ಕೂಡಿಗೆ, ಅ. 21: ಕೂಡುಮಂಗ ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘವು ಈ ಸಾಲಿನಲ್ಲಿ ರೂ. 3.25 ಲಕ್ಷ ಲಾಭಗಳಿಸಿ ಸಂಘದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಚಿಂತನೆ ನಡೆಸಿದೆ.

ಚಿಕ್ಕತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿದ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಮಾತನಾಡಿ, ಒಕ್ಕೂಟದ ವತಿಯಿಂದ ಹೈನುಗಾರಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸಲಾಗು ತ್ತಿದೆ. ಅಲ್ಲದೆ ಪಶು ಆಹಾರದ ವ್ಯವಸ್ಥೆಯನ್ನು ಸುಗಮಗೊಳಿಸಲಾಗಿದೆ. ರೈತರು ಗುಣಮಟ್ಟದ ಹಾಲನ್ನು ಸಂಘಕ್ಕೆ ಹಾಕುವುದರ ಮೂಲಕ ಸಂಘದ ಪ್ರಗತಿಗೆ ಸಹಕಾರಿಗಳಾಗ ಬೇಕು ಎಂದರು.

ಹಾಸನ ಹಾಲು ಒಕ್ಕೂಟದ ವಿಸ್ತಾರಣಾಧಿಕಾರಿ ವೀಣಾ ಹಸುಗಳ ಸಾಗಾಣಿಕೆಯಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅನುಸರಿಸಿ ಹಾಲಿನ ಉತ್ಪಾದನೆ ಮತ್ತು ಗುಣಮಟ್ಟವನ್ನು ವೃದ್ಧಿಸಿಕೊಳ್ಳಲು ಸಲಹೆಯಿತ್ತರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಯೋಗೇಂದ್ರನ್ ವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘದ ಲಾಭಾಂಶವನ್ನು ನೋಡಿಕೊಂಡು ಈಗಿರುವ ಕಟ್ಟಡದ ಮೇಲ್ಭಾಗದಲ್ಲಿ ಸಭಾಂಗಣ ನಿರ್ಮಾಣ ಮಾಡುವ ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಮುರುಗೇಶ್ ಸೇರಿದಂತೆ ಸಂಘದ ನಿರ್ದೇಶಕರು ಮತ್ತು ಸದಸ್ಯರು ಹಾಜರಿದ್ದರು.