ವೀರಾಜಪೇಟೆ, ಅ.26: ಓ.ಡಿ.ಪಿ. ಸಂಸ್ಥೆಯು ಮಹಿಳೆಯರ ಸರ್ವತೋಮುಖ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಜಾತಿ- ಬೇಧವಿಲ್ಲದೆ ಶ್ರಮಿಸುತ್ತಿದೆ ಎಂದು ಓಡಿಪಿ ಸಂಸ್ಥೆಯ ಮೈಸೂರು- ಕೊಡಗು ರೈತ ಉತ್ಪನ್ನ ಕೂಟದ ಯೋಜನೆಯ ಸಂಯೋಜಕ ಬಿ.ಜಾನ್ ರಾಡ್ರಿಗಸ್ ಹೇಳಿದರು.

ವೀರಾಜಪೇಟೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಓ.ಡಿ.ಪಿ. ಸಂಸ್ಥೆಯಿಂದ ನೋಂದಾಯಿತ ‘’ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೋವಿಡ್-19ರ ನೆರವು ಹಾಗೂ ಉಚಿತ ರಸ ಗೊಬ್ಬರ ವಿತರಣಾ ಕಾರ್ಯಕ್ರಮ’’ದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಜಾನ್ ರಾಡ್ರಿಗಸ್ ಅವರು ಸಭೆಯನ್ನುದ್ದೇಶಿಸಿ ಓಡಿಪಿ ಸಂಸ್ಥೆಯು ಕೊಡಗು, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆ ಸೇರಿದಂತೆ 30 ರೈತ ಘಟಕಗಳಿವೆ ಅದರಲ್ಲಿ ಕೊಡಗಿನಲ್ಲಿ 5 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು. ಸದಸ್ಯರಿಗೆ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಸಂಘಟಿಸಿ ಜಲಾನಯನ ಕಾರ್ಯಕ್ರಮ, ಪರಿಸರ ಸಂರಕ್ಷಣೆ, ಕೌಶಲ್ಯ ತರಬೇತಿ, ಸ್ವ-ಉದ್ಯೋಗ, ಆರೋಗ್ಯದ ಸೇರಿದಂತೆ ಹತ್ತಾರು ಕಾರ್ಯಕ್ರಮಗಳನ್ನು ನಾಲ್ಕು ಜಿಲ್ಲೆಗಳಲ್ಲಿ ಕಳೆದ 31 ವರ್ಷಗಳಿಂದಲೂ ಸಂಸ್ಥೆಯು ಸರ್ಕಾರದೊಂದಿಗೆ ಕೈಜೋಡಿಸುತ್ತಿರುವುದಾಗಿ ಹೇಳಿದರು.

ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಧರ್ಮಗುರು ಮದಲೈಮುತ್ತು ಮೊದಲು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಓಡಿಪಿ ಸಂಸ್ಥೆ ಸಣ್ಣ ಮತ್ತು ಅತಿ ಸಣ್ಣ ರೈತರ ಅಭಿವೃದ್ಧಿಗೆ ಕೋವಿಡ್-19 ಸಂದರ್ಭದಲ್ಲಿಯು ಸಹಕಾರ ನೀಡುತ್ತಿರುವುದು ಉತ್ತಮ ಕಾರ್ಯ. ಪ್ರತಿಯೊಬ್ಬರು ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕೃಷಿ ಅಧಿಕಾರಿ ಲವೀನ್ ಮಾದಪ್ಪ ಮಾತನಾಡಿ ಮಹಿಳಾ ಸದಸ್ಯರು ದಿನ ನಿತ್ಯದ ಕೆಲಸಗಳೊಂದಿಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳ ಬೇಕು. ಇಂದು ಓಡಿಪಿ ಸಂಸ್ಥೆಯ ಸದಸ್ಯರಿಗೆ ನೀಡುತ್ತಿರುವ ರಸ ಗೊಬ್ಬರವನ್ನು ಕೃಷಿ ಬೆಳವಣಿಗೆಯನ್ನು ನೋಡಿಕೊಂಡು ಮಿತವಾಗಿ ಹಂತ ಹಂತವಾಗಿ ಬಳಸಬೇಕು. ರೈತರು ರಸ ಗೊಬ್ಬರವನ್ನು ಮಣ್ಣಿನ ಫಲವತ್ತತೆಗೆ ಉಪಯೋಗಿಸುವುದು ಸರಿ ಆದರೆ ಸಾವಯವ ಗೊಬ್ಬರವನ್ನು ಕೃಷಿಗೆ ಹೆಚ್ಚು ಬಳಸುವುದು ಉತ್ತಮ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಓಡಿಪಿ ಸಂಸ್ಥೆಯ ಜಿಲ್ಲಾ ವಲಯ ಸಂಯೋಜಕರಾರ ಜಾಯ್ಸ್ ಮೇನೇಜಸ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಸಂಸ್ಥೆಯ ವೀರಾಜಪೇಟೆ ಕಾರ್ಯಕರ್ತರಾದ ರೀಟಾ ಜೋಸೆಪ್, ಸಿದ್ದಾಪುರದ ಧನುಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು. ಸಭೆಯಲ್ಲಿ 45 ರೈತ ಸದಸ್ಯರಿಗೆ ಉಚಿತ ರಸ ಗೊಬ್ಬರ ವಿತರಿಸಲಾಯಿತು.