ಕುಶಾಲನಗರ, ಅ. 26: ಕುಶಾಲನಗರದ ಕರಿಯಪ್ಪ ಬಡಾವಣೆಯಲ್ಲಿ ಮನೆಯೊಂದರ ಅಂಗಳದಲ್ಲಿ ಬೃಹತ್ ಗಾತ್ರದ ನಾಗರಹಾವು ಪ್ರತ್ಯಕ್ಷವಾಗಿ ಮನೆಮಂದಿ ಸ್ವಲ್ಪಕಾಲ ಆತಂಕದಲ್ಲಿ ಕಾಲ ಕಳೆಯಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಸೋಮವಾರ ಮಧ್ಯಾಹ್ನ ವೇಳೆಗೆ ಕುಶಾಲನಗರದಲ್ಲಿ ಈ ಹಿಂದೆ ಪ.ಪಂ. ಮುಖ್ಯಾಧಿಕಾರಿಯಾಗಿದ್ದ ಎ.ಎಂ. ಶ್ರೀಧರ್ ಅವರ ಮನೆಯ ಅಂಗಳದಲ್ಲಿ ನಾಗರಹಾವು ಕಾಣಿಸಿಕೊಂಡಿತ್ತು. ತಕ್ಷಣ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ 7ನೇ ಹೊಸಕೋಟೆಯ ಸ್ನೇಕ್ ಶಾಜಿ ಹಾವನ್ನು ಸೆರೆಹಿಡಿದು ಅರಣ್ಯಕ್ಕೆ ಸಾಗಿಸಿದ ಬಳಿಕ ಆತಂಕ ತಿಳಿಯಾಯಿತು. ಅಂದಾಜು 6 ಅಡಿ ಉದ್ದದ ನಾಗರಹಾವನ್ನು ಡಿಆರ್‍ಎಫ್‍ಒ ಅನಿಲ್ ಡಿಸೋಜ ಅವರ ಸಮ್ಮುಖದಲ್ಲಿ ಆನೆಕಾಡು ಮೀಸಲು ಅರಣ್ಯಕ್ಕೆ ಬಿಡಲಾಯಿತು.