ಗೋಣಿಕೊಪ್ಪ ವರದಿ, ಅ. 27: ಸಮಾಜ ಸುಧಾರಣೆಯ ಉದ್ದೇಶದೊಂದಿಗೆ ವೃತ್ತಿ ನಿರ್ವಹಣೆ ಜವಾಬ್ದಾರಿ ಅಡಗಿರಬೇಕು ಎಂದು ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸ್ಥಾಪಿತ, ದಿಶಾ ಎಕ್ಸ್‍ಪೀರಿಯನ್ಷಲ್ ಲರ್ನಿಂಗ್ ಟ್ರಸ್ಟ್‍ನ ಟ್ರಸ್ಟಿ ಬಲ್ಲಚಂಡ ಕುಸುಮ್ ಟಿಟೊ ಅಭಿಪ್ರಾಯಪಟ್ಟರು.
ದಿಶಾ ಎಕ್ಸ್ ಪೀರಿಯನ್ಷಲ್ ಲರ್ನಿಂಗ್ ಟ್ರಸ್ಟ್ ವತಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅರಣ್ಯ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಅನುಭವಾತ್ಮಕ ಕಲಿಕೆ ಹಾಗೂ ಉದ್ದೇಶಪೂರಿತ ಜೀವನ ಎಂಬ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವೃತ್ತಿ ನಿಭಾಯಿಸುವುದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ವೃತ್ತಿಯೊಂದಿಗೆ ಸಮಾಜ ಸುಧಾರಣೆಯಂತಹ ಮೂಲ ಉದ್ದೇಶ ಕೂಡ ಅಡಗಿಸಿಕೊಳ್ಳುವುದರಿಂದ ಹೆಚ್ಚು ಪ್ರಯೋಜನವಾಗುತ್ತದೆ. ಸರ್ಕಾರಿ ಅಧಿಕಾರಿಯಾಗಿ ಸಾರ್ವಜನಿಕ ಸೇವೆ ನೀಡುವಾಗ ಅಲ್ಲಿ ಜನರಿಗೆ ನೀಡಿದ ಸೇವೆಯನ್ನು ಸಂಭ್ರಮಿಸುವ ಗುಣ ಕೂಡ ಅಮೂಲ್ಯ. ಇಂತಹವುಗಳನ್ನು ಮೈಗೂಡಿಸಿಕೊಂಡಾಗ ಸಮಾಜ ಸುಧಾರಣೆ, ವೃತ್ತಿಯಲ್ಲಿನ ಬದ್ಧತೆ ಕೂಡ ಹೆಚ್ಚಾಗುತ್ತದೆ ಎಂದು ಹೇಳಿದರು.
ಟ್ರಸ್ಟಿ ನಾಳಿಯಂಡ ಪ್ರೀತಂ ಪೊನ್ನಪ್ಪ ಮಾತನಾಡಿ, ಅರಣ್ಯ ರಕ್ಷಣೆಯೊಂದಿಗೆ ಮುಂದಿನ ಪೀಳಿಗೆಗೆ ವೃತ್ತಿ ಮೂಲಕ ಏನನ್ನು ಪೋಷಿಸಬೇಕು ಎಂಬ ಉದ್ದೇಶವಿರಬೇಕು. ಇದರಿಂದ ವೃತ್ತಿ ಮೇಲಿನ ಗೌರವ ಕೂಡ ಹೆಚ್ಚಾಗಲಿದೆ. ಮುಂದಿನ ಪೀಳಿಗೆ ಆಯಾ ವಿಭಾಗದ ಸರ್ಕಾರಿ ವೃತ್ತಿಯನ್ನು ಸಾಮಾಜಿಕ ಜವಾಬ್ದಾರಿಯಿಂದ ನಿಭಾಯಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ಈ ಸಂದರ್ಭ ಅನುಭವಾತ್ಮಕ ಕಲಿಕೆ ಕಾರ್ಯಕ್ರಮವಾಗಿ ತಂಡದ ನಿರ್ವಹಣೆ, ಕ್ರೀಡೆಯಲ್ಲಿ ಸೋಲು, ಗೆಲುವಿನ ನಂತರ ಅವಲೋಕನ, ತಂಡ ಕಟ್ಟುವುದು, ಸಮಾಜಕ್ಕಾಗಿ ಒಂದು ವ್ಯವಸ್ಥೆಗೆ ಎಲ್ಲರೂ ಒಗ್ಗೂಡುವ ಮನಸ್ಥಿತಿ, ವೀಡಿಯೋಗ್ರಫಿಯಂತಹ ಚಟುವಟಿಕೆ ಕಾರ್ಯಕ್ರಮ ನಡೆಸಲಾಯಿತು. ಸಹಾಯಕ ಅರಣ್ಯ ಅಧಿಕಾರಿ ಪಿ. ಎ. ಸೀಮಾ ಇದ್ದರು.