ಕುಶಾಲನಗರ, ಅ. 23: ಜಿಲ್ಲೆಗೆ ಆಗಮಿಸಿದ ಕಾವೇರಿ ನದಿ ಜಾಗೃತಿ ತೀರ್ಥಯಾತ್ರಾ ತಂಡದ ರಥದಲ್ಲಿ ಪವಿತ್ರ ಕಾವೇರಿ ಜಲವನ್ನು ಸಂಗ್ರಹಿಸಿ ಮಡಿಕೇರಿ ಮೂಲಕ ಕುಶಾಲನಗರಕ್ಕೆ ಸಾಗಿ ನಂತರ ಮೈಸೂರಿನತ್ತ ತೆರಳಿತು. ಅಖಿಲ ಭಾರತ ಸನ್ಯಾಸಿಗಳ ಸಂಘ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಅಶ್ರಯದಲ್ಲಿ ಹಮ್ಮಿಕೊಂಡಿರುವ 10ನೇ ವರ್ಷದ ಕಾವೇರಿ ನದಿ ಜಾಗೃತಿ ಯಾತ್ರೆಯ ರಥ ತಲಕಾವೇರಿ, ಭಾಗಮಂಡಲ, ಕುಶಾಲನಗರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಪಿರಿಯಾಪಟ್ಟಣ ಮೂಲಕ ಶ್ರೀರಂಗಪಟ್ಟಣಕ್ಕೆ ಸಾಗಿತು.

ಕುಶಾಲನಗರ ಕಾವೇರಿ ಆರತಿ ಕ್ಷೇತ್ರದಲ್ಲಿ ಜೀವನದಿಗೆ ವಿಶೇಷ ಆರತಿ ಬೆಳಗುವ ಕಾರ್ಯಕ್ರಮದಲ್ಲಿ ಸಾಧುಸಂತರು ಪಾಲ್ಗೊಂಡರು. ಇದೇ ಸಂದರ್ಭ ಜೀವನದಿ ಕಲುಷಿಕೆಯನ್ನು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ತಪ್ಪಿಸುವ ನಿಟ್ಟಿನಲ್ಲಿ ಜನರಿಗೆ ಅರಿವು, ಜಾಗೃತಿ ಮೂಡಿಸಲು ಹುಣ್ಣಿಮೆ ಸಂದರ್ಭ ಕುಶಾಲನಗರದಲ್ಲಿ 100ಕ್ಕೂ ಅಧಿಕ ತಿಂಗಳ ಕಾಲ ನದಿಗೆ ಮಹಾ ಆರತಿ ಬೆಳಗಿದ ಸಾಧನೆಗಾಗಿ ಅಖಿಲ ಭಾರತ ಸನ್ಯಾಸಿಗಳ ಸಂಘದ ವತಿಯಿಂದ ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ದಂಪತಿಗಳಿಗೆ ಕಾವೇರಿ ಪುರಸ್ಕಾರ್ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ, ಸನ್ಯಾಸಿಗಳ ಸಂಘದ ಪ್ರಮುಖರಾದ ಶ್ರೀ ರಮಾನಂದ ಸ್ವಾಮೀಜಿ, ಶ್ರೀ ಆತ್ಮಾನಂದ ಸ್ವಾಮೀಜಿ, ಶ್ರೀ ಅರುಳ್ ವೀರಮಣಿ, ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ಕುಡಾ ಅಧ್ಯಕ್ಷ ಎಂ.ಎಂ. ಚರಣ್, ಜಿ.ಪಂ. ಸದಸ್ಯೆ ಮಂಜುಳಾ, ಹಾಸನ ಜಿಲ್ಲೆ ನದಿ ಸ್ವಚ್ಛತಾ ಅಭಿಯಾನದ ಸಂಚಾಲಕ ಎಂ.ಎನ್. ಕುಮಾರಸ್ವಾಮಿ ಮತ್ತಿತರರು ಇದ್ದರು.