ಶನಿವಾರಸಂತೆ, ಅ. 27: ಪಟ್ಟಣದ ಮಹಿಳಾ ಸಮಾಜದ ಆವರಣದಲ್ಲಿ ಶನಿವಾರಸಂತೆ-ಕೊಡ್ಲಿಪೇಟೆ ಹೋಬಳಿ ಮಟ್ಟದ ಕಾಂಗ್ರೆಸ್ ಅಲ್ಪಸಂಖ್ಯಾತ ಕಾರ್ಯಕರ್ತರ ಸಭೆ ನಡೆಯಿತು. ಕೆಪಿಸಿಸಿ ವಕ್ತಾರ ಹೆಚ್.ಎಸ್. ಚಂದ್ರಮೌಳಿ ಮಾತನಾಡಿ, ಮುಂಬರುವ ಗ್ರಾ.ಪಂ. ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಅರ್ಹತೆ ಹಾಗೂ ಪಕ್ಷದ ಬಗ್ಗೆ ಒಲವಿರುವವರನ್ನು ಚುನಾವಣೆಗೆ ತಯಾರು ಮಾಡಬೇಕು. ಬೇರುಗಳನ್ನು ಸದೃಢಪಡಿಸಿಕೊಂಡರೆ ಮುಂದೆ ಪಕ್ಷಕ್ಕೆ ಒಳ್ಳೆಯ ದಿನಗಳು ಬರುತ್ತವೆ. ಮೀಸಲಾತಿ ಭಿಕ್ಷೆ ಅಲ್ಲ ಅದು ಹಕ್ಕಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಮಾತನಾಡಿ, ಚುನಾವಣೆ ಕ್ರೀಡಾ ಸ್ಪರ್ಧೆಯಿದ್ದಂತೆ ಎಂದು ಅಭಿಪ್ರಾಯಪಟ್ಟರು. ಬಿ.ಜೆ.ಪಿ. ಪಕ್ಷ ತಂದಿರುವ ಕಾಯ್ದೆಗಳ ಕುರಿತು ಈ ಸಂದರ್ಭ ಅಸಮಾಧಾನ ವ್ಯಕ್ತಪಡಿಸಿದರು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ಅನಂತಕುಮಾರ್, ಮುಖಂಡರಾದ ಬಿ.ಬಿ. ಸತೀಶ್, ಸುರೇಶ್, ಬಿ.ಟಿ. ರಂಗಸ್ವಾಮಿ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎ. ಉಸ್ಮಾನ್, ತಾಲೂಕು ಒಬಿಸಿ ಅಧ್ಯಕ್ಷ ಗಂಗಾಧರ್, ಪಕ್ಷ ಪ್ರಮುಖರಾದ ಎಸ್.ಸಿ. ಶರತ್ ಶೇಖರ್, ಡಾ. ಉದಯಕುಮಾರ್, ಶಾಹಿದ್ ಖಾನ್, ಅಬ್ಬಾಸ್, ಮಹಮ್ಮದ್ ಪಾಶ, ಎಸ್.ಎಂ. ಮಹೇಶ್, ಔರಂಗ ಜೇಬ್, ಪಿ.ಕೆ. ಗಂಗಾಧರ್ ಉಪಸ್ಥಿತರಿದ್ದರು.