ಮಡಿಕೇರಿ, ಅ. 22: ಕೋವಿಡ್ ಮಾರ್ಗಸೂಚಿಯ ನೆಪವೊಡ್ಡಿ ನೂರಾರು ವರ್ಷಗಳ ಇತಿಹಾಸವಿರುವ ದಸರಾ ಮಹೋತ್ಸವಕ್ಕೆ ನಿರ್ಬಂಧ ಹೇರುವ ಮೂಲಕ ಜಿಲ್ಲಾಡಳಿತ ಮಡಿಕೇರಿ ನಗರದಲ್ಲಿ ಸೂತಕದ ಛಾಯೆಯನ್ನು ಮೂಡಿಸಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಟೀಕಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಮೈಸೂರು, ಮಂಗಳೂರು ಸೇರಿದಂತೆ ವಿವಿಧೆಡೆ ದಸರಾ ಸಂಭ್ರಮ ಮನೆ ಮಾಡಿದ್ದು, ವಿದ್ಯುತ್ ದೀಪಾಲಂಕಾರದಿಂದ ನಗರಗಳು, ಸರ್ಕಾರಿ ಕಟ್ಟಡಗಳು ಕಂಗೊಳಿಸುತ್ತಿವೆ. ಆದರೆ ಮಡಿಕೇರಿ ನಗರ ಮಾತ್ರ ಜಿಲ್ಲಾಡಳಿತದ ಅಸಹಕಾರ ಮತ್ತು ನಿರ್ಬಂಧಗಳಿಂದ ಕಳೆಗುಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದಸರಾ ಹಿಂದೂಗಳ ಹಬ್ಬವಾದರೂ ಎಲ್ಲಾ ಜಾತಿ, ಧರ್ಮದವರು ಸೇರಿ ಜನೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿತ್ತು. ಹಿಂದುತ್ವದ ಆಧಾರದಲ್ಲಿ ಮತ ಗಳಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಪಕ್ಷದ ಶಾಸಕರುಗಳೇ ಜಿಲ್ಲೆಯಲ್ಲಿದ್ದರೂ ದಸರಾ ಅವ್ಯವಸ್ಥೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಜವಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳಾಗಿ ಸಾಂಪ್ರದಾಯಿಕ ದಸರಾ ಆಚರಣೆಗೂ ಕ್ರಮ ಕೈಗೊಳ್ಳುತ್ತಿಲ್ಲ. ಎಲ್ಲಾ ನಿರ್ಧಾರಗಳನ್ನು ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡುತ್ತಿರುವ ಶಾಸಕರುಗಳು ಜನರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಗಣೇಶ್ ಆರೋಪಿಸಿದರು.

ಶಾಸಕರುಗಳ ನಿರ್ಲಕ್ಷ್ಯದ ಬಗ್ಗೆ ಹಿಂದೂ ಸಂಘಟನೆಗಳು ಪ್ರಶ್ನೆ ಮಾಡುವ ಕಾಲ ಕೂಡಿ ಬಂದಿದೆ ಎಂದು ತಿಳಿಸಿರುವ ಅವರು, ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿಯಂದು ನಡೆಯುವ ಸಂಪ್ರದಾಯಕ್ಕೆ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಅಡ್ಡಿ ಪಡಿಸಬಾರದೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಕಾರ್ಯದರ್ಶಿ ಸುಕೇಶ್ ಚಂಗಪ್ಪ, ಸಹ ಕಾರ್ಯದರ್ಶಿ ಬೊಳ್ಳಂಡ ಗಣೇಶ್, ಸಂಘಟನಾ ಕಾರ್ಯದರ್ಶಿ ಎಂ.ಎ. ಇಬ್ರಾಹಿಂ ಹಾಗೂ ಮಡಿಕೇರಿ ನಗರ ಯುವ ಜೆಡಿಎಸ್ ಅಧ್ಯಕ್ಷ ಮೋನಿಷ್ ಉಪಸ್ಥಿತರಿದ್ದರು.