ಗೋಣಿಕೊಪ್ಪಲು, ಅ. 27: ಕೃಷಿ ಆಧಾರಿತ ವಿದ್ಯುತ್ ಸಂಪರ್ಕದ ವಿದ್ಯುತ್ ಬಿಲ್ ಬಾಕಿ ಪಾವತಿಸಿಲ್ಲ ಎಂಬ ನೆಪವೊಡ್ಡಿ ರೈತರು ಪಂಪ್ ಸೆಟ್‍ಗಳಿಗೆ ಅಳವಡಿಸಿಕೊಂಡಿರುವ ವಿದ್ಯುತ್ ಸಂಪರ್ಕವನ್ನು ಪರಮರ್ಶೆ ಮಾಡದೆ ಚೆಸ್ಕಾಂ ಅಧಿಕಾರಿಗಳು, ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರ ದೆಂದು ಬಿಜೆಪಿ ಕೃಷಿ ಮೋರ್ಚಾದ ಪದಾಧಿಕಾರಿಗಳು ಗೋಣಿಕೊಪ್ಪ ಚೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರು.

ವೀರಾಜಪೇಟೆ ತಾಲೂಕು ಬಿಜೆಪಿ ಕೃಷಿ ಮೋರ್ಚಾದ ಅಧ್ಯಕ್ಷ ಕಟ್ಟೇರ ಈಶ್ವರ್ ಮುಂದಾಳತ್ವದಲ್ಲಿ ಗೋಣಿಕೊಪ್ಪಲುವಿನ ಚೆಸ್ಕಾಂ ಅಧಿಕಾರಿಗಳನ್ನು ಭೇಟಿ ಮಾಡಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಧಿಕಾರಿಗಳೊಂದಿಗೆ ಸುಧೀರ್ಘ ಚರ್ಚೆ ನಡೆಸಿ ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ಮನವರಿಕೆ ಮಾಡಿಕೊಟ್ಟರು. ಚೆಸ್ಕಾಂ ಅಧಿಕಾರಿಗಳು ಮುಖಂಡರ ಮಾತಿಗೆ ಮನ್ನಣೆ ವ್ಯಕ್ತಪಡಿಸಿ ಕೆಲವು ಸಂದರ್ಭಗಳಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ರೈತರಿಗೆ ನೋಟೀಸ್ ಜಾರಿಗೊಳಿಸಲಾಗಿದೆ. ಈ ಬಗ್ಗೆ ರೈತರು ಆತಂಕಪಡುವ ಅವಶ್ಯಕತೆ ಇಲ್ಲ ಎಂದರು.

ರೈತರು ಕಚೇರಿಗೆ ಆಗಮಿಸಿದ ಸಂದರ್ಭ ಅಧಿಕಾರಿಗಳು ಕಾರ್ಯನಿಮಿತ್ತ ಬೇರೆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದರು. ಸ್ಥಳದಿಂದ ದೂರವಾಣಿ ಕರೆ ಮಾಡಿದ ಕೃಷಿ ಮೋರ್ಚದ ಅಧ್ಯಕ್ಷ ಕಟ್ಟೇರ ಈಶ್ವರ್ ರೈತರ ಅಹವಾಲುಗಳನ್ನು ಆಲಿಸುವಂತೆ ಕೋರಿಕೊಂಡರು. ಕೂಡಲೇ ಆಗಮಿಸಿದ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿದರು

ದ.ಕೊಡಗಿನ ವಿವಿಧ ಭಾಗದಲ್ಲಿ ರೈತರು ತಮ್ಮ ಕೃಷಿ ಭೂಮಿಗೆ ಸರ್ಕಾರದ ನಿಯಮದಂತೆ ವಿದ್ಯುತ್ ಅಳವಡಿಸಿಕೊಂಡಿದ್ದಾರೆ. ಸರ್ಕಾರವು ಕೂಡ ಕೃಷಿ ಭೂಮಿಯ ಚಟುವಟಿಕೆಗೆ ಉಚಿತ ವಿದ್ಯುತ್ ನೀಡಿದೆ. ಆದರೆ ಕೆಲವು ಅಧಿಕಾರಿಗಳು ಯಾವುದನ್ನು ಪರಿಶೀಲಿಸದೆ ಏಕಾಏಕಿ ರೈತರಿಗೆ ನೋಟೀಸ್ ಜಾರಿ ಮಾಡುತ್ತಿದ್ದಾರೆ. ಇದರಿಂದ ರೈತರು ಆತಂಕ ಎದುರಿಸುವಂತಾಗಿದೆ. ಇನ್ನು ಮುಂದೆ ಈ ರೀತಿಯ ದೂರುಗಳು ರೈತರಿಂದ ಬರದಂತೆ ಎಚ್ಚರಿಕೆ ವಹಿಸುವಂತೆ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ ಮೋರ್ಚಾದ ಅಧ್ಯಕ್ಷ ಚೆಪ್ಪುಡೀರ ರಾಕೇಶ್ ದೇವಯ್ಯ ಚೆಸ್ಕಾಂ ಎಇಇ ಪ್ರಬಾರ ಅಧಿಕಾರಿ ಅಶೋಕ್ ಅವರಿಗೆ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಅಶೋಕ್ ಅವರು ಕೆಲವು ಸಂದರ್ಭಗಳಲ್ಲಿ ಈ ರೀತಿಯ ವ್ಯತ್ಯಾಸಗಳು ಸಹಜವಾಗಿ ನಡೆದುಹೋಗಿವೆ. ಇನ್ನು ಮುಂದಕ್ಕೆ ಕಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡುವುದಾಗಿ ಭರವಸೆ ನೀಡಿದರು. ಪ್ರಸ್ತುತ ಇರುವ ರೈತರ ಸಮಸ್ಯೆಗಳನ್ನು 8 ದಿನದ ಒಳಗೆ ಸರಿಪಡಿಸುವುದಾಗಿ ಅಧಿಕಾರಿಗಳು ಹೇಳಿದರು.

ಚೆಸ್ಕಾಂ ಎಇಇ ಪ್ರಬಾರ ಅಧಿಕಾರಿ ಅಶೋಕ್ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಇಲಾಖೆಯಲ್ಲಿನ ಸಮಸ್ಯೆಗಳನ್ನು ರೈತರ ಮೇಲೆ ಹೇರಬಾರದು. ರೈತರಿಗೆ ಯಾವುದೇ ತೊಂದರೆ ಎದುರಾಗದಂತೆ ಎಚ್ಚರಿಕೆ ವಹಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದರು. ಸರ್ಕಾರದ ವತಿಯಿಂದ ನೀಡಲಾಗುವ ಪ್ರಯೋಜನಗಳು ರೈತರಿಗೆ ನ್ಯಾಯಯುತವಾಗಿ ಸಿಗುವಂತಾಗಬೇಕು ಎಂದು ಸೂಚನೆ ನೀಡಿದರು.

ಈ ಸಂದರ್ಭ ಕಿರುಗೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ಚೆರಿಯಪಂಡ ರಾಜ, ಬೂತ್ ಅಧ್ಯಕ್ಷ ಚೆರಿಯಪಂಡ ಕೀರ್ತನ್, ಬಿಜೆಪಿ ಕೃಷಿ ಮೋರ್ಚ ತಾಲೂಕು ಸದಸ್ಯರಾದ ಕಟ್ಟೇರ ಕವನ್, ಕಾಕಮಾಡ ಆದರ್ಶ್, ಕಟ್ಟೇರ ನರೇನ್, ಚೆಪ್ಪುಡೀರ ರಾಕೇಶ್ ದೇವಯ್ಯ, ರೈತ ಮುಖಂಡರಾದ ಪೆಮ್ಮಂಡ ವಿಶ್ವನಾಥ್, ಕೊಕ್ಕೆಂಗಡ ಸಚಿನ್, ಕಾಕಮಾಡ ಶಯನ್, ಕಾಕಮಾಡ ಹರೀಶ್, ಕೊಕ್ಕಲೆಮಾಡ ತಿಮ್ಮಯ್ಯ, ಕಾಡೇಮಾಡ ಶಾಂತು ಮುಂತಾದವರು ಉಪಸ್ಥಿತರಿದ್ದರು.