ಮಡಿಕೇರಿ, ಅ. 24: ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿ/ವಾರಸುದಾರರ ಮಾಲೀಕತ್ವವು ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಖಾತೆ ಬದಲಾವಣೆ ಮಾಡುವ ನಿಟ್ಟಿನಲ್ಲಿ ತಾ. 27 ರಿಂದ ಕೊಡಗು ಜಿಲ್ಲೆಯಲ್ಲಿ ಪೌತಿ/ವಾರಸುದಾರರ ಖಾತೆ ಆಂದೋಲನ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೌತಿ/ವಾರಸುದಾರ ಖಾತೆ ಆಂದೋಲನ ನಡೆಸುವ ಸಂಬಂಧ ಕಂದಾಯಾಧಿಕಾರಿಗಳ ಜೊತೆ ಶುಕ್ರವಾರ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೌತಿ/ವಾರಸುದಾರರು ಖಾತೆ ಆಂದೋಲನ ಸಂಬಂಧ ಸರ್ಕಾರ ಈಗಾಗಲೇ ಮಾರ್ಗಸೂಚಿ ಪ್ರಕಟಿಸಿದ್ದು, ಅದರಂತೆ ಕ್ರಮವಹಿಸು ವಂತೆ ತಹಶೀಲ್ದಾರರು, ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಇತರರಿಗೆ ನಿರ್ದೇಶನ ನೀಡಿದರು.

ಆಂದೋಲನ ಬಗ್ಗೆ ಸಂಬಂಧ ಪಟ್ಟವರು ನಾಡಕಚೇರಿಗೆ ನಮೂನೆ-1 ರಡಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಜಿಲ್ಲಾಡಳಿತದ ವೆಬ್‍ಸೈಟ್ ತಿತಿತಿ.ಞoಜಚಿgu. ಟಿiಛಿ.iಟಿನಲ್ಲಿ ತಾ. 27 ರಿಂದ ಡೌನ್ ಲೋಡ್ ಮಾಡಿಕೊಳ್ಳ ಬಹುದಾಗಿದೆ. ‘ಮರಣ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಒದಗಿಸಬೇಕು. ಮರಣ ಹೊಂದಿ ಒಂದು ವರ್ಷ ಮೇಲ್ಪಟ್ಟು ಆಗಿದ್ದಲ್ಲಿ ನ್ಯಾಯಾ ಲಯದಿಂದ ಮರಣ ಪ್ರಮಾಣ ಪತ್ರ ಪಡೆದು ಸಲ್ಲಿಸ ಬಹುದಾಗಿದೆ. ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್‍ನ್ನು ಒದಗಿಸಬೇಕು. ವಂಶವೃಕ್ಷದ ಮಾಹಿತಿ ಇರಬೇಕು ಎಂದು ತಿಳಿಸಿದರು.’

ಅರ್ಜಿ ಸಲ್ಲಿಕೆಯಾದ ನಂತರ 30 ದಿನಗಳಲ್ಲಿ ಪರಿಶೀಲಿಸಿ ಅರ್ಜಿ ಸಲ್ಲಿಸಿದವರ ಕುಟುಂಬದವರಿಗೆ ಪತ್ರ ರವಾನೆಯಾಗಲಿದ್ದು, ಈ ಸಂಬಂಧ ಆಕ್ಷೇಪಣೆಗಳಿದ್ದಲ್ಲಿ ಮಾಹಿತಿ ಪಡೆದ ನಂತರ ಮಾಲೀಕರ ಹೆಸರಿಗೆ ಖಾತೆಯಾಗಲಿದೆ ಎಂದು ಹೇಳಿದರು.

ಪೌತಿ/ವಾರಸುದಾರ ಖಾತೆ ಆಂದೋಲನ ಸಂಬಂಧ ಕಂದಾಯಾಧಿಕಾರಿಗಳು ಮನೆ ಮನೆಗೆ ತೆರಳಿ ಮಾಹಿತಿ ನೀಡಬೇಕು ಖಾತೆ ಬದಲಾವಣೆ ಸಂಬಂಧಿಸಿದಂತೆ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹ ಅವರು ಮಾಹಿತಿ ನೀಡಿ ಪೌತಿ/ವಾರಸುದಾರರ ಖಾತೆ ಆಂದೋಲನ ನಡೆಸಲು ಈಗಾಗಲೇ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಅದರಂತೆ ಆದ್ಯತೆ ಮೇಲೆ ಕ್ರಮವಹಿಸಬೇಕಿದೆ ಎಂದರು.

ಪ್ರತಿ ಗ್ರಾಮವಾರು ಮನೆ ಮನೆಗೆ ತೆರಳಿ ಮಾಹಿತಿ ನೀಡಬೇಕು. ಸ್ಥಳದಲ್ಲಿಯೇ ಪರಿಶೀಲಿಸಿ ಮಾಹಿತಿ ಪಡೆಯಬೇಕು ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ತಹಶೀಲ್ದಾರರಾದ ಮಹೇಶ್ (ಮಡಿಕೇರಿ), ಗೋವಿಂದ ರಾಜು (ಸೋಮವಾರಪೇಟೆ), ನಂದೀಶ್ (ವೀರಾಜಪೇಟೆ), ಭೂ ದಾಖಲೆಗಳ ಉಪ ನಿರ್ದೇಶಕ ಶ್ರೀನಿವಾಸ್, ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್, ಭೂ ದಾಖಲೆಗಳ ಸಹಾಯಕ ನಿರ್ದೇಶಕ ವಿರೂಪಾಕ್ಷ, ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು, ಇತರರು ಇದ್ದರು.