿಗೆ ಕಟ್ಟಿರುವ ಮನೆಯ ಗೋಡೆಗಳಿಗೆ ಸಿಮೆಂಟ್ ಸಾರಣೆ ಮಾಡದೇ ಹಾಗೆಯೇ ವಿದ್ಯುತ್ ಸಂಪರ್ಕ ಇಲ್ಲದೇ ವಿದ್ಯಾರ್ಥಿಗಳು ಪರದಾಡುವ ಸ್ಥಿತಿಯನ್ನು ಮನಗಂಡು ತಕ್ಷಣವೇ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವಂತೆ ಗೋಣಿಕೊಪ್ಪಲು ಕಿರಿಯ ಇಂಜಿನಿಯರ್ ಕೃಷ್ಣಕುಮಾರ್ ಅವರಿಗೆ ಸ್ಥಳದಲ್ಲಿಯೇ ಆದೇಶಿಸಿದರು.

ಈಗಾಗಲೇ ವಿದ್ಯುತ್ ಬಿಲ್ ಉಳಿಸಿಕೊಂಡಿರುವ ಮನೆಗಳ ಬಿಲ್ಲನ್ನು ಪಾವತಿಸಲು ಪಂಚಾಯಿತಿ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ ತಾಲೂಕು ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿ ಗುರುಶಾಂತಪ್ಪ ಮಾಹಿತಿ ಒದಗಿಸಿದರು.

ಅರುವತ್ತೊಕ್ಲು ಗ್ರಾ.ಪಂ. ಸದಸ್ಯ ಮನೆಯಪಂಡ ಪ್ರಾಣ್ ಬೋಪಣ್ಣ, ಆಶೋಕ್, ಗ್ರಾ.ಪಂ. ಸಿಬ್ಬಂದಿ ರಮೇಶ್ ಹಾಗೂ ಹಾಡಿ ನಿವಾಸಿಗಳು ಹಾಜರಿದ್ದರು.