ನಾಪೋಕ್ಲು, ಅ. 24: ಕೊಡಗಿನ ಕೃಷಿಕರ ಮನೆಯ ಹಿತ್ತಲಲ್ಲಿ ಬೆಳೆಯುತ್ತಿದ್ದ ಸಾಮಾನ್ಯ ಬಾಳೆಗೆ ರೋಗ ತಗಲುತ್ತಿದ್ದು, ಬೆಳೆಗಾರರು ಚಿಂತಿತರಾಗಿದ್ದಾರೆ. ಸಾಮಾನ್ಯವಾಗಿ ವಿಶೇಷ ತಳಿಯ ಬಾಳೆಗಳಿಗೆ ರೋಗಬಾಧೆ ಕಾಣಿಸಿ ಕೊಳ್ಳುತಿತ್ತು. ಗಿಡಗಳನ್ನು ನೆಟ್ಟು ಎರಡು ಮೂರು ವರ್ಷದಲ್ಲಿ ರೋಗ ಕಾಣಿಸಿಕೊಂಡು ಮರುನಾಟಿ ಮಾಡುವುದು ಅನಿವಾರ್ಯವಾಗಿತ್ತು. ಇದು ಬೆಳೆಗಾರರನ್ನು ಕಾಡುತ್ತಿದ್ದ ಕಟ್ಟೆರೋಗ. ಅದೇ ರೀತಿಯ ರೋಗ ಇದೀಗ ಸಾಮಾನ್ಯ ಬಾಳೆಗೂ ವ್ಯಾಪಿಸಿದೆ.ಸ್ಥಳೀಯವಾಗಿ ಹೂಬಾಳೆ ಎಂದು ಕರೆಯಲ್ಪಡುವ ಕದಳಿ ಜಾತಿಯ ಬಾಳೆಗೆ ರೋಗ ಕಾಣಿಕೊಳ್ಳುತ್ತಿದ್ದು ಕಡಿಮೆ.ಆದರೆ ಈಗ ಈ ಬಾಳೆಯ ಎಲೆಗಳು ಹಠಾತ್ತಾಗಿ ಒಣಗಿಹೋಗುತ್ತಿವೆ. ಕ್ರಮೇಣ ಪೂರ್ಣ ಗಿಡವೇ ಒಣಗಿಹೋಗುತ್ತಿದೆ. ರೋಗ ಒಂದೊಂದೇ ಗಿಡಕ್ಕೆ ವ್ಯಾಪಿಸಿ ಎಲ್ಲವೂ ಕಾಯಿಲೆಗೆ ತುತ್ತಾಗುತ್ತಿದೆ. ಗಿಡ ಗೊನೆ ಬಿಟ್ಟರೂ ಬೆಳವಣಿಗೆ ಕಾಣದೇ ಮುದುಡಿ ಹೋಗುತ್ತಿದ್ದು ಬಾಳೆಯ ನಾಶಕ್ಕೆ ಕಾರಣವಾಗಿದೆ.

ಕೃಷಿಕರ ಹಿತ್ತಲಲ್ಲಿ, ತೋಟಗಳಲ್ಲಿ ಬೆಳೆಯುವ ಸಾಮಾನ್ಯ ಬಾಳೆ ಇದಾಗಿದ್ದು ಇದರ ಆರೈಕೆ ಕಡಿಮೆ. ಉತ್ತಮ ಗೊನೆ ಲಭಿಸುತಿತ್ತು, ಹಣ್ಣೂ ಸಹ ರುಚಿಕರ. ವಿವಿಧ ಪೂಜೆಗಳಿಗೆ ಅಗತ್ಯವೂ ಕೂಡ. ಕಾಯಿಲೆಗೆ ತುತ್ತಾಗುತ್ತಿರುವುದರಿಂದ ಬಾಳೆಹಣ್ಣುಗಳ ಕೊರತೆ ಕಂಡುಬಂದಿದೆ. ಹಠಾತ್ತಾಗಿ ಗಿಡ ಒಣಗುವ ಬಾಳೆಯ ಕಾಯಿಲೆಯನ್ನು ನಿಯಂತ್ರಣಕ್ಕೆ ತರಲು ಕೃಷಿ ಅಧಿಕಾರಿಗಳು ರೈತರಿಗೆ ಮಾರ್ಗದರ್ಶನ ನೀಡುವಂತಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಮಾರುಕಟ್ಟೆ ದೃಷ್ಟಿಯಿಂದ ಕೃಷಿ ಮಾಡಿದವರು ಸೂಕ್ತ ಗೊಬ್ಬರ, ಔಷಧಿಗಳನ್ನು ಬಳಸಿ ರೋಗ ಬಾರದಂತೆ ಎಚ್ಚರ ವಹಿಸುತ್ತಾರೆ. ಮನೆ ಬಳಕೆಗೆ ಬಾಳೆಯನ್ನು ಸಾಮಾನ್ಯ ರೈತರು ಬೆಳೆಯುತ್ತಿದ್ದು ರೋಗ ಉಲ್ಪಣಿಸುತ್ತಿರುವುದರಿಂದ ಅಸಹಾಯಕರಾಗಿದ್ದಾರೆ. ರೋಗಬಾಧೆಯಿಂದ ಒಣಗುತ್ತಿರುವ ಬಾಳೆಯನ್ನು ಉಳಿಸಲು ಜನಸಾಮಾನ್ಯರಿಗೆ ಮಾರ್ಗದರ್ಶನದ ಅಗತ್ಯವಿದೆ.

-ದುಗ್ಗಳ ಸದಾನಂದ