ಮಡಿಕೇರಿ, ಅ.24: ಸಂಗೀತ ಸಾಮ್ರಾಜ್ಯದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ಮೆರೆದ ಎಸ್.ಪಿ. ಬಾಲಸುಬ್ರಮಣ್ಯಂ ಅವರೋರ್ವ ಪರಿಪೂರ್ಣ ವ್ಯಕ್ತಿತ್ತದ ಶ್ರೇಷ್ಟ ಕಲಾವಿದ ಎಂದು ಹಿರಿಯ ಪತ್ರಕರ್ತ ಜಿ.ಚಿದ್ವಿಲಾಸ್ ಹೇಳಿದರು.ಮಡಿಕೇರಿಯ ಡಾ.ಬಿ.ಆರ್. ಅಂಬೇಡ್ಕರ್ ಸಭಾ ಭವನದಲ್ಲಿ ಕೂರ್ಗ್ ಸನ್‍ರೈಸ್ ಮೆಲೋಡೀಸ್ ವತಿಯಿಂದ ಆಯೋಜಿತ ಪದ್ಮಶ್ರೀ ಎಸ್.ಪಿ.ಬಿ. ಗೀತ ನಮನ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಚಿದ್ವಿಲಾಸ್, ದೇಶದ ಅನೇಕ ಖ್ಯಾತ ದಿಗ್ಗಜ ಸಂಗೀತಕಲಾವಿದರ ಸಾಲಿಗೆ ಸೇರ್ಪಡೆಯಾಗುವ ಅರ್ಹತೆ ಹೊಂದಿದ್ದ ಬಾಲಸುಬ್ರಮಣ್ಯಂ ಸಹೃದಯಿ, ಸಜ್ಜನ ಮತ್ತು ಸಾತ್ವಿಕತೆಯ ಪ್ರತೀಕವಾಗಿ ಸಂಗೀತ ಲೋಕದಲ್ಲಿ ವಿಜ್ರಂಭಿಸಿದರು ಎಂದರು. ಸಂಗೀತಗಾರನ ಜೀವಕ್ಕೆ ಸಾವಿರುತ್ತದೆಯೇ ವಿನಾ ಸಂಗೀತಗಾರನ ಹಾಡುಗಳಿಗೆ ಸಾವಿಲ್ಲ ಎಂದು ಚಿದ್ವಿಲಾಸ್ ಸ್ಮರಿಸಿದರು. ಮೈಸೂರಿನ ಸಾಹಿತ್ಯಕಾರ ಆರ್.ರವಿಕುಮಾರ್ ಮಾತನಾಡಿ, ಯಾವ ಕಲಾವಿದನಿಗೂ ಭಾರತೀಯರು ಎಸ್.ಪಿ.ಬಿ. ಗೆ ತೋರಿದಷ್ಟು ಪ್ರೀತಿ ತೋರಿರಲಿಲ್ಲ ಎಂದು ಶ್ಲಾಘಿಸಿದರು. ಅನೇಕ ವಿಚಾರಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದ ಎಸ್.ಪಿ.ಬಿ., ಕಿರಿಯರನ್ನೂ ತಿದ್ದಿತೀಡಿ ಬೆಳೆಸುತ್ತಿದ್ದರು ಎಂದರು.

ಮೈಸೂರಿನ ಸಂಗೀತ ನಿರ್ದೇಶಕ ಮಹೇಶ್ ಕೋಟೆ ಮಾತನಾಡಿ, ಸಂಗೀತಗಾರನಿಗೆ ಎಸ್.ಪಿ.ಬಿ. ಅವರು ಚೈತನ್ಯದಾಯಿಯಂತೆ ಇದ್ದರು ಎಂದು ಸ್ಮರಿಸಿದರು.

ಪತ್ರಕರ್ತ ಅನಿಲ್ ಎಚ್.ಟಿ. ಮಾತನಾಡಿ, ಸಾಮಾನ್ಯವಾಗಿ ಯಾರಾದರೂ ನಿಧನರಾದಾಗ ಇವರ ಸಾವು ತುಂಬಲಾರದ ನಷ್ಟ ಎಂದು ಬರೆಯುತ್ತೇವೆ. ಆದರೆ ಎಸ್.ಪಿ.ಬಿ. ಸಾವು ನಿಜಕ್ಕೂ ದೇಶದ ಕಲಾರಂಗಕ್ಕೇ ದೊಡ್ಡ ನಷ್ಟ ಎಂದರಲ್ಲದೆ, ಗಾಯಕನಾಗಿ, ಕಲಾವಿದನಾಗಿ, ನಿರ್ಮಾಪಕನಾಗಿ, ಮಿಮಿಕ್ರಿ ಕಲಾವಿದನಾಗಿಯೂ ಎಸ್.ಪಿ.ಬಿ. ಯದ್ದು ಬಹುಮುಖ ವ್ಯಕ್ತಿತ್ವ ಎಂದು ಸ್ಮರಿಸಿಕೊಂಡರು.

ಭಾರತೀಯ ವಿದ್ಯಾಭವನದ ಕೊಡಗು ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ಮಾತನಾಡಿ, ತೆಲುಗು ಮಾತೃಭಾಷೆಯಾಗಿದ್ದರೂ ಕನ್ನಡದ ಅಭಿಮಾನದಿಂದ ಮುಂದಿನ ಜನ್ಮದಲ್ಲಿ ಕನ್ನಡನಾಡಿನಲ್ಲಿಯೇ ಹುಟ್ಟುವೆ ಎಂಬ ಹೇಳಿಕೆಗೆ ತೆಲುಗು ಭಾಷಿಕರು ಯಾವುದೇ ಟೀಕೆ ಮಾಡಲಿಲ್ಲ.

(ಮೊದಲ ಪುಟದಿಂದ) ಇದು ಭಾಷಾ ಸೌಹಾರ್ದತೆಗೆ ನಿದರ್ಶನವಾಗಿದ್ದು. ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ದೋಷಾರೋಪಣೆ ಮಾಡುವವರಿಗೆ ಇದು ಮಾದರಿಯಾಗಬೇಕೆಂದು ಹೇಳಿದರು.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಆಡಳಿತಾಧಿಕಾರಿ ವಿದ್ಯಾಹರೀಶ್ ಮಾತನಾಡಿ, ಎಸ್.ಪಿ.ಬಿ.ಹಾಡು ಕೇಳುತ್ತಿದ್ದರೆ ಅವರು ಹಾಡುತ್ತಿದ್ದ ನಟರ ಸ್ಮರಣೆ ಮನಸ್ಸಿನ ಪಟದಲ್ಲಿ ಮೂಡಿಬರುವಂತಿರುತ್ತಿತ್ತು. ಅಂಥ ಸಾಧಕ ಗಾಯಕ ಅವರಾಗಿದ್ದರು ಎಂದು ಹೇಳಿದರು. ಃಗಿಃಏಗಿ ಪ್ರಾಂಶುಪಾಲೆ ಕೆ.ಎಸ್.ಸುಮಿತ್ರಾ ಮಾತನಾಡಿ, ಈ ಕಾರ್ಯಕ್ರಮದ ಮೂಲಕ ಜಿಲ್ಲೆಯ ಕಲಾವಿದರಿಗೆ ವೇದಿಕೆ ನೀಡಿದ್ದು ಶ್ಲಾಘನೀಯ ಎಂದರು.

ಃಗಿಃಏಗಿ ಉಪಪ್ರಾಂಶುಪಾಲೆ ಕೆ. ವನಿತಾ ಚಂಗಪ್ಪ ಮಾತನಾಡಿ, ಎಸ್.ಪಿ.ಬಿ. ಅವರಲ್ಲಿದ್ದ ಸರಳ ಸಜ್ಜನಿಕೆಯ ಗುಣ ಎಲ್ಲರಿಗೂ ಸದಾ ಮಾದರಿಯಾಗಿದೆ ಎಂದು ಸ್ಮರಿಸಿಕೊಂಡರು.

ನಗರಸಭೆಯ ಮಾಜಿ ಸದಸ್ಯೆ ವೀಣಾಕ್ಷಿ ಮಾತನಾಡಿ ಮಡಿಕೇರಿಯಲ್ಲಿ ನಾಡಹಬ್ಬ ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳ ರಂಗು ತುಂಬಿಕೊಳ್ಳಬೇಕಾಗಿದ್ದ ಈ ದಿನಗಳಲ್ಲಿ ಕೊರೊನಾದಿಂದಾಗಿ ಎಲ್ಲಾ ಸಂಭ್ರಮವೂ ಮಂಕಾಗಿದೆ. ಇಂಥ ದಿನದಲ್ಲಿ ದಸರಾ ಸಾಂಸ್ಕøತಿಕ ಕಾರ್ಯಕ್ರಮ ನೆನಪಿಸುವಂತೆ ಗೀತ ನಮನ ಆಯೋಜಿಸಿದ್ದು ಶ್ಲಾಘನೀಯ ಎಂದು ಪ್ರಶಂಶಿಸಿದರು.

ಮುತ್ತಿನ ಹಾರ ವಾದ್ಯಗೋಷ್ಠ್ಠಿ ಕಲಾವಿದರ ಸಂಘದ ಅಧ್ಯಕ್ಷ ಆನಂದ, ಖಚಾಂಚಿ ರವಿ ಆರ್. ಶಾಸ್ತ್ರೀ SPಃ ಯನ್ನು ಸ್ಮರಿಸಿದರು.

ಕಾರ್ಯಕ್ರಮದ ಆಯೋಜಕ ಕೂರ್ಗ್ ಸನ್ ರೈಸ್ ಮೆಲೋಡಿಸ್‍ನ ಸಂಚಾಲಕ ಪಿ.ರವಿ ಮುಂದಿನ ದಿನಗಳಲ್ಲಿಯೂ ಕೊಡಗು ಜಿಲ್ಲೆಯ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ಆಯೋಜಿಸುವುದಾಗಿ ಹೇಳಿದರು.

ಕಲಾವಿದೆ ಚಿತ್ರಾನಂಜಪ್ಪ ಪ್ರಾರ್ಥಿಸಿ, ಕಾವೇರಿ ಪಿ.ಎ.ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಶ್ರೀನಿವಾಸ್ ವಂದಿಸಿದರು. ಜಿಲ್ಲೆಯ ಹಲವೆಡೆಗಳಿಂದ ಬಂದಿದ್ದ 30ಕ್ಕೂ ಅಧಿಕ ಕಲಾವಿದರು ಎಸ್.ಪಿ. ಬಾಲಸುಬ್ರಮಣ್ಯಂ ಅವರ ಹಾಡುಗಳನ್ನು ಹಾಡುವ ಮೂಲಕ ಅಗಲಿದ ಶ್ರೇಷ್ಠ ಗಾಯಕನಿಗೆ ಗೀತ ನಮನ ಸಲ್ಲಿಸಿದರು.