ಶ್ರೀಮಂಗಲ, ಅ. 27: ಅಕಾಲಿಕವಾಗಿ ನಿಧನರಾದ ಟಿ-ಶೆಟ್ಟಿಗೇರಿ-ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ಅಪ್ಪಣ್ಣ ಅವರಿಗೆ ಟಿ-ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ಹಮ್ಮಿಕೊಂಡಿದ್ದ ಚಂಗ್ರಾಂದಿ ಪತ್ತಾಲೋದಿ ಕಾರ್ಯಕ್ರಮದ ಕೊನೆಯದಿನ ನುಡಿನಮನದೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಟಿ-ಶೆಟ್ಟಿಗೇರಿ ಕೊಡವ ಸಮಾಜ ಸಭಾಂಗಣದಲ್ಲಿ ಅರುಣ್ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪ್ರಮುಖರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡವ ಸಮಾಜದ ಸಾಂಸ್ಕøತಿಕ ಸಮಿತಿಸಂಚಾಲಕ ಚಟ್ಟಂಗಡ ರವಿ ಸುಬ್ಬಯ್ಯ ಅವರು ಚಂಗ್ರಾಂದಿ ಪತ್ತಾಲೋದಿ ಕಾರ್ಯಕ್ರಮವನ್ನು ಕಳೆದ ಹಲವು ವರ್ಷದಿಂದ ಕೊಡವ ಸಮಾಜದ ಅಧ್ಯಕ್ಷರಾಗಿದ್ದ ಅರುಣ್ಅಪ್ಪಣ್ಣ ಅವರ ನೇತೃತ್ವದಲ್ಲಿ ಸಂಪ್ರದಾಯಿಕವಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಪ್ರಸಕ್ತ ವರ್ಷ ಸರಳವಾಗಿಯಾದರೂ ವೈವಿಧ್ಯಮಯ ಕಾರ್ಯಕ್ರಮದೊಂದಿಗೆ ನಡೆಸಲು ಯೋಜನೆ ರೂಪಿಸಲಾಗಿತ್ತು. ಹೆಚ್ಚು ಆಸಕ್ತಿಯಿಂದ ಅರುಣ್ಅಪ್ಪಣ್ಣ ಅವರು ಕಾರ್ಯಕ್ರಮದಲ್ಲಿ ತೊಡಗಿಸಿ ಕೊಳ್ಳುತ್ತಿದ್ದರು. ಆದರೆ ಅವರ ಅಕಾಲಿಕ ನಿಧನದಿಂದ ಪದ್ಧತಿಗಷ್ಟೇ ಸೀಮಿತಗೊಳಿಸಿ ಅರುಣ್ಅಪ್ಪಣ್ಣ ಅವರಿಗೆ ಈ ಕಾರ್ಯಕ್ರಮವನ್ನು ಅರ್ಪಣೆ ಮಾಡಲಾಗಿದೆ ಎಂದು ಹೇಳಿದರು.
ಮೂಂದ್ನಾಡ್ ಕೊಡವ ಸಮಾಜದ ನಾಡ್ ತಕ್ಕರಾದ ಕೈಬುಲೀರ ಹರೀಶ್ ಅಪ್ಪಯ್ಯ, ಕೊಡವ ಸಮಾಜದ ಗೌರವ ಕಾರ್ಯದರ್ಶಿ ಮನ್ನೇರ ರಮೇಶ್, ಖಜಾಂಚಿ ಚೊಟ್ಟೆಯಂಡಮಾಡ ವಿಶು, ನಿರ್ದೇಶಕಿ ಚಂಗುಲಂಡ ಅಶ್ವಿನಿಸತೀಶ್, ಕಾಳಿಮಾಡ ಬೆಳ್ಳಿಯಪ್ಪ, ಸಂಭ್ರಮ ಮಹಿಳಾ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷೆ ತಡಿಯಂಗಡ ಸೌಮ್ಯ ಕರುಂಬಯ್ಯ, ಕೊಡಗು ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ಮಾದಪ್ಪ ಇವರುಗಳು ಅರುಣ್ಅಪ್ಪಣ್ಣ ಅವರ ಸೇವೆಯನ್ನು ಸ್ಮರಿಸಿದರು.
ನೆನೆಗುದಿಗೆ ಬಿದ್ದಿದ್ದ ಟಿ-ಶೆಟ್ಟಿಗೇರಿ ಕೊಡವ ಸಮಾಜದ ಕಾಮಗಾರಿ ಪೂರ್ಣಗೊಳಿಸಲು ಅರುಣ್ ಅವರ ಶ್ರಮ ಸ್ಮರಣೀಯ. ಇದರೊಂದಿಗೆ ಸರಳ, ಸದಾಚಾರ, ಸೌಮ್ಯ ವ್ಯಕ್ತಿತ್ವದ ಅರುಣ್ಅಪ್ಪಣ್ಣ ಅವರ ಸಮಾಜ ಸೇವೆಯ ಗುಣ ಅವಿಸ್ಮರಣೀಯ. ಅರುಣ್ಅಪ್ಪಣ್ಣ ನಮ್ಮೊಂದಿಗೆ ಇಲ್ಲದಿದ್ದರೂ ಅವರು ರೂಪಿಸಿದ ಕಾರ್ಯಕ್ರಮ, ವ್ಯಕ್ತಿತ್ವ, ಸದಾಚಾರ ಗಳನ್ನು ಪೋಷಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಅರುಣ್ಅಪ್ಪಣ್ಣ ಅವರ ಸ್ಮಾರಕಾರ್ಥ ಮುಂದಿನ ದಿನಗಳಲ್ಲಿ ಕೊಡವ ಸಮಾಜದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಆಡಳಿತ ಮಂಡಳಿ ಮುಂದಾಗಬೇಕೆಂದು ಸಲಹೆ ನೀಡಿದರು.