ಗೋಣಿಕೊಪ್ಪಲು, ಅ. 22: ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಗೋಣಿಕೊಪ್ಪ ಪೊಲೀಸ್ ಠಾಣೆಗೆ ಭೇಟಿ ನೀಡುವ ಮೂಲಕ ಗೋಣಿಕೊಪ್ಪ ವೃತ್ತದ ಪೊಲೀಸ್ ಠಾಣೆಗಳಲ್ಲಿನÀ ಕಾನೂನು ಸುವ್ಯವಸ್ಥೆಗಳ ವಿವರ ಪಡೆದರು.ಈ ಸಂದರ್ಭ ‘ಶಕ್ತಿ’ ಪ್ರತಿನಿಧಿಯೊಂದಿಗೆ ಎಸ್ಪಿ ಕ್ಷಮಾಮಿಶ್ರಾ ತಮ್ಮ ಕೆಲವು ಅಭಿಪ್ರಾಯಗಳನ್ನು ಹಂಚಿಕೊಂಡರು.

ಗೋಣಿಕೊಪ್ಪಲುವಿನಲ್ಲಿರುವ ಪೊಲೀಸ್ ಸಿಬ್ಬಂದಿಗಳ ವಸತಿ ಗೃಹವು ದುಸ್ಥಿತಿಯಲ್ಲಿದ್ದು ಈ ಬಗ್ಗೆ ಸಿಬ್ಬಂದಿ ಗಳಿಗೆ ಅನುಕೂಲವಾಗುವ ರೀತಿಯಲ್ಲಿ ಹೊಸ ಕಟ್ಟಡ ನಿರ್ಮಾಣದ ಬಗ್ಗೆ ಗಮನ ಸೆಳೆದ ಸಂದರ್ಭ ಉತ್ತರಿಸಿದ ಅವರು ಹೊಸ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಸಂಬಂಧಪಟ್ಟ ಕಾಗದ ಪತ್ರಗಳು ಉನ್ನತ ಅಧಿಕಾರಿಗಳಿಗೆ ರವಾನಿಸಲಾಗಿದೆ. ಲಭ್ಯವಿರುವ ಜಾಗದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಅಗತ್ಯ ಕಟ್ಟಡಗಳ ನಿರ್ಮಾಣಕ್ಕೆ ಪ್ರ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಇಲಾಖೆಯಲ್ಲಿ ಉತ್ತಮ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಎಂದರು. ಸಾರ್ವಜನಿಕರೊಂದಿಗೆ ಪೊಲೀಸರು ಉತ್ತಮ ಬಾಂಧವ್ಯ ವೃದ್ಧಿಸಿಕೊಂಡಿರುವುದರಿಂದ ಇದು ಸಾಧ್ಯವಾಗಿದೆ. ಜಿಲ್ಲೆಯಲ್ಲಿ ಇಲಾಖೆಯ ಮೇಲೆ ನಾಗರಿಕರು ವಿಶ್ವಾಸವಿಟ್ಟಿದ್ದಾರೆ. ನಾಗರಿಕರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಅಧಿಕಾರಿಗಳು ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಿ ದ್ದಾರೆ. ಇದರಿಂದ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲು ತುಂಬಾ ಸಹಕಾರಿಯಾಗಿದೆ.

ಇಲಾಖೆಯ ಸಿಬ್ಬಂದಿಗಳು ದಿನದ 24 ಗಂಟೆಯಲ್ಲಿ ಲಭ್ಯವಿದ್ದು ಯಾರೇ ಕರೆ ಮಾಡಿದರೂ ಸ್ಪಂದನ ನೀಡಲಿ ದ್ದಾರೆ. ನಾಗರಿಕರು ಇಲಾಖೆಯ ಸಹಕಾರ ಪಡೆಯಬಹುದು; ತಿತಿಮತಿ ಹಾಗೂ ಬಾಳೆಲೆ ಉಪಠಾಣೆಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿವೆ. ಪೊಲೀಸ್ ಇಲಾಖೆಯ ಮೇಲೆ ಸಾರ್ವಜನಿಕರು ಇಟ್ಟಿರುವ ನಂಬಿಕೆಗೆ ಚ್ಯುತಿ ಬಾರದಂತೆ ಪೊಲೀಸರು ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಕೋವಿಡ್ - 19 ಇರುವುದರಿಂದ ಸಾರ್ವಜನಿಕ ವಾಗಿ ಪೊಲೀಸರು ಸಭೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಕೊರೊನಾ ತಹಬಂದಿಗೆ ಬಂದ ನಂತರ ಇಲಾಖೆಯು ಸಾರ್ವಜನಿಕರೊಂದಿಗೆ ಮುಕ್ತವಾಗಿ ಬೆರೆಯುವ ಪ್ರಯತ್ನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗು ವುದು. ಇದರಿಂದ ಸೌಹಾರ್ದತೆ ಕಾಪಾಡಲು ಅನುಕೂಲವಾಗಲಿದೆ.ಸಮಾಜದಲ್ಲಿ ಅಹಿತಕರ ಘಟನೆ ನಡೆಸುವವರನ್ನು ಎಂದಿಗೂ ಇಲಾಖೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ ಕ್ಷಮಾಮಿಶ್ರಾ ಅಕ್ರಮ ಚಟುವಟಿಕೆ ನಡೆಸುತ್ತಿರುವವರ ಮೇಲೆ ಇಲಾಖೆಯು ಸದಾ ನಿಗಾ ವಹಿಸುತ್ತಿದೆ ಎಂದರು.

ನಗರದಲ್ಲಿ ವಾರದ ಕೆಲವು ದಿನ ಟ್ರಾಫಿಕ್ ವ್ಯವಸ್ಥೆಯಲ್ಲಿನ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದ ಸಂದರ್ಭ ಇದಕ್ಕೆ ಉತ್ತರಿಸಿದ ಎಸ್ಪಿ ಲಭ್ಯವಿರುವ ಸಿಬ್ಬಂದಿಗಳ ಸಹಕಾರದಿಂದ ಟ್ರಾಫಿಕ್ ವ್ಯವಸ್ಥೆ ಸುಲಲಿತವಾಗಿ ನಡೆಯಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಕೂಡ ಇಲಾಖೆಯ ನಿಯಮಗಳನ್ನು ಪಾಲಿಸುವುದರೊಂದಿಗೆ ಸಹಕರಿಸು ವಂತೆ ಮನವಿ ಮಾಡಿದರು. ಠಾಣೆ ಯನ್ನು ಸ್ವಚ್ಛವಾಗಿ ಕಾಪಾಡಿಕೊಂಡಿ ರುವ ಬಗ್ಗೆ ಅಧಿಕಾರಿಗಳ, ಸಿಬ್ಬಂದಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಕೊರೊನಾ ಮಹಾಮಾರಿಯನ್ನು ದೂರ ಮಾಡಲು ಪ್ರತಿ ನಾಗರಿಕನು ಸರ್ಕಾರದ ನಿಯಾಮವಳಿಗಳನ್ನು ಚಾಚೂ ತಪ್ಪದೆ ಪಾಲಿಸಬೇಕು; ಗಾಂಜಾ ಪ್ರಕರಣವನ್ನು ಹತೋಟಿಗೆ ತರಲು ಡಿವೈಎಸ್ಪಿ ಮುಂದಾಳತ್ವದಲ್ಲಿ ವಿಶೇಷ ಆರು ತಂಡಗಳನ್ನು ರಚಿಸಲಾಗಿದೆ. ಈ ತಂಡವು ಪ್ರತಿ ಹಂತದಲ್ಲಿಯೂ ಗಾಂಜಾ ಮಾರಾಟ ಮಾಡುವವರ ಮೇಲೆ ನಿಗಾ ವಹಿಸಲಿದೆ ಇದರಿಂದ ಗಾಂಜಾ ಮಾರಾಟವನ್ನು ಹತೋಟಿಗೆ ತರಲು ಪೊಲೀಸರು ಯಶಸ್ವಿಯಾಗಿದ್ದಾರೆ. ಸಾರ್ವಜನಿಕರು ಈ ನಿಟ್ಟಿನಲ್ಲಿ ಪೊಲೀಸರೊಂದಿಗೆ ಸಹಕಾರ ನೀಡಬೇಕೆಂದರು. ಎಸ್ಪಿ ಭೇಟಿಯ ಸಂದರ್ಭ ಡಿವೈಎಸ್ಪಿ ಜಯಕುಮಾರ್, ವೃತ್ತ ನಿರೀಕ್ಷಕ ರಾಮರೆಡ್ಡಿ, ಠಾಣಾಧಿಕಾರಿ ಸುರೇಶ್ ಬೋಪಣ್ಣ, ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.

-ಹೆಚ್.ಕೆ.ಜಗದೀಶ್