6 ದಿನಗಳಿಂದ ಸೋಂಕಿತರು ಕಡಿಮೆ

ನವದೆಹಲಿ, ಅ. 24: ಭಾರತದಲ್ಲಿ ಕೊರೊನಾ ಪ್ರಕರಣಗಳ ಇಳಿಕೆಯ ಹಾದಿ ಎಂದಿನಂತೆ ಶನಿವಾರ ಕೂಡ ಮುಂದುವರೆದಿದ್ದು, ಸತತ 6 ದಿನಗಳಿಂದ 60 ಸಾವಿರಕ್ಕಿಂತಲೂ ಕಡಿಮೆ ಕೊರೊನಾ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 53,370 ಕೇಸ್ ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 78,14,682ಕ್ಕೆ ಏರಿಕೆಯಾಗಿದೆ. ಇನ್ನು ಒಂದೇ ದಿನ 650 ಮಂದಿ ಬಲಿಯಾಗಿದ್ದು, ಮೃತರ ಸಂಖ್ಯೆ 1,17,956ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಮಹತ್ವದ ಸಭೆ ನಡೆಸಿದ ಸಿಎಂ

ಬೆಂಗಳೂರು, ಅ. 24: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶನಿವಾರ ಮಹತ್ವದ ಸಭೆ ನಡೆಸಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಬಿಬಿಎಂಪಿ ಉನ್ನತಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಅಲ್ಲದೇ ಮಳೆಯಿಂದ ತೀವ್ರ ಬಾಧಿತವಾಗಿರುವ ಹೊಸಕೆರೆಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಸಿಎಂ ಯಡಿಯೂರಪ್ಪ ಅವರು, ಕಂದಾಯ ಸಚಿವ ಆರ್. ಅಶೋಕ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತಿತರರ ಜತೆ ಭೇಟಿ ನೀಡಿ, ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮಳೆಯಿಂದ ಹಾನಿಗೊಳಗಾದ ಪ್ರತೀ ಕುಟುಂಬಕ್ಕೆ ತಕ್ಷಣ ತಲಾ ರೂ. 25 ಸಾವಿರ ಚೆಕ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು. ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ಒಪ್ಪಿಕೊಂಡ ಸಿಎಂ, ಶೀಘ್ರದಲ್ಲೇ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವುದಾಗಿ ಭರವಸೆ ನೀಡಿದರು. ಸಮೀಕ್ಷೆ ನಡೆಸಿ ಪರಿಹಾರವನ್ನು ಹಸ್ತಾಂತರಿಸುವಾಗ ಅಧಿಕಾರಿಗಳು ಪ್ರಾಮಾಣಿಕವಾಗಿರಬೇಕು. ಯಾವುದೇ ಹಣದ ದುರುಪಯೋಗ ಇರಬಾರದು. ನನಗೆ ನೀಡಿದ ಮಾಹಿತಿಯ ಪ್ರಕಾರ, ಸುಮಾರು 650-800 ಮನೆಗಳಿಗೆ ಪ್ರವಾಹದ ನೀರು ಹರಿಯುತ್ತಿರುವುದನ್ನು ಕಂಡು ಬಂದಿದೆ ಎಂದು ಸಿಎಂ ಹೇಳಿದರು.

ಜಂಬೂ ಸವಾರಿ ಅಂತಿಮ ತಾಲೀಮು

ಮೈಸೂರು, ಅ. 24: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಧಾನ ಆಕರ್ಷಣೆಯಾದ ಜಂಬೂ ಸವಾರಿಗೆ ಸಾಂಸ್ಕೃತಿಕ ನಗರಿ ಸಜ್ಜಾಗಿದ್ದು, ಶನಿವಾರ ಅಂತಿಮ ಹಂತದ ತಾಲೀಮು ನಡೆಯಿತು. ದಸರಾ ಮಹೋತ್ಸವದ ಮುಖ್ಯ ಭಾಗವಾದ ಜಂಬೂ ಸವಾರಿ ಈ ಬಾರಿ ಅತ್ಯಂತ ಸರಳವಾಗಿ ನಡೆಯುತ್ತಿದ್ದು, ಅರಮನೆ ಆವರಣದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು ಅಂತಿಮ ಹಂತದ ತಾಲೀಮು ನಡೆಸಿದರು. ಅಂಬಾರಿ ಹೊರುವ ಅಭಿಮನ್ಯುವಿಗೆ ಸುಮಾರು 750 ಕೆ.ಜಿ. ತೂಕದ ಮರಳಿನ ಮೂಟೆ ಹೇರಿ ತಾಲೀಮು ನಡೆಸಲಾಯಿತು. ಈ ವೇಳೆ ಅಶ್ವದಳಗಳು ಅಭಿಮನ್ಯುವಿನ ಹಿಂದೆ ಹೆಜ್ಜೆ ಹಾಕಿದವು. ಸೋಮವಾರ ಅಭಿಮನ್ಯು 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊರಲಿದ್ದಾನೆ. ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಮಾತನಾಡಿ, ಕೋವಿಡ್ ಹಿನ್ನೆಲೆ ಸರಳ ದಸರಾ ಆಚರಿಸಲಾಗುತ್ತಿದ್ದು, ಮುಖ್ಯ ಕಾರ್ಯಕ್ರಮ ನಡೆಯಲಿದ್ದು, ಅಧರ್À ಗಂಟೆಯಲ್ಲಿ ಕಾರ್ಯಕ್ರಮ ಮುಕ್ತಾಯವಾಗಲಿದೆ. 300 ಮಂದಿ ಮಾತ್ರ ಕಾರ್ಯಕ್ರಮಕ್ಕೆ ನೇರ ಸಾಕ್ಷಿಯಾಗಲಿದ್ದಾರೆ. ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಜನ ಸಂದಣಿ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಕ್ರಮ ವೀಕ್ಷಣೆಗಾಗಿ ಎಲ್.ಇ.ಡಿ. ಟಿ.ವಿ. ಪರದೆಗಳನ್ನು ಅಳವಡಿಸಲಾಗಿದೆ. ದೂರದರ್ಶನ ಚಂದನಾಹಿನಿ ಮೂಲಕ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಪ್ರಮುಖ ಯೋಜನೆಗಳಿಗೆ ಪಿಎಂ ಚಾಲನೆ

ಅಹ್ಮದಾಬಾದ್, ಅ. 24: ತವರು ರಾಜ್ಯ ಗುಜರಾತ್‍ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಪ್ರಮುಖ ಯೋಜನೆಗಳನ್ನು ಉದ್ಘಾಟನೆ ಮಾಡಿದರು. ಗುಜರಾತ್‍ನ ರೈತರಿಗಾಗಿ ಕಿಸಾನ್ ಸೂರ್ಯೋದಯ ಯೋಜನೆ, ಯು.ಎನ್. ಮೆಹ್ತಾ ಹೃದ್ರೋಗ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಮಕ್ಕಳ ಹೃದಯ ಚಿಕಿತ್ಸಾ ಆಸ್ಪತ್ರೆ ಸೇರಿದಂತೆ ಮೂರು ಪ್ರಮುಖ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿದರು. ನೀರಾವರಿಗಾಗಿ ಹಗಲು ವೇಳೆ ವಿದ್ಯುತ್ ಸರಬರಾಜು ಮಾಡಲು ಮುಖ್ಯಮಂತ್ರಿ ವಿಜಯ್ ರೂಪಾನಿ ನೇತೃತ್ವದ ಗುಜರಾತ್ ಸರ್ಕಾರ ಇತ್ತೀಚೆಗೆ ಕಿಸಾನ್ ಸೂರ್ಯೋದಯ ಯೋಜನೆ ಘೋಷಿಸಿತ್ತು. ಈ ಯೋಜನೆಯಡಿ ರೈತರ ಜಮೀನುಗಳಿಗೆ ಬೆಳಿಗ್ಗೆ 5 ರಿಂದ ರಾತ್ರಿ 9 ರವರೆಗೆ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಯೋಜನೆಯ ಪ್ರಸರಣ ಮೂಲಸೌಕರ್ಯಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ರೂ. 3,523 ಕೋಟಿ ನಿಗದಿಪಡಿಸಿದೆ. ಈ ಮಹತ್ತರ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.