ಕಣಿವೆ, ಅ. 21 : ಪ್ರತಿಯೊಬ್ಬರು ಸ್ವಚ್ಛವಾದ, ಸುರಕ್ಷಿತವಾದ ಮತ್ತು ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಮಾಡುವ ಮೂಲಕ ಆರೋಗ್ಯಕರ ಜೀವನವನ್ನು ರೂಪಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಅತೀ ಅಗತ್ಯ ಎಂದು ಕರ್ನಾಟಕ ರಾಜ್ಯ ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರದ ನಿರ್ದೇಶಕರೂ ಆದ ರಾಜ್ಯ ಔಷಧಿ ಸರಬರಾಜು ಮಹಾ ಮಂಡಳಿಯ ಆಯುಕ್ತೆ ಮಂಜುಶ್ರೀ ಕರೆ ಕೊಟ್ಟರು.
ಬುಧವಾರ ಕೊಡಗು ಜಿಲ್ಲೆಗೆ ಆಗಮಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಸೇವಿಸುವ ಯಾವುದೇ ಆಹಾರ ಕಚ್ಚಾ ಆಹಾರವಿರಲಿ, ಬೇಯಿಸಿದ ಆಹಾರವಿರಲಿ ಗುಣಮಟ್ಟದಿಂದ ಕೂಡಿರಬೇಕು. ಆಹಾರವನ್ನು ಉತ್ಪಾದಿಸುವ ಆಹಾರ ತಯಾರಿಕಾ ಘಟಕಗಳು ರಾಜ್ಯ ಆಹಾರ ಗುಣಮಟ್ಟ ಪ್ರಾಧಿಕಾರದಿಂದ ಪರವಾನಗಿ ಪಡೆದಿರಬೇಕು. ಮತ್ತು ಆಹಾರ ಕಾಯಿದೆಯಲ್ಲಿ ಅಳವಡಿಸಲಾಗಿರುವ ಗುಣವಿಶೇಷತೆ ಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದರು.
ಬೀದಿಬದಿ ವ್ಯಾಪಾರಿಗಳು, ಹೋಟೆಲ್ ಉದ್ಯಮಿಗಳಲ್ಲಿ ಗುಣಮಟ್ಟದ ಆಹಾರದ ಕುರಿತು ಪ್ರಮುಖವಾಗಿ ಮಾಹಿತಿ ಇರಬೇಕು. ಈ ನಿಟ್ಟಿನಲ್ಲಿ ರಾಜ್ಯವ್ಯಾಪಿ ಪ್ರವಾಸ ಮಾಡಿ ಜಿಲ್ಲಾಡಳಿತಗಳ ಮೂಲಕ ಜಾಗೃತಿ ಹಾಗೂ ಅರಿವು ಮೂಡಿಸುವ ಕೆಲಸವನ್ನು ಪ್ರಾಧಿಕಾರ ಮಾಡುತ್ತಿದೆ ಎಂದು ಮಂಜುಶ್ರೀ ವಿವರಿಸಿದರು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಆರೋಗ್ಯ ಇಲಾಖೆಯ ಉಗ್ರಾಣ ಪ್ರಬಾರಕ ಬಸವರಾಜು, ಸಹ ಪ್ರಬಾರಕಿ ರುದ್ರಾಂಬಿಕೆ, ಇಲಾಖೆಯ ಸಿಬ್ಬಂದಿಗಳಾದ ಬಿ.ನಟರಾಜು, ಪುಷ್ಪ, ಚಂದ್ರಶೇಖರ ಮೊದಲಾದವರಿದ್ದರು.