ಮತ್ಸ್ಯ ದೇಶದ ರಾಜನಾದ ಸಿದ್ದಾರ್ಥನ ಕಿರಿಮಗ ಚಂದ್ರವರ್ಮನು ದಕ್ಷಿಣ ದೇಶದ ಎಲ್ಲಾ ಯಾತ್ರಾಸ್ಥಳಗಳನ್ನು ಸಂಚರಿಸಿ ಕೊನೆಗೆ ಕಾವೇರಿಯ ಉಗಮ ಸ್ಥಾನವಾದ ಬ್ರಹ್ಮಗಿರಿಗೆ ಬಂದು ಪಾರ್ವತಿಯನ್ನು ಕುರಿತು ತಪಸ್ಸು ಮಾಡುತ್ತಾನೆ. ಪಾರ್ವತಿಯು ಪ್ರಸನ್ನಳಾಗಿ ಅವನಿಗೆ ಒಂದು ಕುದುರೆಯನ್ನು, ಒಂದು ಕತ್ತಿಯನ್ನು ಮತ್ತು ಒಂದು ಸೈನ್ಯವನ್ನು ದಯಪಾಲಿಸಿ ಇಲ್ಲಿ ರಾಜ್ಯಭಾರವನ್ನು ಮಾಡಬೇಕಾಗಿ ವರವನ್ನು ನೀಡಿದಳು. ತನ್ನ ಪಟ್ಟಕ್ಕೆ ರಾಣಿಯನ್ನು ಕೇಳಲು ತನ್ನ ಶಕ್ತಿಯಿಂದ ಸೃಷ್ಟಿಸಲ್ಪಟ್ಟ ಒಬ್ಬ ಆದಿಮ ಸಂಜಾತೆ ಕನ್ನಿಕೆಯನ್ನು ಕೊಟ್ಟಳು. ಈ ಕನ್ನಿಕೆಯಿಂದ ಹನ್ನೊಂದು ಮಂದಿ ರಾಜಕುಮಾರರು ಹುಟ್ಟಿ ಕ್ಷತ್ರಿಯರಂತೆ ಬೆಳೆದರು. ವಿದರ್ಭ ದೇಶದ ರಾಜನಿಗೆ ಆದಿಮ ಸಂಜಾತೆ ಸ್ತ್ರೀಯಿಂದ ಹುಟ್ಟಿದ ನೂರುಮಂದಿ ರಾಜಕುವರಿಯರನ್ನು ರಾಜಕುಮಾರರು ಮದುವೆ ಮಾಡಿಕೊಂಡರು, ಇವರಿಗೆ ನೂರು ಮಂದಿ ಮಕ್ಕಳು ಹುಟ್ಟಿ ಇವರು ಕೊಡಗು ದೇಶವನ್ನು ಆಳುತ್ತಿದ್ದರು.

ಕಾವೇರಿಯೇ ಪಾರ್ವತಿಯ ಅವತಾರವೆಂದು ಚಂದ್ರವರ್ಮನು ದೇವಿ ಪಾರ್ವತಿಯಿಂದ ತಿಳಿದಿದ್ದನು. ಈ ವಿಷಯವನ್ನು ಚಂದ್ರವರ್ವನು ತನ್ನ ಮಕ್ಕಳಿಗೆ ತಿಳಿಸಿದ್ದನು. ತನ್ನ ಹಿರಿಯರ ಮಗನಾದ ದೇವಕಾಂತನಿಗೆ ಪಟ್ಟವನ್ನು ಕಟ್ಟಿ, ಚಂದ್ರವರ್ಮನು ತಪಸ್ಸಿಗೆ ಅರಣ್ಯಕ್ಕೆ ತೆರಳಿದನು.

ಕಾವೇರಿಯು ತಲಕಾವೇರಿಯಿಂದ ಜಲರೂಪಿಣಿಯಾಗಿ ಹೊರಡುವ ಸಂದರ್ಭದಲ್ಲಿ ಪಾರ್ವತಿಯು ದೇವಕಾಂತವರ್ಮನಿಗೆ ಕನಸ್ಸಿನಲ್ಲಿ ಕಾಣಿಸಿಕೊಂಡು ತನ್ನ ಮಗಳ ವಂಶದಲ್ಲಿ ಹುಟ್ಟಿದ ಸಮಸ್ತರು ಬಲಮುರಿಗೆ ಹೋಗಿ ತನ್ನ ಆಗಮನವನ್ನು ನಿರೀಕ್ಷಿಸ ಬೇಕೆಂದು ಹೇಳಿ ಅಂತರ್ಧಾನಳಾದಳು. ಅದೇ ರೀತಿ ದೇವಕಾಂತ ವರ್ಮನು ಸಮಸ್ತ ಕುಟುಂಬವನ್ನು ಕರೆದುಕೊಂಡು ಜಲರೂಪಿಣಿ ಯಾಗಿ ಬರುವ ಕಾವೇರಿಯನ್ನು ಎದುರುಗೊಳ್ಳಲು ಬಲಮುರಿಯಲ್ಲಿ ನಿಂತಿರುತ್ತಾರೆ. ದೂರದಿಂದ ಕಾವೇರಿಯು ಹರಿದುಬರುವ ಶಬ್ದ ಕೇಳಲು ರಾಜನು ಮತ್ತು ಪ್ರಜೆಗಳು ಓಡಿ ಬಂದು ಕಾವೇರಿ ಬರುವ ದಾರಿಯಲ್ಲಿ ಅಡ್ಡವಾಗಿ ನಿಲ್ಲುತ್ತಾರೆ. ದೂರದಿಂದ ನೋಡಿದ ಕಾವೇರಿಯೂ ತಾನು ಬರುವ ರಭಸಕ್ಕೆ ಇವರೆಲ್ಲರೂ ಕೊಚ್ಚಿ ಹೋಗುತ್ತಾರೆಂದು ತಿಳಿದು ಕಾವೇರಿ ಬಂದ ಹಾಗೆಯೇ ಬಲಭಾಗಕ್ಕೆ ತಿರುಗುತ್ತಾಳೆ. ಬಲಭಾಗಕ್ಕೆ ತಿರುಗುವ ರಭಸಕ್ಕೆ ನಿಂತಿದ್ದ ಹೆಂಗಸರ ಸೀರೆ ನೆರಿಗೆ ಹಿಂಬದಿಗೆ ಸರಿದು ಹೋಗುತ್ತದೆ. ಈ ಸೀರೆ ನೆರಿಗೆ ಜಾರಿ ಹೋಗದಂತೆ ಮಹಿಳೆಯರು ಬಲಭಾಗಕ್ಕೆ ಕಟ್ಟಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಅಗಸ್ತ್ಯ ಮುನಿಯು ಕಾವೇರಿಯನ್ನು ಹಿಂಬಾಲಿಸಿ ಬಂದು ಮುಂದಕ್ಕೆ ಹೋಗದೆ ತನ್ನ ಜೊತೆ ಹಿಂದಿರುಗಿ ಬರಲು ಕೇಳಿಕೊಳ್ಳುತ್ತಾನೆ. ಆದರೆ, ಕಾವೇರಿಯು ಲೋಕಕಲ್ಯಾಣಕ್ಕಾಗಿ ಮುಂದೆ ಹೋಗುತ್ತೇನೆಂದು ಹೇಳುತ್ತಾಳೆ. ಅದಕ್ಕಾಗಿ ಅಲ್ಲಿ ನೆರೆದವರು ಕಾವೇರಿಯ ಪರ ವಹಿಸಿದ ಕಾರಣ ಕೋಪಗೊಂಡ ಅಗಸ್ತ್ಯಮುನಿಯು ನೆರೆದವರಿಗೆ ಶಾಪ ಕೊಡುತ್ತಾನೆ. ಆಗ ಕಾವೇರಿಯು ನೆರೆದ ಜನರಿಗೆ ಅಭಯ ನೀಡಿ ತನ್ನ ಪತಿ ಕೊಟ್ಟ ಶಾಪಕ್ಕೆ ಪರಿಹಾರವನ್ನು ಸೂಚಿಸುತ್ತಾಳೆ. ‘‘ವರ್ಷಕ್ಕೊಂದು ಸಲ ತುಲಾಸಂಕ್ರಮಣ ದಿವಸ ತಲಕಾವೇರಿಯ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ನಿಮಗೆ ದರ್ಶನವನ್ನು ನೀಡುತ್ತೇನೆ, ಮರುದಿನ ಬಲಮುರಿಯ ಈ ಕ್ಷೇತ್ರದಲ್ಲಿ ತೀರ್ಥಸ್ನಾನ ಮಾಡಿದರೆ ನೀವು ಮಾಡಿದ ಪಾಪ ಕರ್ಮವನ್ನು ಪರಿಹಾರ ಮಾಡುತ್ತೇನೆ. ಕಾವೇರಿಗೆ ಬರಲು ಸಾಧ್ಯವಿಲ್ಲದವರು ಇಲ್ಲಿಗೆ ಬಂದು ತೀರ್ಥಸ್ನಾನ ಮಾಡಿ ಹಿರಿಯರಿಗೆ ಪಿಂಡಾದಿಗಳನ್ನು ಅರ್ಪಿಸಿದರೆ ತಲಕಾವೇರಿಗೆ ಬಂದಷ್ಟೆ ಪುಣ್ಯ ಇಲ್ಲಿ ಸಿಗುತ್ತದೆ. ಮಹಿಳೆಯರು ಇನ್ನು ಮುಂದೆ ಇದೇ ರೀತಿ ಸೀರೆ ನೆರಿಗೆಯನ್ನು ಬಲಭಾಗಕ್ಕೆ ಕಟ್ಟಿಕೊಳ್ಳಿ, ನೀವು ಇನ್ನು ಮುಂದೆ ಕೊಡವತಿಯರೆಂದು, ಗಂಡಸರು ಕೊಡವರೆಂದು ಕರೆಸಿಕೊಂಡು ಇಲ್ಲಿ ಸುಖವಾಗಿ ಬಾಳಿರೆಂದು ತಿಳಿಸುತ್ತಾಳೆ. ಅಗಸ್ತ್ಯ ನಿಮಗೆ ಶಾಪ ನೀಡಿದರೂ ಅವರು ನನ್ನ ಪತಿಯಾದುದರಿಂದ ಕೊಡವರು ಅಗಸ್ತ್ಯನನ್ನು ಗುರುವಿನ ಸ್ಥಾನದಲ್ಲಿ ಪೂಜಿಸಬೇಕು’’ ಎಂದು ತಿಳಿಸುತ್ತಾಳೆ. ಕಾವೇರಿಯನ್ನು ಎದುರುಗೊಳ್ಳಲು ರಾಜವಂಶದವರು ಕುಳಿತಿದ್ದ ಜಾಗದಲ್ಲಿ ಗ್ರಾಮಸ್ಥರು ಹುತ್ತರಿ ಕೋಲಾಟವನ್ನು ಆಡುತ್ತಾರೆ. ಕಾವೇರಿ ಬರುವ ಶಬ್ದ ಕೇಳಿ ಎಲ್ಲರೂ ಅಲ್ಲಿಗೆ ಓಡಿ ಹೋದ ಕಾರಣ ಅದನ್ನು ಈಗಲೂ ಬಟಂಬಲ ಎಂದು ಕರೆಯುತ್ತಾರೆ.

ಇನ್ನು ಕಾವೇರಿಯು ಬಂದ ರಭಸಕ್ಕೆ ಬಲಭಾಗಕ್ಕೆ ಸುತ್ತಿ ಮುಂದಕ್ಕೆ ಹೋದ ಕಾರಣಕ್ಕೆ ಬಲಮುರಿಯೆಂದು ಮತ್ತು ಹೆಂಗಸರ ಸೀರೆ ನೆರಿಗೆ ಬಲಭಾಗಕ್ಕೆ ತಿರುಗಿದ ಕಾರಣಕ್ಕೂ ಬಲಮುರಿಯೆಂದು ಹೆಸರಾಯಿತು ಎಂದು ಹೇಳುತ್ತಾರೆ. ಬಲಭಾಗಕ್ಕೆ ಒಂದು ಸುತ್ತು ಸುತ್ತಿದ ಕಾರಣ ಇಲ್ಲಿ ಒಂದು ಸುಳಿಗುಂಡಿ ನಿರ್ಮಾಣವಾಯಿತು. ಅಂದಾಜು 30-40 ವರ್ಷದ ಈಚೆಗೆ ಅದರ ಸುಳಿ ಕಡಿಮೆಯಾಗಿದೆ. ಅಷ್ಟರವರೆಗೆ ಅದರ ಹತ್ತಿರ ಹೋಗಲೂ ಸಾಧ್ಯವಿರಲಿಲ್ಲ. ಈಗಲೂ ಕಾಗದವನ್ನು, ದೀಪವನ್ನು ಹೊಳೆಯ ಬದಿಯಲ್ಲಿ ಇಟ್ಟರೆ ಅದು ಕೆಳಗೆ ಹೋಗುವುದಿಲ್ಲ, ಬದಲಾಗಿ ಹೊಳೆಯ ಮೇಲ್‍ಭಾಗಕ್ಕೆ ಹೋಗುತ್ತದೆ. ಮಳೆಗಾಲದಲ್ಲಿ ನೆರೆಬಂದಾಗ ನೀರು ಸುತ್ತುವುದು ಕಾಣುತ್ತದೆ.

ಕಾವೇರಿಗೂ ಅಗಸ್ತ್ಯ ಮುನಿಗೂ ಇಲ್ಲಿ ಚರ್ಚೆ ನಡೆದ ಕಾರಣ ಅಗಸ್ತ್ಯ ಮುನಿಯು ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿ ಯಾರು ಶುದ್ಧ ಮನಸ್ಸಿನಿಂದ ಕಾವೇರಿಯಲ್ಲಿ ತೀರ್ಥ ಸ್ನಾನಮಾಡಿ ಶಿವನನ್ನು ಪ್ರಾರ್ಥಿಸುತ್ತಾರೋ ಅವರ ಇಷ್ಟಾರ್ಥಗಳು ನೆರವೇರುತ್ತದೆ. ಇದು ಅನುಗ್ರಹ ಕ್ಷೇತ್ರವೆಂದು ಪ್ರಸಿದ್ಧಿಯಾಗಲಿ ಎಂದು ಆಶೀರ್ವದಿಸುತ್ತಾನೆ. ಇಲ್ಲಿಯ ಶಿವಲಿಂಗದ ಪಾಣಿಪೀಠ ಸುಮಾರು 3 ಅಡಿ ಉದ್ದ, ಮೂರು ಅಡಿ ಅಗಲ ಇರಬಹುದು. ಅದಕ್ಕೆ ಸರಿಯಾದ ದೊಡ್ಡ ಲಿಂಗವೂ ಇದೆ. ಕೊಡಗಿನಲ್ಲಿ ಇದು ದೊಡ್ಡ ಶಿವಲಿಂಗವಾಗಿರುತ್ತದೆ.

ಅಗಸ್ತ್ಯೇಸ್ವರ ದೇವಸ್ಥಾನದಿಂದ ಒಂದು ಕಿಲೋಮೀಟರ್ ದೂರದಲ್ಲಿ ಹೊಳೆಯ ಬದಿಯಲ್ಲಿ ಉಪ್ಪುಗುಂಡಿಯೆಂಬ ಕ್ಷೇತ್ರವಿದ್ದು ಅಲ್ಲಿ ಲವಣೇಶ್ವರವೆಂಬ ದೇವಸ್ಥಾನವಿತ್ತು. ಅಲ್ಲಿ ಈಶ್ವರನಿಗೆ ಅಭಿಷೇಕ ಮಾಡಲು ನೀರಿನ ಬಾವಿ ಇತ್ತಂತೆ ಆ ಬಾವಿಯಲ್ಲಿ ಇರುವ ನೀರು ಉಪ್ಪು ನೀರಿನಂತೆ ಇತ್ತಂತೆ, ಹಾಗಾಗಿ ಆ ದೇವರಿಗೆ ಲವಣೇಶ್ವರ ಎಂಬ ಹೆಸರು ಇತ್ತು ಎನ್ನುತ್ತಾರೆ. ಈಗಲೂ ಹೊಳೆಯ ಆ ಜಾಗವನ್ನು ಉಪ್ಪುಗುಂಡಿಯೆಂದು ಕರೆಯುತ್ತಾರೆ. ಅಲ್ಲಿ ದೇವರ ಗುಡಿ, ತೀರ್ಥ ಮಂಟಪ ಗುಡಿಯೊಳಗೆ ಸುಂದರವಾದ ಶಿವಲಿಂಗವಿತ್ತು. ಈ ದೇವಸ್ಥಾನವನ್ನು ಟಿಪ್ಪುಸುಲ್ತಾನ್ ಕೊಡಗಿಗೆ ದಂಡೆತ್ತಿ ಬಂದಾಗ ಹಾಳುಗೆಡಹಿದ್ದಾನೆ ಎಂದು ಪ್ರತೀತಿಯಿದೆ. ಕಳೆದ ವರ್ಷದ ವರೆಗೂ ಗರ್ಭಗುಡಿ ಹಾಗೂ ಅದರೊಳಗೆ ಶಿವಲಿಂಗವಿತ್ತು. ಕಳೆದ ವರ್ಷ ದುಷ್ಕರ್ಮಿಗಳು ಗುಡಿಯನ್ನು ಒಡೆದು ಶಿವಲಿಂಗ ವನ್ನು ತೆಗೆದು ಭಿನ್ನ ಮಾಡಿರುತ್ತಾರೆ. ಅಗಸ್ತ್ಯ ದೇವಸ್ಥಾನದ ಹಿಂಭಾಗದಲ್ಲಿ ಎತ್ತರವಾದ ಜಾಗದಲ್ಲಿ ಮಹಾವಿಷ್ಣುವಿನ ಗುಡಿ ಹಾಗೂ ಗುಡಿಯೊಳಗಡೆ ಸುಂದರವಾದ ಮಹಾವಿಷ್ಣುವಿನ ವಿಗ್ರಹವಿದೆ. ಇದನ್ನು ಸಹ ಟಿಪ್ಪು ಹಾಳುಗೆಡವಿದ್ದನೆಂದು ಪ್ರತೀತಿಯಿದೆ. ಕಳೆದ ವರ್ಷದಿಂದ ಊರಿನ ಭಕ್ತರೆಲ್ಲ ಸೇರಿ ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ ಹೊಸ ಗುಡಿ ಹಾಗೂ ತೀರ್ಥಮಂಟಪವನ್ನು ನಿರ್ಮಿಸಿರುತ್ತಾರೆ.

ಬಲಮುರಿ ಗ್ರಾಮವು ಪುಣ್ಯಭೂಮಿಯಾಗಿರುತ್ತದೆ. ಇದನ್ನು ಭಾಗ್ಯ ಕಂಡ ಬಲಮುರಿಯೆಂದು ಕರೆಯುತ್ತಾರೆ. ಹೊಳೆಯ ಬಲಬದಿಯಲ್ಲಿ ಅಗಸ್ತ್ಯೇಶ್ವರನನ್ನು, ಇನ್ನೊಂದು ಬದಿಯಲ್ಲಿ ಕಣ್ವ ಮುನೀಶ್ವರನನ್ನು, ಮೇಲ್‍ಭಾಗದಲ್ಲಿ ಮಹಾವಿಷ್ಣು, ಮುಂದುಗಡೆ ಲವಣೇಶ್ವರನನ್ನು ಪ್ರತಿಷ್ಠಾಪಿಸಿದ ಪುಣ್ಯಭೂಮಿಯಿದು. ಆದ ಕಾರಣ ಕಾವೇರಿಯು ರಾಜನ ಕನಸಿನಲ್ಲಿ ಬಲಮುರಿಗೆ ಬರಲು ಸೂಚಿಸುತ್ತಾಳೆ.

ಒಂದು ಜನಾಂಗ (ಕೊಡವ) ಉದಯವಾದಂತ ಸ್ಥಳವೂ ಇದೇ ಆಗಿದೆ. ಅಲ್ಲದೆ, ಕೊಡವ ಸಂಸ್ಕøತಿ ಹುಟ್ಟಿದ ಪ್ರತಿಷ್ಠಿತ ಕೇಂದ್ರವೂ ಇದೇ ಆಗಿದೆ. ಕಾವೇರಿ ಮಾತೆ ಹೇಳಿದ ಹಾಗೆ ತುಲಾ ಸಂಕ್ರಮಣದ ಮರು ದಿವಸ ಬಲಮುರಿಯಲ್ಲಿ ಈಗಲೂ ಜಾತ್ರೆ ನಡೆಯುತ್ತದೆ. ಅಕ್ಕಪಕ್ಕದ ಊರುಗಳಿಂದ ಸುಮಾರು ನಾಲ್ಕು-ಐದು ಸಾವಿರ ಜನರು ಬಂದು ಕಾವೇರಿ ನದಿಯಲ್ಲಿ ತೀರ್ಥ ಸ್ನಾನ ಮಾಡಿ ಅಗಸ್ತ್ಯೇಶ್ವರನ ದರ್ಶನ ಪಡೆದು ಪುನೀತರಾಗುತ್ತಾರೆ. ಭಾಗಮಂಡಲದಲ್ಲಿ ಭಗಂಡೇಶ್ವರ ದೇವಸ್ಥಾನದಲ್ಲಿ ಮಹಾವಿಷ್ಣು ಗುಡಿಯಿದೆ. ಅದೇ ರೀತಿ ಬಲಮುರಿ ಹಾಗೂ ಗುಹ್ಯದಲ್ಲಿಯೂ ಅಗಸ್ತ್ಯೇಶ್ವರ ಹಾಗೂ ಮಹಾವಿಷ್ಣುವಿನ ಗುಡಿಯಿದೆ. ಈ ಮೂರೂ ಪ್ರದೇಶ ಗಳು ಕಾವೇರಿಗೆ ಸಂಬಂಧಪಟ್ಟ ಪುಣ್ಯ ಕ್ಷೇತ್ರಗಳಾಗಿವೆ.

-ಕೊಂಗಿರಂಡ ಸಾದು ತಮ್ಮಯ್ಯ, ಬಲಮುರಿ

ಮೋ: 7022884578