ಕೂಡಿಗೆ, ಅ. 27: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆಗೆ ಜಿಲ್ಲಾ ಪಂಚಾಯತ್ ವತಿಯಿಂದ ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ ನೀರಿನ ಘಟಕ ಕಾಮಗಾರಿಗೆ ಚಾಲನೆ ದೊರೆತಿದೆ. ಕೂಡಿಗೆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಅವರ ಅನುದಾನದಲ್ಲಿ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಅಡಿಯಲ್ಲಿ ಹುದುಗೂರು ಗ್ರಾಮದ ವಿವಿಧ ವಾರ್ಡ್‍ಗಳಿಗೆ ಮತ್ತು ಬೀದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವ ಉದ್ದೇಶ ದಿಂದ 6 ಲಕ್ಷ ರೂ. ವೆಚ್ಚದ ಕ್ರಿಯಾ ಯೋಜನೆಯನ್ನು ತಯಾರಿಸಿದ್ದು, ಇದರ ಕಾಮಗಾರಿ ಪ್ರಾರಂಭಗೊಂಡಿದೆ.

ಹುದುಗೂರು ವ್ಯಾಪ್ತಿಯಲ್ಲಿ ಬಹು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಗಳು ಇದ್ದು ಇದರ ಬಗ್ಗೆ ಅನೇಕ ಗ್ರಾಮ ಪಂಚಾಯತಿಯ ಗ್ರಾಮ ಸಭೆಯಲ್ಲಿ ಚರ್ಚೆಗಳು ನಡೆದವು ಈ ಗ್ರಾಮಕ್ಕೆ ಪ್ರಮುಖವಾಗಿ ಕುಡಿಯುವ ನೀರಿನ ಅವಶ್ಯಕತೆ ಇರುವುದರಿಂದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಈ ಭಾಗದ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದರು.

ಇದೀಗ ಪ್ರಥಮ ಹಂತದ ನೀರಿನ ಸಂಗ್ರಹ ಟ್ಯಾಂಕ್‍ನ ಕಾಮಗಾರಿ ಆರಂಭಗೊಂಡಿದೆ.